ಆತ್ಮರಕ್ಷಣೆಗೆ ಕುರಿಗಾಹಿಗಳಿಗೆ ಬಂದೂಕು ತರಬೇತಿ ಅವಶ್ಯ:ಜಿಲ್ಲಾಧಿಕಾರಿ

| Published : Apr 08 2025, 12:32 AM IST

ಆತ್ಮರಕ್ಷಣೆಗೆ ಕುರಿಗಾಹಿಗಳಿಗೆ ಬಂದೂಕು ತರಬೇತಿ ಅವಶ್ಯ:ಜಿಲ್ಲಾಧಿಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕಠಿಣ ಸವಾಲಿನ ಜೀವನಶೈಲಿ ಹೊಂದಿರುವ ಕುರಿಗಾಹಿಗಳಿಗೆ ಆತ್ಮರಕ್ಷಣೆಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಠಿಣ ಸವಾಲಿನ ಜೀವನಶೈಲಿ ಹೊಂದಿರುವ ಕುರಿಗಾಹಿಗಳಿಗೆ ಆತ್ಮರಕ್ಷಣೆಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.

ನವನಗರದ ಪೊಲೀಸ್ ಮಂಗಲ ಭವನದಲ್ಲಿ ಕುರಿಗಾಹಿಗಳಿಗಾಗಿ ಆಯೋಜಿಸಿದ್ದ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಮಳೆ, ಬಿಸಿಲು, ಗುಡ್ಡಗಾಡು ಪ್ರದೇಶಗಳಲ್ಲಿ ಒಬ್ಬಂಟಿಯಾಗಿ ತಮ್ಮ ಕುರಿಗಳನ್ನು ಮೇಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುರಿಗಾಹಿಗಳು ಮತ್ತು ಅವರ ಕುರಿಗಳ ರಕ್ಷಣೆಗೆ ಸಹಾಯವಾಗುವಂತೆ ವಿಶೇಷ ಬಂದೂಕು ತರಬೇತಿ ಶಿಬಿರ ಆಯೋಜಿಸಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕುರಿಗಾಹಿಗಳು ತಮ್ಮ ಕುರಿಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ಮೇಯಿಸಲು ಹೋಗುವ ಸಂದರ್ಭದಲ್ಲಿ ಅವರ ರಕ್ಷಣೆಗಾಗಿ ಬಂದೂಕು ತರಬೇತಿ ನೀಡಲಾಗುತ್ತಿದೆ. ತರಬೇತಿಯಲ್ಲಿ ಏಕಾಗ್ರತೆಯಿಂದ ಪಾಲ್ಗೊಂಡು, ಉತ್ತೀರ್ಣರಾಗಿ ಬಂದೂಕು ಪರವಾನಗಿ ಪಡೆಯಬೇಕೆಂದರು.ಬಂದೂಕು ಜತೆ ನಡವಳಿಕೆಯಲ್ಲಿ ಅತ್ಯಂತ ಸೂಕ್ಷ್ಮತೆ ಅಗತ್ಯವಾಗಿದೆ. ಬಂದೂಕು ಭಾವನೆ ರಹಿತವಾಗಿದೆ, ಅದು ಜೀವಕ್ಕೆ ಅಪಾಯ ತರಬಲ್ಲದು. ಬಂದೂಕನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಫೋಟೋಗೆ ಇಲ್ಲವೆ ಪ್ರದರ್ಶನಕ್ಕಾಗಿ ಸ್ನೇಹಿತರಿಗೆ ಕೊಡಬಾರದು ಎಂದು ಎಚ್ಚರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾತನಾಡಿ, ಏಪ್ರಿಲ್ 13ರವರೆಗೆ ನಡೆಯುತ್ತಿರುವ ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ಕುರಿಗಾಹಿಗಳು ಭಾಗವಹಿಸಿದ್ದಾರೆ. ಶಿಬಿರದಲ್ಲಿ ಗುರಿ ನಿಖರವಾಗಿ ಹೇಗೆ ಇಡಬೇಕು, ಬಂದೂಕು ಹಸ್ತಾಂತರಿಸುವ ವಿಧಾನ, ಕಾನೂನು ನಿಯಮಗಳು ಮತ್ತು ಶಿಸ್ತು ಕುರಿತು ತರಬೇತಿ ನೀಡಲಾಗುತ್ತಿದೆ. ತರಬೇತಿಯ ನಂತರ ಕಾಡು ಪ್ರಾಣಿಗಳಿಗೆ ಯಾವುದೇ ರೀತಿಯ ತೊಂದರೆ ನೀಡಬಾರದು. ದುರುಪಯೋಗ ಪಡಿಸಿಕೊಂಡರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುರು ಎಂದವರು ಹೇಳಿದರು.

ಶಿಬಿರದಲ್ಲಿ ಮೂರು ಮಹಿಳೆಯರು ಸಹ ಭಾಗವಹಿಸಿದ್ದು, ತೇರದಾಳ ತಾಲೂಕಿನ ಸಸಲಾಟ್ಟಿ ಗ್ರಾಮದ ಸಾಕ್ಷಿ ಎಂಬ ಯುವತಿ ಗಮನ ಸೆಳೆಯುತ್ತಿದ್ದಾಳೆ.

ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ, ಕಾಶಿನಾಥ್ ಹುಡೇದ, ಹಾಲುಮತ ಸಮಾಜದ ರಾಜ್ಯ ಕಾರ್ಯದರ್ಶಿ ಸುವರ್ಣ, ತರಬೇತಿದಾರರು ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿಗೆ ಮನವಿ:

ತರಬೇತಿಗೆ ಬಂದಂತಹ ಕುರಿಗಾಹಿಗಳು, ಸೋಲಾರ್ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ, ಅರಣ್ಯ ಪ್ರದೇಶಗಳಲ್ಲಿ ಕುರಿ ಮೇಯಲು ಮೀಸಲು ಅನುಮತಿ, ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ, ಸುರಕ್ಷಿತ ಪರಿಸರ ಹಾಗೂ ಕುರಿಗಾಯಿಗಳ ಹಕ್ಕುಗಳಿಗೆ ರಕ್ಷಣೆ ನೀಡುವ ಕಾಯ್ದೆ ರೂಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಅವರಿಗೆ ಸಲ್ಲಿಸಿದರು.