ಸಾರಾಂಶ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಅರಕಲಗೂಡು ರಸ್ತೆಯ ಅಗ್ನಿಶಾಮಕ ಠಾಣೆ ಸಮೀಪವಿರುವ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲಾಗಿದ್ದು, ಪಟ್ಟಣದಿಂದ ಒಂದು ಕಿ.ಮೀ.ಗೂ ಹೆಚ್ಚು ದೂರವಿರುವ ಪಟಾಕಿ ಅಂಗಡಿಗಳಲ್ಲಿ ಗ್ರಾಹಕರಿಲ್ಲದೇ ವ್ಯಾಪಾರ ಕುಸಿದಿದೆ.
ಪಟ್ಟಣದ ಒಳಗೆ ಸಾಗಿರುವ ಹೇಮಾವತಿ ನಾಲೆಗೆ ಕವರ್‌ಡೆಕ್ ಅಳವಡಿಸಿದ ನಂತರ ರಸ್ತೆಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿದ್ದ ವರ್ತಕರನ್ನು ಪುರಸಭೆ ಆಡಳಿತವೂ ಕವರ್‌ಡೆಕ್ ಮೇಲೆ ತರಕಾರಿ ಮಾರುಕಟ್ಟೆಗೆ ಮಳಿಗೆಗಳನ್ನು ನಿರ್ಮಿಸಿ, ನಂತರ ತರಕಾರಿ ವ್ಯಾಪಾರ ವಹಿವಾಟಿಗೆ ಅವಕಾಶ ಕಲ್ಪಿಸಲಾಯಿತು. ಪಟ್ಟಣದ ಅರಕಲಗೂಡು ರಸ್ತೆಯ ಅಗ್ನಿಶಾಮಕ ಠಾಣೆ ಸಮೀಪ ನಿರ್ಮಿಸಿರುವ ಎಪಿಎಂಸಿ ಮಾರುಕಟ್ಟೆಗೆ ೨೦೨೩ರ ವಿಧಾನಸಭೆ ಚುನಾವಣೆಗೂ ಮುನ್ನ ತರಕಾರಿ ಮಾರುಕಟ್ಟೆಯ ಸ್ಥಳಾಂತರ ಮಾಡಲಾಗುತ್ತದೆ ಎಂಬ ಮಾತು ಮುನ್ನಲೆಗೆ ಬಂದಿತ್ತು. ನಂತರದ ದಿನಗಳಲ್ಲಿ ಸ್ಥಳಾಂತರದ ವಿಷಯ ತಣ್ಣಗಾಯಿತು.ಪಟ್ಟಣದ ಬಯಲು ರಂಗಮಂದಿರ ಆವರಣದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ತೆರೆಯಲಾಗುತ್ತಿತ್ತು. ಆದರೆ ನವೆಂಬರ್ ಒಂದರಂದು ಕನ್ನಡ ರಾಜ್ಯೋತ್ಸವ ಅಂಗವಾಗಿ ನಡೆಯುವ ವೈಭವದ ಸಂಭ್ರಮಾಚಾರಣೆ ಸಲುವಾಗಿ ಪಟಾಕಿ ಅಂಗಡಿಗಳನ್ನು ಎಪಿಎಂಸಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ನಿರುಪಯುಕ್ತವಾಗಿರುವ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಮಾರುಕಟ್ಟೆ ಸ್ಥಳಾಂತರಿಸುವ ಸಲುವಾಗಿ ಸಿಕ್ಕ ಅವಕಾಶವನ್ನು ಬಳಸಿಕೊಂಡು ಪರೀಕ್ಷಾರ್ಥವಾಗಿ ಪಟಾಕಿ ಅಂಗಡಿಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದ್ದು, ತರಕಾರಿ ಮಾರುಕಟ್ಟೆಯ ವರ್ತಕರ ಆತಂಕಕ್ಕೆ ಕಾರಣವಾಗಿದೆ.