ದುಷ್ಕರ್ಮಿಗಳ ಮೇಲೆ ಫೈರಿಂಗ್‌: ಅಪಹರಣ ಕೇಸು ಸುಖಾಂತ್ಯ

| Published : Oct 26 2024, 12:48 AM IST

ಸಾರಾಂಶ

ಅಥಣಿ: ತಾಲೂಕಿನ ಕೋಹಳ್ಳಿ ಗ್ರಾಮ ವಿಕ್ರಮಪುರ ಬಡಾವಣೆಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಣ ಮಾಡಿ ಮಹಾರಾಷ್ಟ್ರಕ್ಕೆ ಪರಾರಿಯಾಗುತ್ತಿದ್ದ ಅಪಹರಣಕಾರರ ಮೇಲೆ ಪೊಲೀಸರು ಫೈರಿಂಗ್ ಮಾಡಿ ಮೂವರನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಅಥಣಿ/ಬೆಳಗಾವಿ

ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮ ವಿಕ್ರಮಪುರ ಬಡಾವಣೆಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಣ ಮಾಡಿ ಮಹಾರಾಷ್ಟ್ರಕ್ಕೆ ಪರಾರಿಯಾಗುತ್ತಿದ್ದ ಅಪಹರಣಕಾರರ ಮೇಲೆ ಪೊಲೀಸರು ಫೈರಿಂಗ್ ಮಾಡಿ ಮೂವರನ್ನು ಬಂಧಿಸಿದ ಘಟನೆ ಶುಕ್ರವಾರ ನಡೆದಿದೆ. ಮಕ್ಕಳು ಅಪಹರಣವಾಗಿ ಕೇವಲ 10 ಗಂಟೆಗಳಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿ, ಪ್ರಕರಣ ಸುಖಾಂತ್ಯವಾಗುವಂತೆ ಮಾಡಿದ್ದು, ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ರವಿಕಿರಣ ಕಮಲಾಕರ, ಮಹಾರಾಷ್ಟ್ರದ ಕೊಲ್ಲಾಪೂರ ಮೂಲದ ಸಾಂಭಾ ಕಾಂಬ್ಳೆ, ಬಿಹಾರ ಮೂಲದ ಶಾರುಖ ಶೇಖ್ ಬಂಧಿತರು. ಸ್ವಸ್ತಿ ವಿಜಯ ದೇಸಾಯಿ (4), ವಿಯೋಮ ವಿಜಯ ದೇಸಾಯಿ (3) ಸಹೋದರರನ್ನು ಮನೆಯಲ್ಲಿ ಯಾರೂ ಇಲ್ಲದ ವೇಳೆ ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮಕ್ಕಳನ್ನು ಅಪಹರಿಸಿದ್ದರು. ನಂತರ ತನಿಖೆ ಚುರುಕುಗೊಳಿಸಿದ ಪೊಲೀಸರು ಅಥಣಿ ತಾಲೂಕಿನ ಕೊಹಳ್ಳಿ ಗ್ರಾಮದ ಹೊರವಲಯದ ಸಿಂಧೂರ ಗ್ರಾಮದ ಬಳಿ ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸುತ್ತಿದ್ದರು. ಆಗ ಆರೋಪಿಗಳು ಅಥಣಿ ಠಾಣೆಯ ಇಬ್ಬರು ಪೊಲೀಸ್ ಕಾನ್‌ಸ್ಟೇಬಲ್‌ ಮತ್ತು ಪಿಎಸ್‌ಐ ಗಿರಿಮಲ್ಲಪ್ಪ ಉಪ್ಪಾರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಕಲ್ಲು ತೂರಾಟ ಮಾಡಿ ಪೊಲೀಸ್ ವಾಹನವನ್ನು ಜಖಂಗೊಳಿಸಿದ್ದಾರೆ. ಪೊಲೀಸ್‌ ಅಧಿಕಾರಿ ತಮ್ಮ ಹಾಗೂ ಸಿಬ್ಬಂದಿ ರಕ್ಷಣೆಗಾಗಿ ಆರೋಪಿ ಸಾಂಬಾ ಕಾಂಬಳೆ ಕಾಲಿಗೆ ಫೈರಿಂಗ್‌ ಮಾಡಿದ್ದಾರೆ. ಪೊಲೀಸರು ಮಕ್ಕಳನ್ನು ರಕ್ಷಣೆ ಮಾಡಿ ಪೋಷಕರಿಗೆ ಒಪ್ಪಿಸಿದ್ದಾರೆ.

ಗುಂಡೇಟಿನಿಂದ ಗಾಯಗೊಂಡ ಆರೋಪಿ ಸಂಭಾಜಿ ರಾವಸಾಬ ಕಾಂಬಳೆ ಎಂಬಾತನನ್ನು ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್‌ ಸಿಬ್ಬಂದಿ ಜಮೀರ್‌ ಡಾಂಗೆ ಹಾಗೂ ರಮೇಶ ಹಾದಿಮನಿ ಸಹ ಗಾಯಗೊಂಡಿದ್ದು, ಅಥಣಿ ಸಮುದಾಯ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದಾರೆ.

ಆರೋಪಿಗಳು ಸಿಕ್ಕಿಬಿದ್ದಿದ್ದಾರೂ ಹೇಗೆ?:

ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಇಬ್ಬರು ಮಕ್ಕಳ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿಗೆ ಗುಂಡೇಟು ತಿಂದು ಗಾಯಗೊಂಡಿರುವ ಗಾಯಾಳು ಆರೋಪಿ, ಇಬ್ಬರು ಪೊಲೀಸ್ ಸಿಬ್ಬಂದಿಯ ಆರೋಗ್ಯ ವಿಚಾರಿಸಲು ಬೆಳಗಾವಿ ಜಿಲ್ಲಾಸ್ಪತ್ರೆಗೆ ಎಸ್‌ಪಿ ಭೀಮಾಶಂಕರ ಗುಳೇದ್ ಭೇಟಿ ನೀಡಿದ್ದರು.

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಎಸ್‌ಪಿ ಡಾ.ಭೀಮಾಶಂಕರ ಗುಳೇದ್, ಗುರುವಾರ ಅಥಣಿಯಲ್ಲಿ ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಅಪಹರಿಸಿದ ಪ್ರಕರಣ ವರದಿಯಾಗಿತ್ತು. ತಕ್ಷಣವೇ ಅಥಣಿ ಪೊಲೀಸರು ಸ್ಥಳಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ. ಇಬ್ಬರು ದುಷ್ಕರ್ಮಿಗಳು ಮಕ್ಕಳನ್ನು ಸ್ವಿಫ್ಟ್ ಡಿಸೈರ್ ಕಾರಿನಿಂದ ಕೆಳಗೆ ಇಳಿದು ಅಪಹರಿಸಿದ್ದರು. ಕಾರಿನಲ್ಲಿ ಮತ್ತೋರ್ವ ವ್ಯಕ್ತಿ ಇದ್ದ, ಮೂವರು ಸೇರಿ ಅಪಹರಿಸಿದ ಬಗ್ಗೆ ತಿಳಿದು ಕೂಡಲೇ ತನಿಖೆ ಆರಂಭಿಸಲಾಯಿತು ಎಂದರು.

ಮಕ್ಕಳ ಅಪಹರಣವಾದ ಎರಡು ಗಂಟೆಗಳ ಮೇಲೆ ಅಪಹರಣವಾದ ಮಕ್ಕಳ ತಂದೆಯ ಮೊಬೈಲ್‌ಗೆ ಕರೆ ಬರುತ್ತದೆ. ₹7 ಕೋಟಿ ಹಣ ಕೊಡದಿದ್ದರೆ ನಾವೇನು ಮಾಡುತ್ತೇವೆ ನೋಡು ಎಂದು ಬೆದರಿಕೆ ಹಾಕುತ್ತಾರೆ. ನಂತರ ಆರೋಪಿಗಳು ಕರೆ ಮಾಡಿದ ಮೊಬೈಲ್ ಸ್ವಿಚ್ಡ್‌ ಆಫ್ ಮಾಡಿದ್ದಾರೆ. ಇದಕ್ಕೂ ಮೊದಲು ಸಿಸಿ ಕ್ಯಾಮೆರಾದಲ್ಲಿ ಆರೋಪಿಗಳ ಮುಖಚರ್ಯೆ ಗುರುತು ಹಿಡಿದು ತೋರಿಸಿದಾಗ ಮಕ್ಕಳ ತಂದೆ ಆರೋಪಿಗಳು ತಮಗೆ ಪರಿಚಯಿಸ್ಥರು ಎಂದು ಹೇಳಿದ್ದಾರೆ. ನಂತರ ಇದು ನಮಗೆ ಸಹಾಯಕವಾಗಿದೆ.

ಆರೋಪಿಗಳು ಕರೆ ಮಾಡಿದ ಮೊಬೈಲ್‌ ಅನ್ನು ತಕ್ಷಣ ಸ್ವಿಚ್ಡ್‌ ಆಫ್‌ ಮಾಡಿದ್ದಾರೆ. ನಂತರ ಆಧುನಿಕ ತಂತ್ರಜ್ಞಾನ ಬಳಸಿ ಆರೋಪಿ ಬಂಧಿಸಲು ಜಾಲ ಬೀಸಿದ್ದೇವೆ. ಆರೋಪಿಗಳು ಮಹಾರಾಷ್ಟ್ರಕ್ಕೆ ಪರಾರಿಯಾಗಲು ಯತ್ನಿಸುವ ಅನುಮಾನ ಬಂತು. ಅದರಂತೆ ಮಹಾರಾಷ್ಟ್ರದಲ್ಲಿ ಎಲೆಕ್ಷನ್ ಹಿನ್ನೆಲೆ ಚೆಕ್‌ಪೋಸ್ಟ್ ಸ್ಥಾಪಿಸಿದ್ದರಿಂದ ಅಲ್ಲಿಯೂ ನಾವು ಮಾಹಿತಿ ಕಳಿಸಿದ್ದೆವು. ನಮ್ಮ ರಾಜ್ಯದ ಬೇರೆ ಬೇರೆ ಕಡೆ ಆರೋಪಿಗಳು ಕಾರನ್ನು ಚಾಲನೆ ಮಾಡಿರುವುದು ಕೂಡ ಗೊತ್ತಾಗಿದೆ. ತಾಂತ್ರಿಕ ಸಾಕ್ಷ್ಯಾಧಾರದಿಂದ ಆರೋಪಿಗಳು ಯಾವ ಕಡೆ ಹೋಗುತ್ತಿದ್ದಾರೆ ಎಂಬ ಮಾಹಿತಿ ಸಿಗುತ್ತದೆ ಎಂದು ವಿವರಿಸಿದರು.

ಶುಕ್ರವಾರ ಬೆಳಗ್ಗೆ ಐದು ಗಂಟೆ ಸುಮಾರಿಗೆ ಕಾರಿಗೆ ಅಡ್ಡ ಹಾಕಿ ಬಂಧಿಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ಮಾಡುತ್ತಾರೆ. ಆರೋಪಿಗಳ ಹಲ್ಲೆಯಿಂದ ಇಬ್ಬರು ಪೊಲೀಸರಿಗೆ ಗಾಯವಾಗಿದೆ. ಮಾಹಿತಿ ಸಿಕ್ಕ ತಕ್ಷಣ ಅಥಣಿ ಪಿಎಸ್ಐ ನೇತೃತ್ವದಲ್ಲಿ ಮತ್ತೊಂದು ಟೀಂ ಬರುತ್ತಿತ್ತು. ಸ್ವಯಂರಕ್ಷಣೆಗೆ ಮೊದಲು ಒಂದು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಅದು ಆರೋಪಿ ಸಂಭಾಜಿ ಕಾಂಬಳೆ ಕಾಲಿಗೆ ತಾಗಿದೆ. ಕಾರು ಪರಿಶೀಲನೆ ಮಾಡಿದಾಗ ಮಕ್ಕಳು ಸುರಕ್ಷಿತವಾಗಿರುದನ್ನು ಖಚಿತಪಡಿಸಿಕೊಂಡ ಮೇಲೆ ಮಕ್ಕಳು ಸೇರಿದಂತೆ ಇತರರನ್ನು ಆಸ್ಪತ್ರೆಗೆ ಕಳಿಸಿದ್ದೇವೆ. ಮಕ್ಕಳನ್ನು ತಂದೆ ತಾಯಿ ವಶಕ್ಕೆ ಒಪ್ಪಿಸಿ ಮೂವರು ಆರೋಪಿಗಳು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಅಪಹರಣಕ್ಕೊಳಗಾದ ಮಕ್ಕಳ ತಂದೆ ಆನ್‌ಲೈನ್ ಟ್ರೇಡಿಂಗ್ ಮಾಡುತ್ತಿದ್ದರು. ಆರೋಪಿ ರವಿಕಿರಣ್ ಸುಮಾರು ₹7 ಕೋಟಿ ದುಡ್ಡು ಹೂಡಿಕೆ ಮಾಡಿ ಲಾಸ್ ಆಗಿತ್ತು. ಆ ಹಣ ವಾಪಸ್ ನೀಡುವಂತೆ ಬೆದರಿಸಲು ಮಕ್ಕಳ ಅಪಹರಣ ಮಾಡಿದ್ದರು. ಆರೋಪಿ ರವಿಕಿರಣ್ ವಿರುದ್ಧ ವಿವಿಧೆಡೆ ಐದು ಪ್ರಕರಣಗಳು ದಾಖಲಾಗಿವೆ. ಹಣದ ವ್ಯವಹಾರ ಕಾರಣ ಮಕ್ಕಳ ಅಪಹರಣ ಮಾಡಲಾಗಿತ್ತು. ಅಥಣಿ ಪೊಲೀಸರು ಚಾಕಚಕ್ಯತೆಯಿಂದ ಪ್ರಕರಣ ಬೇಧಿಸಿದ್ದಾರೆ. ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಉದ್ದೇಶ ಆಗಿತ್ತು. ನಮಗೆ ಇವರು ಸಿಕ್ಕಿದ್ದು ಐಗಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಮಹಾರಾಷ್ಟ್ರ ಗಡಿ ದಾಟಲು ತಯಾರಿ ನಡೆಸಿದ್ದರು. ಪ್ರಾಥಮಿಕವಾಗಿ ಒಟ್ಟು ಮೂವರು ಭಾಗಿಯಾಗಿದ್ದಾರೆ. ಮತ್ತೆ ಯಾರಾದರೂ ಇದ್ದಾರೆಯೇ ಎಂಬುದರ ತನಿಖೆ ಮಾಡುತ್ತೇವೆ.

ತಾವು ಹೂಡಿಕೆ ಮಾಡಿದ ಹಣ ವಾಪಸ್ ಪಡೆಯುವುದು ಅವರ ಮೂಲ ಉದ್ದೇಶವಾಗಿತ್ತು ಎಂದ ಅವರು, ಈ ಹಿಂದೆಯೂ ಅಪಹರಣಕ್ಕೊಳಗಾದ ತಂದೆಯನ್ನು ಗೋವಾದಲ್ಲಿ ಅಪಹರಿಸಿದ್ದ ಪ್ರಕರಣ ದಾಖಲಾಗಿತ್ತು. ಗೋವಾದಲ್ಲಿ ಅಪಹರಣ ಕೇಸ್ ದಾಖಲಾಗಿ, ಚಾರ್ಜ್‌ಶೀಟ್ ಸಹ ಸಲ್ಲಿಕೆಯಾಗಿದೆ ಎಂದರು.ಮಕ್ಕಳನ್ನು ಅಪಹರಿಸಿಕೊಂಡು ಹೋಗುತ್ತಿದ್ದ ಆರೋಪಿಗಳ ಮೇಲೆ ಅಥಣಿ ಪೊಲೀಸರು ಗುಂಡು ಹಾರಿಸಿದ್ದಾರೆ. ಈ ವೇಳೆ ಆರೋಪಿ ಸಂಭಾಜಿ ರಾವಸಾಬ ಕಾಂಬಳೆ ಎಡಗಾಲಿಗೆ ಗುಂಡು ತಗುಲಿದ್ದು, ಈತ ಸೇರಿ ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

- ಭೀಮಾಶಂಕರ ಗುಳೇದ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಇಬ್ಬರು ಮಕ್ಕಳನ್ನು ಅಪಹರಿಸಿದ ದುಷ್ಕರ್ಮಿಗಳನ್ನು ಕೆಲವೇ ಗಂಟೆಗಳಲ್ಲಿ ಹಿಡಿಯುವ ಮೂಲಕ ಅಥಣಿ ಪೊಲೀಸ್ ಅಧಿಕಾರಿಗಳು ಉತ್ತಮ ಕಾರ್ಯಾಚರಣೆ ಮಾಡಿದ್ದಾರೆ. ಆರೋಪಿಗಳು ಮತ್ತು ಪೊಲೀಸರ ಮಧ್ಯೆ ಘರ್ಷಣೆಯಾಗಿದ್ದು, ಆತ್ಮ ರಕ್ಷಣೆಗಾಗಿ ಫೈರಿಂಗ್ ಮಾಡುವ ಮೂಲಕ ಆರೋಪಿಗಳನ್ನು ಬಂಧಿಸಿ, ಮಕ್ಕಳನ್ನು ಸುರಕ್ಷಿತವಾಗಿ ಕರೆತಂದಿರುವ ಅಧಿಕಾರಿಗಳ ಈ ಕಾರ್ಯವನ್ನು ಮೆಚ್ಚುವಂತಹದ್ದು. ಮುಂಬರುವ ದಿನಗಳಲ್ಲಿ ಬಹುದಿನಗಳ ಬೇಡಿಕೆಯಾಗಿರುವ ಅಥಣಿ ಗ್ರಾಮೀಣ ಪೊಲೀಸ್ ಠಾಣೆಯನ್ನು ಮಂಜೂರು ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

- ಲಕ್ಷ್ಮಣ ಸವದಿ, ಶಾಸಕ, ಮಾಜಿ ಡಿಸಿಎಂ