ಸಾರಾಂಶ
ರಾಮನಗರ: ಪ್ರಥಮ ಚಿಕಿತ್ಸೆ ಕುರಿತ ಕೌಶಲ್ಯಗಳ ಅರಿವು ಸರ್ಕಾರಿ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು, ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರಿಗೂ ಅಗತ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ವಿ. ರೇಣುಕಾ ಹೇಳಿದರು.
ನಗರದ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯಾಂಗ, ಜಿಲ್ಲಾ ವಕೀಲರ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಸಮಿತಿಗಳ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಥಮ ಚಿಕಿತ್ಸಾ ಕಿಟ್ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ದೈನಂದಿನ ವ್ಯವಹಾರಿಕ ಜೀವನದಲ್ಲಿ ರಸ್ತೆಯಲ್ಲಿ ಸಂಚರಿಸುವ ಯಾವುದೇ ವ್ಯಕ್ತಿ ಕುಸಿದುಬಿದ್ದ ತುರ್ತು ಸಂದರ್ಭದಲ್ಲಿ ಆ್ಯಂಬುಲೆನ್ಸ್ ದೊರಕದಿರಬಹುದು. ಯಾವುದೇ ಉಪಕರಣವಿಲ್ಲದೇ ಸ್ಥಳದಲ್ಲಿಯೇ ವ್ಯಕ್ತಿಯ ಜೀವ ರಕ್ಷಣೆಗಾಗಿ ಪ್ರಥಮ ಚಿಕಿತ್ಸೆ ನೀಡಲು ಎಲ್ಲರೂ ಸ್ವಯಂ ಸಿದ್ಧರಾಗಿರಬೇಕು. ಅದಕ್ಕಾಗಿ ಪ್ರಥಮ ಚಿಕಿತ್ಸೆಯ ಕೌಶಲ್ಯ ವಿಧಾನಗಳನ್ನು ಪ್ರತಿಯೊಬ್ಬರು ತಿಳಿದಿರಬೇಕು. ಪ್ರಥಮ ಚಿಕಿತ್ಸೆಯ ಬಗ್ಗೆ ಯುವಜನತೆ ಹೆಚ್ಚಿನ ಜಾಗೃತಿ ಹೊಂದಬೇಕು ಎಂದು ತಿಳಿಸಿದರು.
ಎಲ್ಲರೂ ಪ್ರಥಮ ಚಿಕಿತ್ಸೆ ಕೌಶಲ್ಯಗಳನ್ನು ಅರಿತಿದ್ದರೆ ಮುಂದಿನ ದಿನಗಳಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಎಲ್ಲರೂ ಜನರ ಪ್ರಾಣ ಉಳಿಸುವಲ್ಲಿ ಪ್ರಥಮ ಚಿಕಿತ್ಸೆಯ ಪ್ರಾಮುಖ್ಯತೆಯನ್ನು ಮನಗಾಣಬೇಕು. ತುರ್ತು ಸಂದರ್ಭಗಳು, ಕಠಿಣ ಸನ್ನಿವೇಶಗಳು ಸೇರಿದಂತೆ ಮಾನವನಿಗೆ ಅಗತ್ಯವೆನಿಸಿದ ಸಂದರ್ಭಗಳಲ್ಲಿ ನೆರವು ನೀಡುವ ರೆಡ್‌ಕ್ರಾಸ್ ಸಂಸ್ಥೆಯಂತೆ ಸೇವಾ ಮನೋಭಾವವನ್ನು ಬೆಳಸಿಕೊಳ್ಳಬೇಕು. ತುರ್ತು ಪರಿಸ್ಥಿತಿಗಳಲ್ಲಿ ಸಹಾಯ ಮಾಡುವುದು, ಗಾಯಗೊಂಡವರಿಗೆ ಚಿಕಿತ್ಸೆ ನೀಡುವುದು ಮತ್ತು ಬಡವರಿಗೆ ಆರೋಗ್ಯ ಸೇವೆ ಒದಗಿಸುವುದು ರೆಡ್ ಕ್ರಾಸ್‌ನ ಮುಖ್ಯ ಉದ್ದೇಶ ಎಂದು ಹೇಳಿದರು.ಸೇವಾ ಮನೋಭಾವನೆಯ ರೆಡ್‌ಕ್ರಾಸ್ ಸಂಸ್ಥೆಯೊಂದಿಗೆ ನಾವು ಸಹ ಕೈ ಜೋಡಿಸಬೇಕು. ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ತಕ್ಷಣಕ್ಕೆ ಆರೋಗ್ಯದ ಸಮಸ್ಯೆ ಉಂಟಾಗುವ ಸಂದರ್ಭದಲ್ಲಿ ಮನೆಯಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿಕೊಳ್ಳಲು ಪ್ರಥಮ ಚಿಕಿತ್ಸಾ ಕಿಟ್‌ಗಳನ್ನು ರೆಡ್‌ಕ್ರಾಸ್ ಸಂಸ್ಥೆಯವರು ವಿತರಿಸುತ್ತಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ರೇಣುಕಾ ತಿಳಿಸಿದರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಸಭಾಪತಿ ಬಸರೂರ್ ರಾಜೀವ್ ಶೆಟ್ಟಿ ಮಾತನಾಡಿ, ಪ್ರಥಮ ಚಿಕಿತ್ಸೆ ಕಿಟ್‌ಗಳ ಮಹತ್ವವನ್ನು ಎಲ್ಲರೂ ತಿಳಿದುಕೊಳ್ಳಬೇಕು. ಕಿಟ್ ಗಳನ್ನು ಮನೆಯಲ್ಲಿ ತೆಗೆದುಕೊಂಡು ಹೋಗಿ ಸುಮ್ಮನೆ ಇಟ್ಟುಕೊಳ್ಳದೆ, ಅವಶ್ಯಕ ಸಂದರ್ಭಗಳಲ್ಲಿ ಬಳಸಬೇಕು ಎಂದು ತಿಳಿಸಿದರು.ರೆಡ್ ಕ್ರಾಸ್ ಸಂಸ್ಥೆ 189 ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ನಾಲ್ಕು ಬಾರಿ ನೊಬಲ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಎಲ್ಲರೂ ರಕ್ತದಾನದ ಮಹತ್ವದ ಬಗ್ಗೆ ತಿಳಿದುಕೊಳ್ಳಬೇಕು. ರಕ್ತದಲ್ಲಿ ಯಾವುದೇ ಜಾತಿ, ಧರ್ಮ ಇಲ್ಲ. ಎಲ್ಲರೂ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಹೇಳಿದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸವಿತ.ಪಿ.ಆರ್., ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಮಹೇಶ್.ಬಿ.ಟಿ, ಪ್ರಧಾನ ಸಿವಿಲ್ ನ್ಯಾಯಾಧೀಶ ಅವಿನಾಶ್ ಚಿಂದು, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಪುಟ್ಟರಾಜು, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಸಭಾಪತಿ ಎಚ್.ವಿ. ಶೇಷಾದ್ರಿ ಅಯ್ಯರ್, ಉಪಸಭಾಪತಿ ವಿ. ಬಾಲಕೃಷ್ಣ, ಕಾರ್ಯದರ್ಶಿ ಎಸ್. ರುದ್ರೇಶ್ವರ, ಖಜಾಂಚಿ ಎಂ. ಪರಮಶಿವಯ್ಯ, ಜಿಲ್ಲಾ ವಕೀಲರ ಸಂಘದ ಉಪಾದ್ಯಕ್ಷ ವಿ. ಚಂದ್ರಶೇಖರ್, ಕಾರ್ಯದರ್ಶಿ ಎಸ್. ತಿಮ್ಮೇಗೌಡ, ಖಜಾಂಚಿ ಆರ್.ಸಿ. ಮಂಜೇಗೌಡ ಉಪಸ್ಥಿತರಿದ್ದರು.19ಕೆಆರ್ ಎಂಎನ್ 8.ಜೆಪಿಜಿ
ರಾಮನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸಭಾಂಗಣದಲ್ಲಿ ಪ್ರಥಮ ಚಿಕಿತ್ಸಾ ಕಿಟ್ ಗಳನ್ನು ವಿತರಿಸಲಾಯಿತು.