ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ(ಎಎಸ್‌ಎಂ) ಹೃದಯಶ್ವಾಸಕೋಶದ ಪುನರ್ಜೀವನ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಹೃದಯ ಸ್ತಂಭನದ ಗುಣಲಕ್ಷಣಗಳು, ತುರ್ತಾಗಿ ಮಾಡಬೇಕಾದ ಪ್ರಥಮ ಚಿಕಿತ್ಸೆ, ಜೀವಕ್ಕೆ ಅಪಾಯವಾಗದಂತೆ ತಕ್ಷಣವೇ ಮಾಡಬೇಕಾದ ಕಾರ್ಯಗಳು ಕುರಿತು ಬಳ್ಳಾರಿಯ ಬಿಎಂಸಿಆರ್‌ಸಿಯ ಅರವಳಿಕೆ ವಿಭಾಗದ ಮುಖ್ಯಸ್ಥ ಡಾ. ಬಾಲಭಾಸ್ಕರ್ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.ಹೃದಯಾಘಾತ ಹಾಗೂ ಹೃದಯ ಸ್ತಂಭನಕ್ಕೆ ನಮ್ಮ ಜೀವನಶೈಲಿಯೂ ಕಾರಣವಾಗಿದ್ದು, ಉತ್ತಮ ಜೀವನಶೈಲಿಯಿಂದ ಈ ರೋಗದಿಂದ ಪಾರಾಗಬಹುದು ಎಂದರು. ಹೃದಯಕ್ಕೆ ರಕ್ತದ ಸಂಚಾರ ಅಡಚಣೆಯಾಗುತ್ತಿದ್ದಂತೆಯೇ ಹೃದಯ ಸಂಬಂಧಿ ಸಮಸ್ಯೆ ಉದ್ಭವಿಸುತ್ತದೆ. ಹೃದಯಾಘಾತ ಅಥವಾ ಹೃದಯಸ್ತಂಭನವು ವ್ಯಕ್ತಿಯ ಆರೋಗ್ಯದ ಮೇಲೆ ತೀವ್ರ ಮತ್ತು ದೀರ್ಘಕಾಲಿನ ಪರಿಣಾಮಗಳನ್ನ ಬೀರುವ ಸಾಧ್ಯತೆಗಳಿವೆ. ಹೃದಯಾಘಾತಕ್ಕಿಂತ ಹೃದಯಸ್ತಂಭನದ ವೇಳೆ ಅಪಾಯ ಹೆಚ್ಚಾಗಿರುತ್ತದೆ. ಹಠಾತ್ ಹೃದಯಸ್ತಂಭನದ ಬಳಿಕ ಹೃದಯಾಘಾತ ಸಂಭವಿಸಲಿದ್ದು, ಕೆಲವು ಪ್ರಥಮ ಚಿಕಿತ್ಸೆಗಳ ಮೂಲಕ ಹೃದಯಾಘಾತಗೊಂಡ ವ್ಯಕ್ತಿಯ ಜೀವ ಉಳಿಸಲು ಸಾಧ್ಯವಿದೆ. ಈ ಸಂದರ್ಭದಲ್ಲಿ ಪ್ರತಿಯೊಂದು ನಿಮಿಷವೂ ಹೆಚ್ಚು ಮುಖ್ಯ ಎನಿಸಿಕೊಳ್ಳುತ್ತದೆ ಎಂದು ತಿಳಿಸಿದರು.
ಶಸ್ತ್ರಚಿಕಿತ್ಸಕ ಡಾ. ದಿವಾಕರ ಗಡ್ಡಿ ಹಾಗೂ ವೈದ್ಯ ಡಾ. ಶೇಖಪ್ಪ ಹೃದಯಾಘಾತ ಸಂದರ್ಭದಲ್ಲಿ ಮಾಡಬೇಕಾದ ತುರ್ತು ಪ್ರಥಮ ಚಿಕಿತ್ಸೆ, ಹೃದಯದಲ್ಲಿ ರಕ್ತ ಹರಿಯುವಂತೆ ಮಾಡಲು ಸಿಪಿಆರ್ ಪ್ರಕ್ರಿಯೆ, ರೋಗಿಯ ಎದೆಯ ಮಧ್ಯಭಾಗವನ್ನು ವೇಗವಾಗಿ ಮತ್ತು ಬಲವಾಗಿ 100ರಿಂದ 120 ಬಾರಿ ಒತ್ತಿ ತಳ್ಳುವುದು ಸೇರಿದಂತೆ ವಿವಿಧ ಕ್ರಮಗಳ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವೀವಿ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಾಟೀಲ್ ಹೃದಯಾಘಾತ ವೇಳೆ ಕೈಗೊಳ್ಳುವ ತುರ್ತು ಪ್ರಥಮ ಚಿಕಿತ್ಸಾ ವಿಧಾನ ಕುರಿತು ತಿಳಿದುಕೊಳ್ಳುವುದರಿಂದಾಗುವ ಅನುಕೂಲಗಳು ಕುರಿತು ತಿಳಿಸಿಕೊಟ್ಟರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷೆ ಕ್ಯಾತ್ಯಾಯಿನಿ ವಿ.ಎಸ್. ಮರಿದೇವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ. ಜೋತ್ಸ್ನಾ ಹೃದಯ ಸ್ತಂಭನವಾದಾಗ ತೆಗೆದುಕೊಳ್ಳಬಹುದಾದ ಮುಂಜಾಗ್ರತೆ ಕ್ರಮಗಳ ಕುರಿತು ಅಣಕು ಪ್ರದರ್ಶನದ ಮೂಲಕ ತಿಳಿಸಿಕೊಟ್ಟರು. ಕಾಲೇಜಿನ ಪ್ರಾಂಶುಪಾಲ ಗೋವಿಂದರಾಜು, ಉಪನ್ಯಾಸಕಿ ಎಸ್.ಮಂಜುಳಾ ಹಾಗೂ ವಿದ್ಯಾರ್ಥಿನಿ ಧನಲಕ್ಷ್ಮಿ ಕಾರ್ಯಕ್ರಮ ನಿರ್ವಹಿಸಿದರು.
ಕಾಲೇಜಿನ ಬೋಧಕ ಹಾಗೂ ಭೋಧಕೇತರ ಸಿಬ್ಬಂದಿ ಮತ್ತು ಬಳ್ಳಾರಿ ಮೆಡಿಕಲ್ ಕಾಲೇಜಿನ ಸಂಶೋಧನಾ ಕೇಂದ್ರದ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ಹೃದಯಸ್ತಂಭನ ವೇಳೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.ಅಖಿಲ ಭಾರತ ಶಸ್ತ್ರ ಚಿಕಿತ್ಸಕರ ಸಂಘ ಬಳ್ಳಾರಿ ಜಿಲ್ಲಾ ಘಟಕ, ವೀರಶೈವ ವಿದ್ಯಾವರ್ಧಕ ಸಂಘ, ಅರವಳಿಕೆ ಶಾಸ್ತ್ರಜ್ಞರ ಸಂಘ, ಬಳ್ಳಾರಿ ಮೆಡಿಕಲ್ ಕಾಲೇಜು ಹಾಗೂ ಸಂಶೋಧನಾ ಕೇಂದ್ರ ವತಿಯಿಂದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.