ಸಾರಾಂಶ
- ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ । ಜಿಪಂ ಸಭಾಂಗಣದಲ್ಲಿ ದಿಶಾ ಸಮಿತಿ ಸಭೆ- - -
ಕನ್ನಡಪ್ರಭ ದಾವಣಗೆರೆರಸ್ತೆ ಅಪಘಾತಗಳು ಈಚಿನ ದಿನಗಳಲ್ಲಿ ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಮೂಡಿಸುವ ಜೊತೆಗೆ ಅಪಘಾತಕ್ಕೆ ಒಳಗಾದವರಿಗೆ ಗೋಲ್ಡನ್ ಅವರ್‌ನಲ್ಲಿ ಪ್ರಥಮ ಚಿಕಿತ್ಸೆ ಮೂಲಕ ಜೀವ ಉಳಿಸುವ ಕೆಲವೂ ಆಗಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ದಿಶಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಪಘಾತಕ್ಕೆ ಈಡಾದವರಿಗೆ ಗೋಲ್ಡನ್ ಅವರ್‌ನಲ್ಲಿಯೇ ಪ್ರಥಮಾದ್ಯತೆ ಮೇಲೆ ಪ್ರಥಮ ಚಿಕಿತ್ಸೆ ನೀಡದಿದ್ದರೆ ಚಿಕಿತ್ಸೆ ಫಲಕಾರಿಯಾಗದೇ, ಜೀವ ಕಳೆದುಕೊಳ್ಳುವ ಅಪಾಯವೇ ಹೆಚ್ಚು ಎಂದರು.ಬೀದಿದೀಪಗಳು ನಗರ, ಪಟ್ಟಣ ಪ್ರದೇಶದಲ್ಲಿ ಹಾಳಾಗಿವೆ. ಇದರಿಂದ ಶಾಲಾ ಮಕ್ಕಳಿಗೆ, ಮಹಿಳೆಯರು, ವೃದ್ಧರು, ಸಾರ್ವಜನಿಕರಿಗೆ ರಾತ್ರಿವೇಳೆ ಸಂಚರಿಸಲು ಭಯ ಕಾಡುವಂತಾಗಿದೆ. ಸಂಬಂಧಿಸಿದ ಅಧಿಕಾರಿಗಳು ಬೀದಿದೀಪಗಳನ್ನು ದುರಸ್ತಿಗೊಳಿಸಿ, ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 846 ಕಾಮಗಾರಿ ಗುರಿ ಹೊಂದಿದ್ದು, ಜೂನ್ ಅಂತ್ಯಕ್ಕೆ 676 ಕಾಮಗಾರಿ ಪೂರ್ಣಗೊಂಡು, 146 ಕಾಮಗಾರಿ ಪ್ರಗತಿಯಲ್ಲಿವೆ. ಇನ್ನುಳಿದ ಕಾಮಗಾರಿ ತ್ವರಿತವಾಗಿ ನಿಗದಿತ ಸಮಯದೊಳಗೆ ಪೂರ್ಣಗೊಳಿಸಿ, ಶುದ್ಧ ಹಾಗೂ ಸುಸ್ಥಿರ ನೀರು ಒದಗಿಸುವ ಕೆಲಸ ಅಧಿಕಾರಿಗಳಿಂದ ಆಗಬೇಕು ಎಂದು ತಾಕೀತು ಮಾಡಿದರು.
ಎನ್.ಆರ್.ಎಲ್.ಎಂ. ಯೋಜನೆಯಡಿ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸುತ್ತಿರುವ ಬೆಡ್‌ಶೀಟ್, ಬಟ್ಟೆ, ಫಿನಾಯಲ್, ಸಿರಿಧ್ಯಾನ ತಿಂಡಿ ತಿನಿಸು, ಬ್ಯಾಗ್, ಟೀ ಲೋಟ, ಚಟ್ನಿಪುಡಿ , ಉಪ್ಪಿನಕಾಯಿ, ಅಡುಗೆ ಪದಾರ್ಥ, ಕರಕುಶಲ ವಸ್ತು, ಆಟಿಕೆ ಗೊಂಬೆ ಇನ್ನಿತರೆ ಗೃಹೋಪಯೋಗಿ ವಸ್ತು ತಯಾರಿಸಲಾಗುತ್ತಿದೆ. ಅಂತಹವರಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿ ಆರ್ಥಿಕವಾಗಿ ಸಬಲೀಕರಣಗೊಳಿಸಬೇಕು ಎಂದರು.ಸರ್ಕಾರದ ಯಾವುದೇ ಸಭೆ, ಸಮಾರಂಭಗಳಿಗೆ ಎಸ್‌ಎಚ್‌ಜಿ ಸಂಘಗಳಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಿ, ಮಹಿಳಾ ಸ್ವ ಸಹಾಯ ಸಂಘ ಸಂಸ್ಥೆಗಳನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಜೊತೆಗೆ ಅವರ ಕಾಯಕಕ್ಕೆ ಮತ್ತಷ್ಟು ಉತ್ತೇಜನ ನೀಡಬೇಕು. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸಹ ಗಮನಹರಿಸಿ, ಮಹಿಳಾ ಸಂಘಗಳ ಉತ್ಪನ್ನಗಳಿಗೆ ಖರೀದಿಸುವ, ಮಾರುಕಟ್ಟೆಗೆ ಪ್ರೋತ್ಸಾಹಿಸುವ ಕೆಲಸವಾಗಲಿ ಎಂದು ಸೂಚಿಸಿದರು.
- - -(ಬಾಕ್ಸ್) * ತಾಯಿ-ಶಿಶು ಮರಣ ದರ ಶೂನ್ಯಕ್ಕೆ ತನ್ನಿ
ದಾವಣಗೆರೆ ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ತಡೆಗೆ ಅನೇಕ ಕ್ರಮ ಕೈಗೊಂಡ ಪರಿಣಾಮ ಸಾಕಷ್ಟು ತಾಯಿ-ಶಿಶು ಮರಣ ಪ್ರಮಾಣ ಸುಧಾರಿಸಿದೆ. ಆದರೂ, ಅಧಿಕಾರಿಗಳು ಮತ್ತಷ್ಟು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗೆ ಸಂಸದೆ ಡಾ.ಪ್ರಭಾ ಆದೇಶಿಸಿದರು.ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಗತ್ಯ ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ಕಡ್ಡಾಯವಾಗಿರಬೇಕು. ಶೌಚಾಲಯ ಹೊಂದಿರದ ಅಥವಾ ದುರಸ್ತಿಯಾದ ಶೌಚಾಲಯಗಳನ್ನು ಸಂಬಂಧಿಸಿದ ಶಾಲೆಗಳ ಆಡಳಿತ ಮಂಡಳಿ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಯಿಂದ ದುರಸ್ತಿಪಡಿಸಿ ಮಕ್ಕಳಿಗೆ ಸೌಕರ್ಯ ಒದಗಿಸುವಂತೆ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.
ವಿದ್ಯಾಭ್ಯಾಸಕ್ಕಾಗಿ ವಿವಿಧೆಡೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇಲ್ಲಿಗೆ ಬರುತ್ತಿದ್ದಾರೆ. ಹಾಗಾಗಿ, ವಸತಿ ನಿಲಯಗಳ ಕೊರತೆಯಾಗಿದೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ 5 ಹಾಸ್ಟೆಲ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ 3 ಹಾಸ್ಟೆಲ್, ಪರಿಶಿಷ್ಟ ಪಂಗಡದ 2 ವಿದ್ಯಾರ್ಥಿ ನಿಲಯಗಳಿಗೆ ಮಂಜೂರಾತಿ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲೆಯ ವಿಶೇಷಚೇತನರನ್ನು ಗುರುತಿಸಿ, ಅದರಲ್ಲಿ ಪದವಿ ಪಡೆದ ಅರ್ಹ ವಿಶೇಷಚೇತನರಿಗೆ ಕೌಶಲ್ಯ ತರಬೇತಿ ನೀಡಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಉದ್ಯೋಗ ನೀಡಬೇಕು ಎಂದು ಸೂಚನೆ ನೀಡಿದರು.ಇದೇ ವೇಳೆ ಸ್ವಸಹಾಯ ಸಂಘದ ಮಹಿಳೆಯರನ್ನು ಸಬಲೀಕರಣಗೊಳಿಸಲು ದೀಪ ಸಂಜೀವಿನಿ ಬಿತ್ತಿಪತ್ರವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಬಿಡುಗಡೆ ಮಾಡಿದರು.
ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್, ಅಪರ ಡಿಸಿ ಎಸ್.ಶಿವಕುಮಾರ, ಜಿಲ್ಲಾ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ದಿಶಾ ಸಮಿತಿ ಸದಸ್ಯರು ಸಭೆಯಲ್ಲಿದ್ದರು.- - -
-9ಕೆಡಿವಿಜಿ8.ಜೆಪಿಜಿ: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಗುರುವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ದಿಶಾ ಸಮಿತಿ ಸಭೆಯಲ್ಲಿ ಮಾತನಾಡಿದರು. -9ಕೆಡಿವಿಜಿ9.ಜೆಪಿಜಿ: ದಾವಣಗೆರೆ ಜಿಪಂ ಸಭಾಂಗಣದಲ್ಲಿ ಗುರುವಾರ ದಿಶಾ ಸಮಿತಿ ಸಭೆಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸ್ವಸಹಾಯ ಸಂಘದ ಮಹಿಳೆಯರನ್ನು ಸಬಲೀಸಕರಣಗೊಳಿಸಲು ದೀಪ ಸಂಜೀವಿನಿ ಬಿತ್ತಿಪತ್ರ ಬಿಡುಗಡೆ ಮಾಡಿದರು. ಶಾಸಕ ಡಿ.ಜಿ.ಶಾಂತನಗೌಡ, ಅಧಿಕಾರಿಗಳು ಇದ್ದರು.