ಸಾರಾಂಶ
- ರಸ್ತೆಗಳ ಮೇಲೆ ನಿಂತ ನೀರು । ಮನೆಗಳಿಗೆ ನುಗ್ಗಿದ ಚರಂಡಿ ನೀರು । ಪ್ರಾಣಿಗಳೂ ಕಂಗಾಲು
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ದಾವಣಗೆರ ನಗರ, ಜಿಲ್ಲಾದ್ಯಂತ ಬುಧವಾರ ರಾತ್ರಿ 11ರಿಂದ ಸುಮಾರು ಗಂಟೆಗಳ ಕಾಲ ಸುರಿದ ಭಾರಿ ಮಳೆಯಿಂದಾಗಿ ಜನರು ಇಡೀ ರಾತ್ರಿ ಜಾಗರಣೆ ಮಾಡುವಂತಾಯಿತು. ತಗ್ಗುಪ್ರದೇಶ, ಕೊಳಗೇರಿಗಳು, ಹಿಂದುಳಿದ ಪ್ರದೇಶ, ಹೊಸ ಬಡಾವಣೆಗಳ ನಿವಾಸಿಗಳ ಪರದಾಟ ಬೆಳಗಿನವರೆಗೂ ಮುಂದುವರಿದಿತ್ತು.ಬುಧವಾರ ರಾತ್ರಿ 11ರ ವೇಳೆ ಗುಡುಗು, ಮಿಂಚು, ಸಿಡಲಿನ ಆರ್ಭಟದಿಂದ ಭಾರಿ ಮಳೆ ಸುರಿಯಲಾರಂಭಿಸಿತು. ಸಾಧಾರಣವಾಗಿ ಸುರಿದ ಮಳೆ ನೋಡ ನೋಡುತ್ತಿದ್ದಂತೆ ರೌದ್ರತೆ ತಾಳಿತು. ಮಳೆಯ ಹೊಡೆತಕ್ಕೆ ಕಚ್ಚಾ ಮನೆ, ಹೆಂಚು, ಶೀಟಿನ ಮನೆಗಳು, ತಗ್ಗುಪ್ರದೇಶ, ಹೊಸ ಬಡಾವಣೆ ನಿವಾಸಿಗಳು ಇಡೀ ರಾತ್ರಿ ನಿದ್ದೆಗೆಡುವಂತಾಗಿದೆ. ಕೊಟ್ಟಿಗೆಯಲ್ಲಿದ್ದ ರಾಸುಗಳು, ಬಿಡಾಡಿ ದನಕರುಗಳು, ಬೀದಿನಾಯಿಗಳು ಮಳೆಯಿಂದ ರಕ್ಷಣೆಗೆ ತೊಂದರೆ ಅನುಭವಿಸುವಂತಾಯಿತು.
ತಗ್ಗು ಪ್ರದೇಶದಲ್ಲಿ ಮುಂದೆ ನೀರು ಹರಿಯಲಾಗದೇ ನಿಂತಿದ್ದರಿಂದ ಅನೇಕ ಮನೆಗಳಿಗೆ ಮಳೆನೀರು ನುಗ್ಗಿ, ಹಾವು-ಚೇಳು ಇತರೆ ವಿಷಜಂತುಗಳ ಭಯದಿಂದ ಜನರು ಕಂಗಾಲಾದರು. ಶಾಮನೂರು- ಶಿರಮಗೊಂಡನಹಳ್ಳಿ ಗ್ರಾಮಗಳ ರಸ್ತೆಯ ಶಿವ ಪಾರ್ವತಿ ಬಡಾವಣೆಯಲ್ಲಂತೂ ಎತ್ತರದ ಪ್ರದೇಶದಿಂದ ಹರಿದುಬಂದ ನೀರು ನಿಂತಿದ್ದರಿಂದ ಮನೆಗಳೊಳಗೆ ನೀರು ನುಗ್ಗಿತ್ತು.ತಗ್ಗು ಪ್ರದೇಶ, ಕೊಳಗೇರಿಗಳು, ಆಶ್ರಯ ಕಾಲನಿಗಳು, ಹೊಸ ಬಡಾವಣೆಗಳು, ರಸ್ತೆಯಿಂದ ಕೆಳಗಿರುವ ಮನೆಗಳಿಗೆ ಮಳೆನೀರು, ಚರಂಡಿ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ರಸ್ತೆಗಳು, ತಗ್ಗು, ಗುಂಡಿಗಳು ಜಲಾವೃತವಾಗಿದ್ದರೆ, ಸಣ್ಣಪುಟ್ಟ ಚರಂಡಿಗಳಲ್ಲಿ ರಭಸವಾಗಿ ಹರಿಯುತ್ತಿದ್ದ ನೀರಿನಿಂದಾಗಿ ರಸ್ತೆಗಳೂ ಜಲಾವೃತವಾಗಿದ್ದವು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಹಿಂಭಾಗದ ರಾಜ ಕಾಲುವೆಯಿಂದ ಅಪಾರ ಪ್ರಮಾಣದ ನೀರು ಬಂದಿದ್ದರಿಂದ ನಿಟುವಳ್ಳಿ- ಲೇಬರ್ ಕಾಲನಿ, ಹಳೇ ಪಿ.ಬಿ. ರಸ್ತೆ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿ ರಾತ್ರಿಯಿಡೀ ವಾಹನ ಸಂಚಾರಕ್ಕೆ ಧಕ್ಕೆಯಾಗಿತ್ತು.
ನಿಟುವಳ್ಳಿ ಶ್ರೀ ದುರ್ಗಾಂಬಿಕಾ ದೇವಸ್ಥಾನ ಭಾಗ, ಸರ್‌ಎಂವಿ ಕಾಲೇಜು ರಸ್ತೆ, ಸೇಂಟ್ ಜಾನ್ಸ್ ಶಾಲೆ ಹೀಗೆ ಎತ್ತರದ ಪ್ರದೇಶದಿಂದ ಬಂದ ನೀರು ಸರಸ್ವತಿ ಬಡಾವಣೆಯ ಕೆಎಸ್‌ಎಸ್ ಕಾಲೇಜು ಸಮೀಪದ ರಾಜ ಕಾಲುವೆ ಬಳಿ ಹರಿದು ಬಂದಿದ್ದರಿಂದ ನೂರಾರು ಮೀಟರ್‌ವರೆಗೆ ಜಲಾವೃತವಾಯಿತು. ಜನರು ರಾತ್ರಿ ಮನೆಗಳಿಗೆ ಹೋಗಲು ಜಲಾವೃತ ರಸ್ತೆಯಲ್ಲಿ ಸಾಗಲಾಗದೇ ಬೇರೆ ದಾರಿಗಳಲ್ಲಿ ಸುತ್ತಿ, ಬಳಸಿ ಮನೆ ತಲುಪಬೇಕಾಯಿತು. ಊರಿಗೆ ಹೋಗಲು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳಿಗೆ ಹೋಗುವವರು, ಬೇರೆ ಊರಿನಿಂದ ಬಂದವರು ಮಳೆಯ ಆರ್ಭಟ ಕಂಡು ಬೆಚ್ಚಿಬಿದ್ದು, ನಿಲ್ದಾಣದಲ್ಲಿಯೇ ಕಾಲಹರಣ ಮಾಡಬೇಕಾಯಿತು.ಹಳೇ ಭಾಗದ ದಾವಣಗೆರೆ, ಸರಸ್ವತಿ ನಗರ, ದೇವರಾಜ ಅರಸು ಬಡಾವಣೆ, ನಿಟುವಳ್ಳಿ, ಜಯ ನಗರ, ಬೂದಾಳ್ ರಸ್ತೆ, ಬೇತೂರು ರಸ್ತೆ, ದೇವರಾಜ ನಗರ ಕ್ವಾಟ್ರರ್ಸ್, ಯಲ್ಲಮ್ಮ ನಗರ, ವಿನೋಬ ನಗರ, ಹಳೇ ಪಿ.ಬಿ. ರಸ್ತೆ ಖಬರಸ್ಥಾನ ಹೀಗೆ ಜಿಲ್ಲಾ ಕೇಂದ್ರದ ಅನೇಕ ಕಡೆ ರಸ್ತೆಗಳು ಜಲಾವೃತವಾಗಿದ್ದವು. ದಾವಣಗೆರೆ ತಾಲೂಕಿನ ವಿವಿಧೆಡೆ ಕಳೆದ ರಾತ್ರಿ ಭಾರಿ ಮಳೆಯಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧೆಡೆ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಜನರು ಕಂಗಾಲಾಗಿದ್ದು ಸುಳ್ಳಲ್ಲ. ಕೆಲ ಬಡಾವಣೆಗಳಲ್ಲಿ ಮನೆಗಳ ಮುಂದೆ ನಿಲ್ಲಿಸಿದ್ದ ವಾಹನಗಳೂ ಜಲಾವೃತವಾಗಿದ್ದವು. ಅನೇಕ ಮನೆಗಳಿಗೆ ಕಸದ, ಒಳ ಚರಂಡಿ ತ್ಯಾಜ್ಯದ ಸಮೇತ ಮಳೆನೀರು ನುಗ್ಗಿ ಜನರ ನಿದ್ದೆ ಕದ್ದಿತ್ತು.
- - --9ಕೆಡಿವಿಜಿ3, 4: ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯಲ್ಲಿ ರಸ್ತೆಗಳು ಜಲಾವೃತವಾಗಿ, ವಾಹನಗಳು ಮುಳುಗಡೆಯಾಗಿರುವುದು.
-9ಕೆಡಿವಿಜಿ5, 6, 7: ದಾವಣಗೆರೆ ಹೊರವಲಯದ ಶಾಬನೂರು- ಶಿರಮಗೊಂಡನಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದ ಬಡಾವಣೆ ಜಲಾವೃತವಾಗಿರುವುದು.