ಸಾರಾಂಶ
ವಿಜಯಪುರ: ಪಟ್ಟಣ ಸಮೀಪದ ಕೋಲಾರ ಮುಖ್ಯರಸ್ತೆಯಲ್ಲಿರುವ ಶ್ರೀ ಮುನೇಶ್ವರಸ್ವಾಮಿ ದೇವಾಲಯದಲ್ಲಿ ಪ್ರಥಮ ವಾರ್ಷಿಕೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ದೇವಾಲಯದ ಹೊರ ಭಾಗದಲ್ಲಿರುವ ೯ ಅಕ್ಕಯ್ಯಮ್ಮನವರ ಮೂರ್ತಿಗಳನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಿ ಅರ್ಚಕರಿಂದ ಗಣಹೋಮ, ನವಗ್ರಹ, ರುದ್ರಾಭಿಷೇಕ, ಬಿಂಬಶುದ್ಧಿ, ಪಂಚಾಮೃತ ಅಭಿಷೇಕ, ಸಾನ್ನಿಧ್ಯ ಕಲಶಾಭಿಷೇಕ, ತ್ರಯಂಬಕ ಪೂಜೆ, ಮಹಾಪೂಜೆ, ದೇವರ ನೃತ್ಯ ಉತ್ಸವ ನಡೆಯಿತು. ಮಹಾಪೂಜೆ ಮತ್ತು ಮಹಾಮಂಗಳಾರತಿ ಬಳಿಕ ಪ್ರಸಾದ ವಿನಿಯೋಗವಾಯಿತು. ವಿವಿಧ ಧಾರ್ಮಿಕ ಕೈಂಕರ್ಯಗಳಿಗೆ ನೂರಾರು ಭಕ್ತರು ಸಾಕ್ಷಿಯಾದರು. ಹಿರಿಯ ಮುಖಂಡ ಶ್ರೀನಿವಾಸಪ್ಪ ಮಾತನಾಡಿ, ಆಧುನಿಕತೆ ಹೆಚ್ಚಾದಂತೆ ಮನುಷ್ಯ ಒತ್ತಡದಲ್ಲಿ ಜೀವಿಸುತ್ತಿದ್ದಾನೆ. ಮಾನಸಿಕ ಒತ್ತಡ ಮತ್ತು ಬದುಕಿನ ಜಂಜಾಟದಿಂದ ನೆಮ್ಮದಿ ಪಡೆಯಲು ಮನುಷ್ಯ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಧಾರ್ಮಿಕ ಕೇಂದ್ರಗಳು ಮಾತ್ರ ಶಾಂತಿ ಮತ್ತು ನೆಮ್ಮದಿ ದೊರೆಯುವ ತಾಣಗಳಾಗಿವೆ. ಇಂತಹ ಸ್ಥಳಗಳಲ್ಲಿ ಮನುಷ್ಯ ತನ್ನ ಒತ್ತಡವನ್ನು ಮರೆತು ಸ್ವಲ್ಪ ಸಮಯ ನೆಮ್ಮದಿಯಿಂದ ಇರಲು ಸಾಧ್ಯವೆಂದರು. ದೇವಾಲಯದ ಮುಖಂಡ ಜಯರಾಮ್, ಪ್ರಧಾನ ಅರ್ಚಕ ಆನಂದ್, ಸೀನಪ್ಪ, ಮುನಿರಾಜ್, ಸುಧೀರ್, ಮುನಿಯಪ್ಪ, ಹರ್ಷ ಹಾಗೂ ಭಕ್ತವೃಂದ ಹಾಜರಿದ್ದರು.