ಮೊದಲ ದಿನ 15 ಕಿಮೀ ಗಜ ಗಣತಿ

| Published : May 24 2024, 12:50 AM IST

ಸಾರಾಂಶ

ಗಜ ಗಣತಿ ಗುರುವಾರ ಆರಂಭವಾಗಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದು ಇನ್ನೆರಡು ದಿನ ಗಣತಿ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರಗಜ ಗಣತಿ ಗುರುವಾರ ಆರಂಭವಾಗಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಕಾವೇರಿ ವನ್ಯಜೀವಿಧಾಮದಲ್ಲಿ ಮೊದಲ ದಿನ ಸಿಬ್ಬಂದಿ ಗಣತಿ ಕಾರ್ಯ ನಡೆಸಿದ್ದು ಇನ್ನೆರಡು ದಿನ ಗಣತಿ ನಡೆಯಲಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಒಟ್ಟು 13 ವಲಯದ 113 ಬೀಟ್ ಗಳು, ಕಾವೇರಿ ವನ್ಯಜೀವಿಧಾಮದ 43 ಗಸ್ತುಗಳ‌ 72 ಬ್ಲಾಕ್ ಗಳಲ್ಲಿ 162 ಸಿಬ್ಬಂದಿ, ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದಲ್ಲಿ 170 ಸಿಬ್ಬಂದಿ ಮೊದಲ ದಿನ ಆನೆ ಗಣತಿ ನಡೆಸಿದ್ದಾರೆ.

ಮೊದಲ ದಿನದ ಆನೆ ಲೆಕ್ಕ: ಗಜ ಗಣತಿಯು ಮೂರು ದಿನಗಳ ಕಾಲ ಬೆಳಗ್ಗೆ 6 ರಿಂದ ಸಂಜೆ 6 ತನಕ ನಡೆಯಲಿದ್ದು ಮೊದಲ ದಿನ ಗುರುವಾರದಂದು 15 ಕಿಮೀ ನಡೆದು ಆನೆ ಗುಂಪುಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಲೆಕ್ಕ ಹಾಕಿದ್ದಾರೆ. ಆನೆ ಗುಂಪಿನಲ್ಲಿ ಎಷ್ಟು ಹೆಣ್ಣಾನೆಗಳಿವೆ, ಎಷ್ಟು ಮರಿಗಳಿವೆ, ಗುಂಪಿನಲ್ಲಿ ಎಷ್ಟು ಆನೆಗಳಿವೆ ಎಂಬುದನ್ನು ಗುರುತು ಮಾಡಿಕೊಳ್ಳಲಾಗುತ್ತದೆ. ಪ್ರತಿ ಬೀಟ್‌ನಲ್ಲೂ ಮೂವರು ಸಿಬ್ಬಂದಿ ನಡೆದುಕೊಂಡು ಆನೆ ಗುಂಪುಗಳನ್ನು ಕಂಡು ಈ ಲೆಕ್ಕ ಹಾಕಿದ್ದಾರೆ.

ಎರಡನೇ ದಿನ ಆನೆ ಲದ್ದಿಯನ್ನು ಪತ್ತೆಹಚ್ಚಿ ಒಂಟಿ ಆನೆಯೋ, ಗುಂಪುಗಳ ಆನೆಯೋ ಆ ಪರಿಸರದಲ್ಲಿ ಆನೆಗಳ ಅಂದಾಜು ಲೆಕ್ಕ ಹಾಕಲಾಗುತ್ತದೆ. ಮೂರನೇ ದಿನ ಕೆರೆಗಳ ಬಳಿ ಸಿಬ್ಬಂದಿ ಬೆಳಗ್ಗೆಯಿಂದ ಸಂಜೆವರೆಗೆ ಕಾದು ಆನೆಗಳು ನೀರು ಕುಡಿಯುವಾಗ ಬರುವ ಆನೆಗಳ ಲೆಕ್ಕವನ್ನು ಹಾಕಲಿದ್ದಾರೆ. ಒಟ್ಟಾರೆಯಾಗಿ 3 ದಿನದಲ್ಲಿ ಕಂಡ ಆನೆಯ ಲೆಕ್ಕವನ್ನು ತುಲನಾತ್ಮಕವಾಗಿ ಪರಿಶೀಲಿಸಿ ಆನೆಗಳ ಅಂದಾಜು ಲೆಕ್ಕವನ್ನು ಹಾಕಲಾಗುತ್ತದೆ.ಕೊಡ ಹಿಡಿದು ಆನೆ ಗಣತಿ:

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಗುರುವಾರ ಆರಂಭವಾದ ಮೊದಲ ದಿನ ಆನೆ ಗಣತಿಯಲ್ಲಿ ಎಲ್ಲಾ ವಲಯಗಳಲ್ಲಿ ಕಾಣಿಸಿಕೊಂಡಿದ್ದು, ಕೆಲ ವಲಯಗಳಲ್ಲಿ ಬಿದ್ದ ಮಳೆಯ ನಡುವೆಯೂ ಗಣತಿದಾರರುʼಕೊಡʼ ಹಿಡಿದು ಯಾವುದೇ ಅಡೆ ತಡೆ ಇಲ್ಲದೆ ಆನೆ ಗಣತಿ ಯಶಸ್ವಿಯಾಗಿ ನಡೆಸಿದ್ದಾರೆ.

ಮೇ 23 ರಿಂದ ಆನೆ ಗಣತಿ ಆರಂಭವಾಗಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ 13 ವಲಯಗಳಲ್ಲಿ ಆನೆ ಗಣತಿ ಗುರುವಾರ ಬೆಳಗ್ಗೆಯಿಂದಲೇ ಅರಣ್ಯ ಸಿಬ್ಬಂದಿ ಆರಂಭಿಸಿದ್ದು, ಕೆಲ ವಲಯಗಳಲ್ಲಿ ಮಳೆ ಬೀಳುವ ಸಮಯದಲ್ಲಿ ಛತ್ರಿ ಹಿಡಿದು ಆನೆಗಳ ಲೆಕ್ಕ ಮಾಡಿದ್ದಾರೆ. 13 ವಲಯಗಳ ಒಟ್ಟು 113 ಗಸ್ತುಗಳಲ್ಲಿ ಬ್ಲಾಕ್‌ ಸ್ಯಾಂಪ್ಲಿಂಗ್‌ ಸುಮಾರು 350 ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಆನೆ ಗಣತಿ ಮಾಡಿದ್ದಾರೆ ಎಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಕ್ಷೇತ್ರ ನಿರ್ದೇಶಕ ಪ್ರಭಾಕರನ್‌ ಎಸ್‌ ತಿಳಿಸಿದ್ದಾರೆ.ಗಣತಿಗೆ ಕಾರಣ: ರಾಜ್ಯದಲ್ಲಿ ಮಾನವ-ವನ್ಯಜೀವಿ ಸಂಘರ್ಷ ಪ್ರಕರಣ ರಾಜ್ಯಗಳ ಗಡಿಯಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆ ಅಂತರಾಜ್ಯ ಸಮನ್ವಯ ಸಮಿತಿ ಚಾರ್ಟರ್‌ (ಐಸಿಸಿ) ನಲ್ಲಿ ಮಾನವ-ವನ್ಯ ಪ್ರಾಣಿ ಸಂಘರ್ಷ ತಡೆಗಟ್ಟಲು ಹಾಗೂ ಸಂಘರ್ಷ ನಿರ್ವಹಣಾ ತಂತ್ರಗಳನ್ನು ವಿನ್ಯಾಸಗೊಳಿಸಲು ಅಂತರ ರಾಜ್ಯ ಗಡಿ ಪ್ರದೇಶಗಳಲ್ಲಿ ನಿಯಮಿತವಾಗಿ ಏಕ ಕಾಲದಲ್ಲಿ ವನ್ಯಜೀವಿ ಗಣತಿ ಕೈಗೊಳ್ಳುವ ಸಲುವಾಗಿ ಆನೆ ಗಣತಿ ಅರಣ್ಯ ಇಲಾಖೆ ನಡೆಸಿದೆ. ಎಸಿಎಫ್‌ ವಿಸಿಟ್‌: ಬಂಡೀಪುರ ಸಹಾಯಕ ಅರಣ್ಯ ಸಂಕ್ಷಣಾಧಿಕಾರಿ ನವೀನ್‌, ಗುಂಡ್ಲುಪೇಟೆ ಹಾಗೂ ಹೆಡಿಯಾಲ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ಹಾಗೂ ವಲಯ ಅರಣ್ಯಧಾರಿಗಳಾದ ಬಿ.ಎಂ.ಮಲ್ಲೇಶ್‌, ಎನ್.ಪಿ.ನವೀನ್ ಕುಮಾರ್‌, ಮಂಜುನಾಥ್‌, ಪುನೀತ್‌ ಕುಮಾರ್‌, ದೀಪಾ ಆನೆ ಗಣತಿದಾರರ ಬಳಿ ಮಾಹಿತಿ ಪಡೆದು ಸಲಹೆ, ಸೂಚನೆಗಳನ್ನು ನೀಡಿದ್ದಾರೆ.ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಎಲ್ಲಾ ವಲಯಗಳಲ್ಲಿ ಅಲ್ಲಲ್ಲಿ ಆನೆಗಳು ಕಾಣಿಸಿಕೊಂಡಿವೆ. ಹೇಳಿಕೊಳ್ಳುವಷ್ಟು ಆನೆಗಳು ಕಾಣಿಸಿಕೊಂಡಿಲ್ಲ. ಬೇಸಿಗೆಯ ಸಮಯದಲ್ಲಿ ಆಹಾರ ಅರಸಿ ಹೋದ ಆನೆಗಳು ಇನ್ನೂ ಬರಬೇಕಿದೆ. ಆನೆ ಗಣತಿ ಕಂಪ್ಲೀಟ್‌ ಆಗಿದೆ. ಆನೆಗಳ ಗಣತಿಯ ಇಂದಿನ ಮಾಹಿತಿ ಕಲೆ ಹಾಕಲಾಗುತ್ತದೆ.-ಪ್ರಭಾಕರನ್‌ ಎಸ್‌, ಡಿಸಿಎಫ್‌, ಬಂಡೀಪುರ