ಮಂಗನ ಕಾಯಿಲೆಗೆ ಉತ್ತರಕನ್ನಡದಲ್ಲಿ ಮೊದಲ ಬಲಿ

| Published : Feb 23 2024, 01:52 AM IST

ಸಾರಾಂಶ

ಮಂಗನ ಕಾಯಿಲೆ (ಕೆಎಫ್‌ಡಿ)ಯಿಂದ ಗಂಭೀರ ಸ್ಥಿತಿಯಲ್ಲಿದ್ದ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜಿಡ್ಡಿಯ ೬೫ ವರ್ಷದ ಮಹಿಳೆ ಸೋಮವಾರ ರಾತ್ರಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಇದರೊಂದಿಗೆ ಮಂಗನ ಕಾಯಿಲೆ ಈ ಬಾರಿ ಮೊದಲ ಬಲಿ ಪಡೆದುಕೊಂಡಿದೆ.

- ಕೆಎಫ್‌ಡಿಯಿಂದಾಗಿ 65 ವರ್ಷದ ಮಹಿಳೆ ಸಾವು

ಕನ್ನಡಪ್ರಭ ವಾರ್ತೆ ಸಿದ್ದಾಪುರ

ಮಂಗನ ಕಾಯಿಲೆ (ಕೆಎಫ್‌ಡಿ)ಯಿಂದ ಗಂಭೀರ ಸ್ಥಿತಿಯಲ್ಲಿದ್ದ ತಾಲೂಕಿನ ಕೊರ್ಲಕೈ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜಿಡ್ಡಿಯ ೬೫ ವರ್ಷದ ಮಹಿಳೆ ಸೋಮವಾರ ರಾತ್ರಿ ಮೃತಪಟ್ಟಿದ್ದಾಗಿ ತಿಳಿದು ಬಂದಿದೆ. ಇದರೊಂದಿಗೆ ಮಂಗನ ಕಾಯಿಲೆ ಈ ಬಾರಿ ಮೊದಲ ಬಲಿ ಪಡೆದುಕೊಂಡಿದೆ.

ಕಾಯಿಲೆಯಿಂದ ಬಳಲುತ್ತಿದ್ದ ಇವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಮನೆಗೆ ಕರತರಲಾಗಿತ್ತು. ಕಾಯಿಲೆ ಉಲ್ಬಣಗೊಂಡು ಮೃತಪಟ್ಟಿದ್ದಾರೆ. ಈವರೆಗೆ ತಾಲೂಕಿನಲ್ಲಿ ೪೩ ಮಂಗನ ಕಾಯಿಲೆ ಶಂಕಿತ ಪ್ರಕರಣಗಳು ದಾಖಲಾಗಿದ್ದು, ಈ ವರ್ಷ ಈ ಕಾಯಿಲೆಯಿಂದ ಮೃತಪಟ್ಟ ಮೊದಲ ಪ್ರಕರಣ ಇದಾಗಿದೆ. ಜಿಲ್ಲೆಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ಮಾತ್ರ ಮಂಗನ ಕಾಯಿಲೆ ಪ್ರಕರಣ ಕಂಡುಬಂದಿದ್ದು ತಾಲೂಕಿನ ಜನತೆಗೆ ಭಯ ಹುಟ್ಟಿಸಿದೆ.

ತಾಲೂಕಿನಲ್ಲಿ ಈವರೆಗೆ ಮೂರು ಮಂಗಗಳು ಸತ್ತಿರುವ ಬಗ್ಗೆ ಅನಧಿಕೃತವಾಗಿ ತಿಳಿದುಬಂದಿದ್ದು, ಈ ಕುರಿತು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಅಲ್ಲದೇ ಮಂಗನ ಕಾಯಿಲೆಯಿಂದ ಮೃತಪಟ್ಟ ಕುರಿತಾದ ವಿವರಗಳನ್ನು ರಾಜ್ಯಮಟ್ಟದ ಅಧಿಕಾರಿಗಳು ಮಾತ್ರ ನೀಡುವ ಆದೇಶವಿದೆ ಎನ್ನುವ ಉತ್ತರ ಅವರಿಂದ ದೊರೆಯುತ್ತಿದೆ. ಮಂಗನ ಕಾಯಿಲೆಗೆ ನೀಡುತ್ತಿದ್ದ ಲಸಿಕೆಯನ್ನು ೨ ವರ್ಷದ ಹಿಂದೆ ನಿಲ್ಲಿಸಿದ್ದು, ಯಾವುದೇ ಪರ್ಯಾಯ ಲಸಿಕೆಯನ್ನು ಸರ್ಕಾರ ಸೂಚಿಸಿಲ್ಲ. ಇದು ಕೂಡ ಜನತೆಯ ಆತಂಕಕ್ಕೆ ಕಾರಣವಾಗಿದೆ.