ಪಕ್ಷಿಧಾಮಕ್ಕೆ ಮೊದಲ ಬಾರಿಗೆ ಕೆಂಪು ಜುಟ್ಟಿನ ಬಾತುಗಳ ದಂಡು

| Published : Jan 28 2025, 12:46 AM IST

ಸಾರಾಂಶ

ಈ ಹಿಂದೆ 270ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳಿದ್ದ ಪಕ್ಷಿಧಾಮದಲ್ಲಿ ಗಣತಿ ತಂಡಕ್ಕೆ ಈ ಸಾಲಿನಲ್ಲಿ ಬೆಳಗಿನ ವೇಳೆಯಲ್ಲಿ 133 ಪ್ರಭೇದದ ಹಕ್ಕಿಗಳು ಕಂಡುಬಂದವು

ಹಗರಿಬೊಮ್ಮನಹಳ್ಳಿ: ತಾಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ನಡೆದ ಹಕ್ಕಿಗಳ ಗಣತಿಯಲ್ಲಿ ಅಪಾರ ನಿರೀಕ್ಷೆ ಹೊಂದಿದ್ದ ತಂಡಕ್ಕೆ ನಡೆದಾಡುವ ಹಕ್ಕಿಗಳು ಮೊದಲ ಬಾರಿಗೆ ನಾಪತ್ತೆಯಾಗಿರುವುದು ತೀವ್ರ ಬೇಸರ ತರಿಸಿತು.

ಈ ಹಿಂದೆ 270ಕ್ಕೂ ಹೆಚ್ಚು ಪ್ರಭೇದದ ಹಕ್ಕಿಗಳಿದ್ದ ಪಕ್ಷಿಧಾಮದಲ್ಲಿ ಗಣತಿ ತಂಡಕ್ಕೆ ಈ ಸಾಲಿನಲ್ಲಿ ಬೆಳಗಿನ ವೇಳೆಯಲ್ಲಿ 133 ಪ್ರಭೇದದ ಹಕ್ಕಿಗಳು ಕಂಡುಬಂದವು. ಪಕ್ಷಿಧಾಮದ ಸುತ್ತ ನಡೆದಾಡುತ್ತಿದ್ದ ಸ್ಯಾಂಡ್ ಪೈಪರ್, ಪ್ಲೋವರ್ ಹಕ್ಕಿಗಳು, ಕೆಂಪು ತಲೆಬಾತುಗಳು ಇದೇ ಮೊದಲ ಬಾರಿಗೆ ಕಂಡುಬಂದದ್ದು ವಿಶೇಷವಾಗಿತ್ತು.

ಎಂದಿನಂತೆ ಪತ್ತೆಯಾದ ಪಕ್ಷಿಗಳಲ್ಲಿ ಬಹುತೇಕ ಹಕ್ಕಿಗಳು ಬಣ್ಣದ ಕೊಕ್ಕರೆ, ಸಿಳ್ಳೆಬಾತು, ಸೂಚಿಬಾಲದ ಬಾತು, ನೀರುಕಾಗೆ, ಕೆಂಬರ್ಲ ಮತ್ತು ಬೂದು ಬಕಗಳೇ ಆಗಿದ್ದು, ಕಳೆದ 2 ವರ್ಷಗಳಲ್ಲಿ ಸಾವಿರಾರು ಸಂಖ್ಯೆಗಳಷ್ಟು ಹೆಚ್ಚಿವೆ.

ಹಕ್ಕಿಗಣತಿಯಲ್ಲಿ 35ಸಾವಿರಕ್ಕೂ ಹೆಚ್ಚು ಪಕ್ಷಿಗಳ ಗಣತಿ ನಡೆಸಿದ ಅರಣ್ಯ ಇಲಾಖೆ ಮತ್ತು ಪಕ್ಷಿತಜ್ಞರ ತಂಡ 133 ಪ್ರಭೇದದ ಹಕ್ಕಿಗಳ ಇರುವಿಕೆ ಗುರುತಿಸಿತು.

ಅರಣ್ಯ ಇಲಾಖೆ ಅಧಿಕಾರಿ, ಪಕ್ಷಿತಜ್ಞರನ್ನೊಳಗೊಂಡ ತಲಾ 5 ಜನರನ್ನೊಳಗೊಂಡ 5 ತಂಡಗಳು ಪಕ್ಷಿಧಾಮದ 244 ಎಕರೆ ಪ್ರದೇಶದ ಉದ್ದಗಲಕ್ಕೂ ಹಕ್ಕಿ ಗಣತಿ ನಡೆಸಿದರು. ತೆಪ್ಪಗಳಲ್ಲಿ ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಪ್ರತ್ಯೇಕ ತಂಡ ರಚನೆಯಾಗಿತ್ತು. ಕೆಲವರು ಮರದ ಹಕ್ಕಿಗಳನ್ನು, ಮತ್ತೊಂದು ತಂಡ ನೆಲದ ಹಕ್ಕಿಗಳನ್ನು, ತೆಪ್ಪದಲ್ಲಿನ ತಂಡ ನೀರು ಹಕ್ಕಿಗಳನ್ನು ಗುರುತಿಸಿ, ಗಣತಿ ನಡೆಸಿತು. ಅರಣ್ಯ ಇಲಾಖೆಯ ಸಿಬ್ಬಂದಿಗಳ ಪೈಕಿ ಕೆಲವರು ವಾಚ್ ಟವರ್ ಮೇಲಿನಿಂದ ಹಕ್ಕಿಗಳ ಗಣತಿ ನಡೆಸಿತು.

ಗಣತಿಯ ನಂತರ ಬಿಎನ್‌ಎಚ್‌ಎಸ್‌ನ ರಾಜ್ಯ ಸಂಯೋಜಕ ಡಾ.ಸುಬ್ರಮಣ್ಯ ಮಾತನಾಡಿ, ಪರಿಸರ ವಿಜ್ಞಾನದಂತೆ ಕೆರೆಯನ್ನು ಮಳೆಗಾಲದಲ್ಲಿ ತುಂಬಿ, ಬೇಸಿಗೆಯಲ್ಲಿ ಖಾಲಿಯಾಗಿಸಿ ಕೆಸರು ಆವರಿಸುವಂತಾಗಿಸಬೇಕು. ಕಾಣೆಯಾಗುತ್ತಿರುವ ಹಕ್ಕಿಗಳು ಪಕ್ಷಿಧಾಮದಲ್ಲಿ ನೆಲೆಯೂರುವಂತೆ ತುರ್ತು ಕ್ರಮ ಅಗತ್ಯವಾಗಿದೆ. ಅಪಾರ ಪ್ರಮಾಣದಲ್ಲಿ ನಿಲುಗಡೆಯಾದ ನೀರು ಹೊರಹಾಕಬೇಕು. ತುಂಗಭದ್ರಾ ಹಿನ್ನೀರು ಪಕ್ಷಿಧಾಮದ ಬಳಿಯಲ್ಲೇ ಇರುವುದು ವರದಾನವಾಗಿದೆ. ಸಮೃದ್ಧ ಆಹಾರ ಒದಗಿ ಜೀವವೈವಿಧ್ಯತೆ ನೆಲೆಕಂಡಿದೆ. ಆದರೆ, ಕಳೆದ ಸಾಲಿಗಿಂತಲೂ ಕಡಿಮೆ ಪ್ರಭೇದದ ಹಕ್ಕಿಗಳು ಕಂಡುಬಂದಿರುವ ಕುರಿತು ಚಿಂತನೆ ನಡೆಸಬೇಕಿದೆ ಎಂದರು.

ಅರಣ್ಯ ಇಲಾಖೆ ಎಸಿಎಫ್ ಕೈರಬನಾಥನ್ ಮಾತನಾಡಿ, ಹಕ್ಕಿಗಣತಿಯಿಂದ ಜೀವವೈವಿಧ್ಯತೆಯ ಉಳಿಯುವಿಕೆಗೆ ಕ್ರಮ ಕೈಗೊಳ್ಳಬಹುದಾಗಿದೆ. ಹಕ್ಕಿಗಳ ಸಂತತಿ ಅಭಿವೃದ್ಧಿ, ಕುಂಠಿತಗೊಳ್ಳುವುದಕ್ಕೆ ಕಾರಣ ಮತ್ತು ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದರು.

ಚಿತ್ರದುರ್ಗ ಡಿಸಿಎಫ್ ಡಾ.ಹರೀಶ್, ಡಿಸಿಎಫ್ ರೇಣುಕಮ್ಮ, ಮಕ್ಕಳ ತಜ್ಞ ಡಾ.ರಾಜೀವ್, ಪಕ್ಷಿತಜ್ಞರಾದ ವಿಜಯ್ ಇಟಿಗಿ, ಆನಂದಬಾಬು, ಉಪ ವಲಯ ಅರಣ್ಯಾಧಿಕಾರಿ ಅಡವಿಹಳ್ಳಿ ಕರಿಬಸಪ್ಪ, ಬಸವನಗೌಡ, ಶ್ರಿಕಾಂತ್, ದುಷ್ಯಂತಗೌಡ, ಎಚ್.ಪಿ.ರಾಮು, ಗಸ್ತು ಅರಣ್ಯ ಪಾಲಕ ಎಂ.ಮಂಜುನಾಥ, ಎಂ.ಲೀಲಾ, ಅರಣ್ಯ ವೀಕ್ಷಕರಾದ ಕೆ.ಎಂ.ಮಲ್ಲಿಕಾರ್ಜುನ ಮಾಬುಸಾ, ರಾಜೇಂದ್ರಕುಮಾರ್, ಲವಕುಮಾರ್, ಮಂಜುನಾಥ ಇದ್ದರು.