ಸಾರಾಂಶ
ಮುಂಗಾರಿನಲ್ಲಿ ಮಳೆ ಬಂದು ಮೇವು ಬರುವವರೆಗೂ ಮೇವು ಬ್ಯಾಂಕನ್ನು ನಡೆಸುವುದರಿಂದ ಪಶುಪಾಲಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ತುಮಕೂರು
ರಾಜ್ಯಾದ್ಯಂತ ಬರಗಾಲ ಆವರಿಸಿರುವುದರಿಂದ ಬರ ನಿರ್ವಹಣೆಗಾಗಿ ಸರ್ಕಾರ ಹಲವಾರು ಕ್ರಮ ಕೈಗೊಳ್ಳುತ್ತಿದ್ದು, ಜಾನುವಾರುಗಳಿಗೆ ಮೇವನ್ನು ಒದಗಿಸುವ ನಿಟ್ಟಿನಲ್ಲಿ ಪಾವಗಡ ತಾಲೂಕಿನ ನಾಗಲಮಡಿಕೆ ಗ್ರಾಮದ ಸುಬ್ರಹ್ಮಣೇಶ್ವರ ದೇಗುಲದ ಬಳಿಯಲ್ಲಿ ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಪಶುಪಾಲನಾ ಇಲಾಖೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಮೊದಲ ಮೇವು ಬ್ಯಾಂಕ್ ಅನ್ನು ತೆರೆಯಲಾಗಿದೆ. ಒಂದು ಜಾನುವಾರಿಗೆ ದಿನಕ್ಕೆ 6 ಕೆ.ಜಿ ಯಂತೆ ವಾರಕ್ಕೆ 42 ಕೆಜಿ ಮೇವು ವಿತರಿಸಲಾಗುತ್ತದೆ. ಒಂದು ಕೆ.ಜಿ. ಮೇವಿಗೆ ರು.2 ನಿಗದಿಪಡಿಸಲಾಗಿದೆ. ಶುಕ್ರವಾರ 55 ರೈತರ 260 ಜಾನುವಾರುಗಳಿಗೆ ಸಾಕಾಗುವಷ್ಟು 10,920 ಕೆ.ಜಿ ಮೇವು ವಿತರಿಸಲಾಗಿದೆ. ಶನಿವಾರ 350 ಜಾನುವಾರುಗಳಿಗೆ ಸಾಕಾಗುವಷ್ಟು ಮೇವು ವಿತರಿಸಲಾಗಿದೆ.ತಾಲೂಕಿನಲ್ಲಿ ಹೆಚ್ಚು ಜಾನುವಾರು ಸಾಕಾಣಿಕೆ ಮಾಡುವುದರಿಂದ ಬೇಡಿಕೆಗೆ ಅನುಗುಣವಾಗಿ ವೈ.ಎನ್. ಹೊಸಕೋಟೆ ಹೋಬಳಿಯಲ್ಲಿ ಸಹ ಮೇವು ಬ್ಯಾಂಕನ್ನು ಪ್ರಾರಂಭಿಸಲು ಸ್ಥಳ ಪರಿಶೀಲನೆ ಮಾಡಿದ್ದು ಅತಿ ಶೀಘ್ರವಾಗಿ ಮೇವು ಬ್ಯಾಂಕನ್ನು ಪ್ರಾರಂಭಿಸಲಾಗುವುದು. ತಾಲೂಕಿನ ತಹಸೀಲ್ದರರಾದ ಸಂತೋಷ್ ಕುಮಾರ್ ಮತ್ತು ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಹೊರಕೇರಪ್ಪ ರವರು ಮೇವು ಬ್ಯಾಂಕಿನ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದು ಮೇವು ಬ್ಯಾಂಕ್‌ನಲ್ಲಿ ಯಾವುದೇ ಸಮಸ್ಯೆ ಯಾಗದಂತೆ ನಿಗವಹಿಸಲಿದ್ದಾರೆ. ಮುಂಗಾರಿನಲ್ಲಿ ಮಳೆ ಬಂದು ಮೇವು ಬರುವವರೆಗೂ ಮೇವು ಬ್ಯಾಂಕನ್ನು ನಡೆಸುವುದರಿಂದ ಪಶುಪಾಲಕರು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದ್ದಾರೆ.