ಸೆ.8ಕ್ಕೆ ಕಸಬಾ ಹೋಬಳಿಯಲ್ಲಿ ಪ್ರಥಮ ಜಾನಪದ ಸಮ್ಮೇಳನ

| Published : Sep 04 2024, 01:51 AM IST

ಸಾರಾಂಶ

ಸೆ.8 ರಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ತು ಅಜ್ಜಂಪುರ ಘಟಕದಿಂದ ಮುದಿಗೆರೆಯಲ್ಲಿ ನಡೆಯಲಿರುವ ಅಜ್ಜಂಪುರ ಕಸಬಾ ಹೋಬಳಿ ಮಟ್ಟದ ಪ್ರಥಮ ಜಾನಪದ ಸಮ್ಮೇಳನದ ಪ್ರಯುಕ್ತ ಸಮ್ಮೇಳನಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಅಜ್ಜಂಪುರ

ಸೆ.8 ರಂದು ತಾಲೂಕು ಕರ್ನಾಟಕ ಜಾನಪದ ಪರಿಷತ್ತು ಅಜ್ಜಂಪುರ ಘಟಕದಿಂದ ಮುದಿಗೆರೆಯಲ್ಲಿ ನಡೆಯಲಿರುವ ಅಜ್ಜಂಪುರ ಕಸಬಾ ಹೋಬಳಿ ಮಟ್ಟದ ಪ್ರಥಮ ಜಾನಪದ ಸಮ್ಮೇಳನದ ಪ್ರಯುಕ್ತ ಸಮ್ಮೇಳನಾಧ್ಯಕ್ಷರಿಗೆ ಸಾಂಪ್ರದಾಯಿಕ ಆಹ್ವಾನ ನೀಡಲಾಯಿತು.

ಸಮ್ಮೇಳನದ ಸರ್ವಾಧ್ಯಕ್ಷರಾದ ಹಿರಿಯ ಜಾನಪದ ಕಲಾವಿದ ಹನುಮಂತಪ್ಪನವರಿಗೆ ಅವರ ಸ್ವಗೃಹದಲ್ಲಿ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಡುವಂತೆ ಮನವಿ ಮಾಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಮಾತನಾಡಿ, ಶ್ರೀಯುತ ಹನುಮಂತಪ್ಪನವರು ಮೂಲತಃ ಜಾನಪದ ಹಾಡುಗಾರರು, ರಂಗ ಕಲಾವಿದರಾಗಿ ಬಹಳಷ್ಟು ನಾಟಕದಲ್ಲಿ ಅಭಿನಯಿಸುತ್ತಾ ಸಾಹಿತ್ಯ, ಒಗಟು, ಗಾದೆ, ಜಾನಪದ ಹಾಡುಗಳ ಕಾರ್ಯಕ್ರಮವನ್ನು ನೀಡಿ, ಜನಪದ ಕಲೆ ಸಾಹಿತ್ಯದ ಬಗ್ಗೆ ಯುವಪೀಳಿಗೆಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ಆಂಜನೇಯ ಜಾನಪದ ಕಲಾತಂಡ ಕಟ್ಟಿ ರಾಜ್ಯಾದ್ಯಂತ ಬಹಳಷ್ಟು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ ಎಂದರು.

ಇಂದಿನ ಪೀಳಿಗೆಯು ಪಾಶ್ಚಾತ್ಯ ಸಂಸ್ಕೃತಿಯ ಗುಂಗಿನಿಂದ ಹೊರ ಬರಲು ಯುವಕರಿಗೆ, ಜನಪದ ಕಲಾಸಕ್ತರಿಗೆ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ವೇದಿಕೆ ಮಾಡಿಕೊಡಲು ಇಂತಹ ಸಮ್ಮೇಳನಗಳು ಅತ್ಯಗತ್ಯವಾಗಿವೆ ಎಂದು ತಿಳಿಸಿದರು.

ಅಜ್ಜಂಪುರ ತಾಲೂಕು ಘಟಕದ ಅಧ್ಯಕ್ಷ ಡಾ. ಮಾಳೇನಹಳ್ಳಿ ಬಸಪ್ಪ ಮಾತನಾಡಿ, ಜಿಲ್ಲೆಯ ಎಲ್ಲ ಕಲಾವಿದರಿಗೆ ಅವರ ಜಾನಪದ ಕಲೆಯ ಅನಾವರಣಕ್ಕೆ ಸಮ್ಮೇಳನದ ವೇದಿಕೆಯಲ್ಲಿ ಅವಕಾಶ ನೀಡಲಾಗುವುದು. ಡೊಳ್ಳು ಕುಣಿತ, ವೀರಗಾಸೆ, ಪಟ ಕುಣಿತ, ಜಾನಪದ ನೃತ್ಯ,ಕಂಸಾಳೆ, ಡೊಳ್ಳು, ಸೋಮನ ಕುಣಿತ, ಚಿಟ್ಟಿ ಮೇಳ, ಗರುಡಿ ಗೊಂಬೆ ಕುಣಿತ ಮುಂತಾದ ಕಲಾತಂಡಗಲ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಜಾನಪದ ಸಾಹಿತಿ ಚಿಕ್ಕನಲ್ಲೂರಿನ ಬಿ. ರಾಜಪ್ಪ ಮಾತನಾಡಿ, ಸಮ್ಮೇಳನದ ಅಧ್ಯಕ್ಷರನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿ, ಕಲಾತಂಡದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ವೇದಿಕೆವರೆಗೆ ಕರೆತರಲಾಗುವುದು ಎಂದು ತಿಳಿಸಿದರು.

ಅಜ್ಜಂಪುರ ತಾಲೂಕು ಕಜಾಪ ಗೌರವಾಧ್ಯಕ್ಷ ಮರುಳ ಸಿದ್ದಪ್ಪ, ಹಿರೇನಲ್ಲೂರು ಹೋಬಳಿ ಅಧ್ಯಕ್ಷ ಚಿಕ್ಕನಲ್ಲೂರು ಜಯಣ್ಣ, ಸಾಹಿತಿ ಮುದಿಗೆರೆ ಲೋಹಿತ್, ಕಲಾವಿದರಾದ ಮಂಜಪ್ಪ, ತಿಪ್ಪೇಶ, ಪರಮೇಶ್ವರಪ್ಪ ಚಿಕ್ಕನಲ್ಲೂರು ತಿಪ್ಪೇಶ್ ನಾಗಮ್ಮ, ರತ್ನಮ್ಮ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.