ದೊಡ್ಡಬಳ್ಳಾಪುರ ನಗರಸಭೆ ಜಿಲ್ಲೆಗೆ ಪ್ರಥಮ

| Published : May 13 2025, 01:31 AM IST

ಸಾರಾಂಶ

ದೊಡ್ಡಬಳ್ಳಾಪುರ: ತೆರಿಗೆ ವಸೂಲಿ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇ-ಖಾತಾ ಆಂದೋಲನ ಸಾಧನೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಹೇಳಿದರು.

ದೊಡ್ಡಬಳ್ಳಾಪುರ: ತೆರಿಗೆ ವಸೂಲಿ ಹಾಗೂ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಇ-ಖಾತಾ ಆಂದೋಲನ ಸಾಧನೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಪ್ರಥಮ ಬಾರಿಗೆ ತೆರಿಗೆ ವಸೂಲಿಯಲ್ಲಿ ಶೇ.100ರಷ್ಟು ಸಾಧನೆ ಮಾಡಲಾಗಿದೆ. ಸ್ಥಳೀಯವಾಗಿ ಸಂಪನ್ಮೂಲ ದೃಢೀಕರಣದಿಂದಾಗಿ ನಗರದಲ್ಲಿನ 31 ವಾರ್ಡ್‌ಗಳಲ್ಲೂ ನಗರಸಭಾ ನಿಧಿಯಲ್ಲಿ ತಲಾ ₹10 ಲಕ್ಷ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆಯಲಾಗಿದೆ ಎಂದರು.

ಉಪಾಧ್ಯಕ್ಷ ಎಂ.ಮಲ್ಲೇಶ್ ಮಾತನಾಡಿ, ನಗರದ ಕೆ.ಆರ್.ಮಾರುಕಟ್ಟೆ ಪ್ರದೇಶ, ಎಲ್ಐಸಿ ಕಚೇರಿ ಸಮೀಪ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಾಗುತ್ತಿದೆ. ನಗರದ ಪ್ರಮುಖ ನಾಲ್ಕು ರಸ್ತೆಗಳ ಅಗಲೀಕರಣಕ್ಕೆ ಸರ್ವೇ ಕೆಲಸ ನಡೆಸಲಾಗಿದೆ. ಶಾಸಕರು ಅಗತ್ಯ ಆರ್ಥಿಕ ನೆರವು ನೀಡುವ ಭರವಸೆ ನೀಡಿದ್ದಾರೆ. ನಗರದಲ್ಲಿನ ಮುತ್ತೂರು, ನಾಗರಕೆರೆ, ಕಲ್ಯಾಣಿಗಳ ಅಭಿವೃದ್ಧಿಗೆ ಅಮೃತ-2.0 ಯೋಜನೆಯಲ್ಲಿ ₹10 ಕೋಟಿ ಅನುದಾನ ದೊರೆತಿದೆ ಎಂದರು.

ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ಮಾತನಾಡಿ, ವಾಣಿಜ್ಯ ಪರವಾನಿಗಿ ನೀಡುವಲ್ಲಿ ಶೇ.70ರಷ್ಟು ಸಾಧನೆ ಮಾಡಲಾಗಿದೆ. ನಗರಸಭೆಯ ಪ್ರತಿ ವಾರ್ಡ್ಗಳ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ನಿಧಿಯಲ್ಲಿ ₹4 ಲಕ್ಷ ನೀಡಿದ್ದಾರೆ. ಇ-ಖಾತಾ ಆಂದೋಲನದಿಂದಾಗಿ ಖಾತೆಗಳಿಗಾಗಿ ಅರ್ಜಿ ಸಲ್ಲಿಕೆ ಹೆಚ್ಚಾಗಿರುವುದರಿಂದ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿವೆ. ಖಾತಾ ಆಂದೋಲನ ಕಾಲ ಮಿತಿಯಲ್ಲಿ ಮುಗಿಸಬೇಕಿದೆ. ನಗರಸಭೆಗೆ ಸಾರ್ವಜನಿಕರು ಪಾವತಿಸುವ ತೆರಿಗೆ ಸೇರಿದಂತೆ ಇತರೆ ಲೆಕ್ಕಪತ್ರಗಳನ್ನು ಗಣಕೀಕೃತಗೊಳಿಸಲಾಗುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿ ನಿಖರವಾದ ಲೆಕ್ಕ ಹಾಗೂ ತೆರಿಗೆ ಪಾವತಿ ಸರಳೀಕೃತವಾಗಲಿದೆ ಎಂದರು.12ಕೆಡಿಬಿಪಿ2-

ದೊಡ್ಡಬಳ್ಳಾಪುರ ನಗರಸಭೆ ಕಾರ್ಯಾಲಯದಲ್ಲಿ ಅಧ್ಯಕ್ಷೆ ಸುಮಿತ್ರ ಆನಂದ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್ ಹಾಜರಿದ್ದರು.