ಸಾರಾಂಶ
ರೈತರು, ಅಧಿಕಾರಿಗಳ ಸಭೆ । ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧ್ಯಕ್ಷತೆ । ಕೃಷಿ ಸಂಬಂಧಿತ ಹಲವು ವಿಚಾರ ಚರ್ಚೆ । ಮೊದಲಿಗೆ ಐದು ತಾಲೂಕಿನಲ್ಲಿ ಅನುಷ್ಠಾನ
ಕನ್ನಡಪ್ರಭ ವಾರ್ತೆ ಚಾಮರಾಜನಗರಜಿಲ್ಲೆಯ 130 ಗ್ರಾಮ ಪಂಚಾಯಿತಿಗಳ ಪೈಕಿ ಕನಿಷ್ಠ 50 ಗ್ರಾಮ ಪಂಚಾಯಿತಿಗಳನ್ನು ಮೊದಲ ಹಂತದಲ್ಲಿ ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಂಡು, ಸಹಜ ಕೃಷಿ ಮಾಡಲು ಇಚ್ಛಿಸುವ ಆಯ್ದ ರೈತರಿಗೆ ಹನಿ ನೀರಾವರಿ, ವಿವಿಧ ಸಸ್ಯಗಳು, ಮಾನವ ಶ್ರಮ ಮತ್ತು ಅವಶ್ಯವಿರುವ ಇತ್ಯಾದಿ ಒಳಹರಿವುಗಳನ್ನು ಮತ್ತು ಸೂಕ್ತ ತರಬೇತಿ ಒದಗಿಸಕೊಡುವ ಮೂಲಕ ಸಹಜ ಕೃಷಿಯನ್ನು ಅಳವಡಿಸಲು ನೆರವು ನೀಡಲು ಕಾರ್ಯಯೋಜನೆಯನ್ನು ರೂಪಿಸಲಾಯಿತು.
ಚಾಮರಾಜನಗರ ಜಿಲ್ಲೆಯ ಐದು ತಾಲೂಕಿನಲ್ಲಿ ಪಂಚಾಯತ್ ಮಟ್ಟದಲ್ಲಿ ಸಹಜ ಕೃಷಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚಾಮರಾಜನಗರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ರೈತರು ಮತ್ತು ಚಾಮರಾಜನಗರ ಜಿಲ್ಲಾಡಳಿತ, ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಕೃಷಿ ವಿಜ್ಞಾನ ಕೇಂದ್ರದ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚೆ ಮಾಡಲಾಯಿತು.ಸಹಜ ಕೃಷಿಯನ್ನು ಮಾಡುವುದರಿಂದ ಹವಾಮಾನ ಬದಲಾವಣೆಗೆ ಪರಿಹಾರ, ಮಣ್ಣು ಮತ್ತು ನೀರಿನ ಸಂರಕ್ಷಣೆ, ರಾಸಾಯನಿಕ ಮುಕ್ತ ಆಹಾರ ಮತ್ತು ಮುಖ್ಯವಾಗಿ ರೈತರು ಸುಸ್ಥಿರ ಆದಾಯವನ್ನು ಪಡೆಯಬಹುದು ಎಂದು ಸದರಿ ಯೋಜನೆಯ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಬಹಳ ಆಸಕ್ತಿಯಿಂದ ಒಪ್ಪಿಗೆ ನೀಡಿದ್ದರು. ಸಂಬಂಧಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲಿ ಜಾರಿ ಮಾಡಲು ರೈತರೊಂದಿಗೆ ಕಾರ್ಯಪ್ರವೃತ್ತರಾಗುವಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದರು. ಚಾಮರಾಜನಗರ ಜಿಲ್ಲೆಯಲ್ಲಿ ಅನುಷ್ಠಾನವಾಗುವ ಸಹಜ ಕೃಷಿ ಮಾದರಿ ಇಡೀ ವಿಶ್ವಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ರೈತರು ಸಹಕಾರ ನೀಡಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಭೆಯಲ್ಲಿ ತಿಳಿಸಿದರು.
ತುಮಕೂರಿನ ಗಾಂಧಿ ಸಹಜ ಬೇಸಾಯ ಶಾಲೆಯ ವಿಜ್ಞಾನಿ ಡಾ.ಎಚ್.ಮಂಜುನಾಥ್ ಅವರು ಕಾರ್ಯಯೋಜನೆ ಅಳವಡಿಸಲು ಬೇಕಾದ ರೂಪುರೇಷೆಗಳ ಮಾಹಿತಿಯನ್ನು ಸವಿವರವಾಗಿ ಸಭೆಯಲ್ಲಿ ಮಂಡಿಸಿದರು.ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಜಿಪಂ ಉಪ ಕಾರ್ಯದರ್ಶಿ ಪಿ. ಲಕ್ಷ್ಮಿ, ರೈತರ ನಿಯೋಗದ ನೇತೃತ್ವವನ್ನು ರೈತ ಸಂಘದ ಮುಖಂಡರಾದ ಹೊನ್ನೂರು ಪ್ರಕಾಶ್ ವಹಿಸಿದ್ದರು. ಜಂಟಿ ಕೃಷಿ ನಿರ್ದೇಶಕ ಅಬೀದ್, ಕೆವಿಕೆ ಮುಖ್ಯಸ್ಧ ಜಿ.ಎಸ್. ಯೋಗೀಶ್, ಜೆಎಸ್‌ಬಿ ಪ್ರತಿಷ್ಠಾನದ ಶಶಿಕುಮಾರ್, ಕೃಷಿ ಸಲಹೆಗಾರ ಪ್ರಶಾಂತ್ ಜಯರಾಂ, ರೈತ ಮುಖಂಡರಾದ ಶಿವಕುಮಾರಸ್ವಾಮಿ, ಅಗತಗೌಡನಹಳ್ಳಿ ಜಗದೀಶ್, ಮಹದೇಶ್ವರ ಬೆಟ್ಟದ ಮಾದೇಶ್, ಮುಂತಾದವರು ಇದ್ದರು.
ಸಹಜ ಕೃಷಿಯನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಲು ಆಸಕ್ತಿ ಹೊಂದಿರುವ ಚಾಮರಾಜನಗರ ಜಿಲ್ಲೆಯ ರೈತರು ಈ ಸಾಮೂಹಿಕ ಪ್ರಯತ್ನದಲ್ಲಿ ಭಾಗಿಯಾಗಿ ಸುಸ್ಥಿರ ಸಮಾಜ ನಿರ್ಮಾಣ ಮಾಡಲು ಸಹಕಾರ ನೀಡಲು ಮತ್ತು ಈ ಚಳುವಳಿಯ ಭಾಗವಾಗಿ ಕೆಲಸ ಮಾಡಲು ಮುಕ್ತ ಮನಸ್ಸು ಹೊಂದಿರುವವರು ತೊಡಗಿಸಿಕೊಳ್ಳಬಹುದು.ಪ್ರಶಾಂತ್ ಜಯರಾಮ್, ಕೃಷಿ ಸಲಹೆಗಾರರು.