ಬೆಂಗಳೂರಿಗೆ ಸೀಮಿತವಾಗಿದ್ದ ಈ ಪಿಂಚಣಿದಾರರ ಆದಾಲತ್ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಲಾಗಿದೆ. ಈ ಅದಾಲತ್‌ನಿಂದಾಗಿ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಬಿಎಸ್‌ಎನ್‌ಎಲ್ ಪಿಂಚಣಿದಾರರ ಸಮಸ್ಯೆಗಳ ತೀವ್ರಗತಿಯಲ್ಲಿ ಪರಿಹರಿಸಲು ಸಹಕಾರಿಯಾಗಲಿದೆ.
ಹುಬ್ಬಳ್ಳಿ:
ದೂರಸಂಪರ್ಕ ಇಲಾಖೆಯ ಅಡಿ ಪ್ರತಿ ಮೂರು ತಿಂಗಳಿಗೊಮ್ಮೆ ಸಂವಹನ ಖಾತೆಗಳ ನಿಯಂತ್ರಕ (ಸಿಸಿಎ) ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುತ್ತಿದ್ದ ಬಿಎಸ್‌ಎನ್‌ಎಲ್ ಪಿಂಚಣಿದಾರರ ಅದಾಲತ್ ಮೊದಲ ಬಾರಿಗೆ ಹುಬ್ಬಳ್ಳಿಯಲ್ಲಿ ನಡೆಯಿತು.ಇಲ್ಲಿನ ಸ್ಟೇಷನ್ ರಸ್ತೆಯಲ್ಲಿರುವ ಬಿಎಸ್‌ಎನ್‌ಎಲ್ ಕಚೇರಿಯ ಸಂಚಾರ್ ಸದನದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಈ ಅದಾಲತ್‌ನಲ್ಲಿ ನೂರಾರು ಬಿಎಸ್‌ಎನ್‌ಎಲ್ ಪಿಂಚಣಿದಾರರು ಪಾಲ್ಗೊಂಡು ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರು.
ಈ ವೇಳೆ ಮಾತನಾಡಿದ ಬಿಎಸ್‌ಎನ್‌ಎಲ್‌ನ ಸಂವಹನ ಖಾತೆಗಳ ನಿಯಂತ್ರಕ(ಸಿಸಿಎ) ಅಧಿಕಾರಿ ಸುನೀಲ್ ಜಾರ್ಜ್, ಬೆಂಗಳೂರಿಗೆ ಸೀಮಿತವಾಗಿದ್ದ ಈ ಪಿಂಚಣಿದಾರರ ಆದಾಲತ್ ಮೊದಲ ಬಾರಿಗೆ ಉತ್ತರ ಕರ್ನಾಟಕ ಭಾಗದಲ್ಲಿ ಆಯೋಜಿಸಲಾಗಿದೆ. ಈ ಅದಾಲತ್‌ನಿಂದಾಗಿ ಧಾರವಾಡ, ಗದಗ, ಹಾವೇರಿ ಜಿಲ್ಲೆಯ ಬಿಎಸ್‌ಎನ್‌ಎಲ್ ಪಿಂಚಣಿದಾರರ ಸಮಸ್ಯೆಗಳ ತೀವ್ರಗತಿಯಲ್ಲಿ ಪರಿಹರಿಸಲು ಸಹಕಾರಿಯಾಗಲಿದೆ. ರಾಜ್ಯದಲ್ಲಿ ಒಟ್ಟು 60 ಸಾವಿರಕ್ಕೂ ಅಧಿಕ ಹಾಗೂ ಈ ಭಾಗ (ಧಾರವಾಡ, ಗದಗ, ಹಾವೇರಿ)ದಲ್ಲಿ ಒಟ್ಟು 2 ಸಾವಿರಕ್ಕೂ ಅಧಿಕ ಪಿಂಚಣಿದಾರರಿದ್ದಾರೆ. ಈ ಭಾಗದವರು ಬೆಂಗಳೂರಿಗೆ ಆಗಮಿಸಿ ಪಿಂಚಣಿ ಅದಾಲತ್‌ನಲ್ಲಿ ಪಾಲ್ಗೊಳ್ಳಲು ಸಮಸ್ಯೆಯಾಗುತ್ತಿತ್ತು. ಈ ಸಮಸ್ಯೆ ಅರಿತು ಈ ಬಾರಿ ಮೊದಲ ಬಾರಿಗೆ 42ನೇ ಪಿಂಚಣಿ ಅದಾಲತ್‌ನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರಿ, ಬೆಳಗಾವಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು.ಸೈಬರ್ ವಂಚನೆ ಕುರಿತು ಜಾಗೃತಿ:
ಸಿಸಿಎ ಅಧಿಕಾರಿ ಅಭಿಲಾಷ ಮಾತನಾಡಿ, ಸೈಬರ್ ವಂಚಕರಿಗೆ ಹೆಚ್ಚಾಗಿ ನಿವೃತ್ತರೆ ಬಲಿಯಾಗುತ್ತಿದ್ದಾರೆ. ಈ ಕುರಿತು ಪಿಂಚಣಿದಾರರಿಗೆ ಜಾಗೃತಿ ಮೂಡಿಸುವ ಕಾರ್ಯಾಗಾರ ಆಯೋಜಿಸುವ ಕಾರ್ಯವಾಗಬೇಕು. ಈ ಕುರಿತು ಪಿಂಚಣಿದಾರರ ಸಂಘ-ಸಂಸ್ಥೆಗಳು ಹೆಚ್ಚಿನ ಆಸಕ್ತಿ ವಹಿಸಿ ಕಾರ್ಯಾಗಾರ ನಡೆಸುವ ಮೂಲಕ ಜಾಗೃತಿ ಮೂಡಿಸಬೇಕು. ಇದಕ್ಕೆ ಬೇಕಾದ ಸಹಕಾರ ನೀಡಲಾಗುವುದು ಎಂದರು.ಈ ವೇಳೆ ಹಲವು ಪಿಂಚಣಿದಾರರು ತಮಗೆ ಆಗಿರುವ ಸಮಸ್ಯೆಗಳ ಕುರಿತು ಅದಾಲತ್‌ನಲ್ಲಿ ಮಾಹಿತಿ ನೀಡಿ ಸಮಸ್ಯೆ ಪರಿಹರಿಸಿಕೊಂಡರು. ಅಧಿಕಾರಿಗಳಾದ ಪ್ರಭಾಮಣಿ, ಅಪ್ಪಾಸ್ವಾಮಿ, ಎನ್. ಪ್ರಕಾಶ, ಪಂಚಣಿದಾರರಾದ ಎನ್.ಕೆ. ಗಂದಿಗವಾಡ, ಎಸ್.ಎಲ್. ಪೂಜಾರ, ಎಂ.ಎನ್. ಘೋರ್ಪಡೆ, ವಿ.ಎಸ್. ಸೊಪ್ಪಿನಮಠ ಸೇರಿದಂತೆ ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿಯ ಬಿಎಸ್‌ಎನ್‌ಎಲ್‌ನ ಪಿಂಚಣಿದಾರರು ಪಾಲ್ಗೊಂಡಿದ್ದರು.