ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ 1 ರಿಂದ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಗಳ ಪ್ರಥಮ ಹಂತದ ತಪಾಸಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಡಿಸೆಂಬರ 1 ರಿಂದ ವಿದ್ಯುನ್ಮಾನ ಮತಯಂತ್ರ ಹಾಗೂ ವಿವಿಪ್ಯಾಟ್ ಗಳ ಪ್ರಥಮ ಹಂತದ ತಪಾಸಣೆ ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಂಗಪ್ಪ ಹೇಳಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ವಿದ್ಯುನ್ಮಾನ ಮತಯಂತ್ರಗಳ ಮೊದಲ ಹಂತದ ತಪಾಸಣೆ ಕುರಿತು ಜರುಗಿದ ವಿವಿಧ ರಾಜಕೀಯ ಪಕ್ಷಗಳ ಜಿಲ್ಲಾ ಅಧ್ಯಕ್ಷರು, ಪ್ರತಿನಿಧಿಗಳೊಂದಿಗೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯ ಚುನಾವಣಾಧಿಕಾರಿಗಳ ನಿರ್ದೇಶನದಂತೆ ಇವಿಎಂ, ವಿವಿಪ್ಯಾಟ್ ಗಳ ಪ್ರಥಮ ಹಂತದ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ಕಾರ್ಯಕ್ಕೆ ವೇರ್‌ಹೌಸ್ ಸ್ವಚ್ಛತೆ ಕಾರ್ಯ, ಟೇಬಲ್ ಗಳ ವ್ಯವಸ್ಥೆ ಮಾಡಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಮತಯಂತ್ರಗಳ ಪರಿಶೀಲನೆ ಕಾರ್ಯ ವೀಕ್ಷಿಸಲು ಬರುವ ವಿವಿಧ ಪಕ್ಷದ ಪ್ರತಿನಿಧಿಗಳಿಗೆ ಮುಂಚಿತವಾಗಿ ಗುರುತಿನ ಚೀಟಿ ನೀಡಲಾಗುತ್ತದೆ. ಪರಿಶೀಲನೆ ನಡೆಯುವ ವೇರ್ ಹೌಸ್ ನಲ್ಲಿ ಮೊಬೈಲ್ ಹಾಗೂ ಇನ್ನಿತರ ವಿದ್ಯುನ್ಮಾನ ವಸ್ತುಗಳನ್ನು ತರುವುದು ಹಾಗೂ ಉಪಯೋಗಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ವೇರಹೌಸ್ ಹೊರಗಡೆ ಇರುವ ಕೌಂಟರ್ ನಲ್ಲಿ ಮೊಬೈಲ್ ಇಡುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.ಇವಿಎಂ, ವಿವಿಪ್ಯಾಟ್ ಯಂತ್ರಗಳ ಪ್ರಥಮ ಹಂತದ ತಪಾಸಣೆ ಕಾರ್ಯವನ್ನು ಡಿ.1ರಂದು ಬೆಳಗ್ಗೆ 9 ಗಂಟೆಗೆ ಪ್ರಮುಖ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಯಂತ್ರ ಹಾಗೂ ವಿವಿ ಪ್ಯಾಟ್‌ಗಳ ಆಯ್ಕೆ ಪ್ರಕ್ರಿಯೆ ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತಿನಿಧಿಗಳು ಹಾಜರಿರುವಂತೆ ಜಿಲ್ಲಾಧಿಕಾರಿಗಳು ಕೋರಿದರು. ಈ ಪ್ರಕ್ರಿಯೆ ತಪಾಸಣೆ ಕಾರ್ಯ ಮುಗಿಯುವವರೆಗೆ ಪ್ರತಿದಿನ ಬೆಳಗ್ಗೆ 9 ರಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಶ್ರೀನಿವಾಸ ಬಳ್ಳಾರಿ, ಕುತುಬುದ್ದಿನ್ ಖಾಜಿ, ಎಂ.ಬಿ. ಸಿದ್ದಗೋಣಿ, ಯಲ್ಲಪ್ಪ ಸನಕ್ಯಾನವರ, ಅಭಿಷೇಕ ತಳ್ಳಿಕೇರಿ, ರಮೇಶ ಸನದಿ, ಪ್ರಭು ಹಳ್ಳೂರ, ಶಿವಾನಂದ ಸುರಪುರ, ಪ್ರಭು ರುದ್ರಾಕ್ಷಿ, ನಾಗರಾಜ ಮನ್ನಿಕೇರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.