ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪಿಎಂ ಸ್ವನಿಧಿ-ವಿಶ್ವಕರ್ಮ ಯೋಜನೆಗಳ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಯೋಜನೆಗಳ ಅನುಷ್ಠಾನದ ರಾಜ್ಯ ಉಸ್ತುವಾರಿ ಹಾಗೂ ಮಾಜಿ ಸಚಿವ ಎಸ್.ಎ. ರಾಮದಾಸ್ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ವಿಶ್ವಕರ್ಮ ಯೋಜನೆಗೆ ದೇಶದಲ್ಲಿ ಇದುವರೆಗೆ ಅಂದಾಜು 59 ಲಕ್ಷ ಜನರು ಅರ್ಜಿ ಹಾಗೂ ರಾಜ್ಯದಲ್ಲಿ ಸುಮಾರು 18 ಲಕ್ಷ ಜನರು ಅರ್ಜಿ ಹಾಕಿದ್ದಾರೆ. ಗ್ರಾಮೀಣ ಮತ್ತು ನಗರ ಪ್ರದೇಶದ 18 ವರ್ಗಗಳ ಕುಶಲಕರ್ಮಿಗಳಿಗೆ ಈ ಯೋಜನೆ ತಲುಪಲಿದೆ. ಜಿಲ್ಲೆಯಲ್ಲಿಯೂ ಈ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ ಎಂದು ತಿಳಿಸಿದರು.
15 ದಿನ ವಿಶೇಷ ತರಬೇತಿ:2028 ರವರೆಗೆ ಈ ಯೋಜನೆಗಳು ಚಾಲ್ತಿಯಲ್ಲಿ ಇರುತ್ತವೆ. ಕೇಂದ್ರ ಸರ್ಕಾರ ಇದಕ್ಕಾಗಿಯೇ ₹13 ಸಾವಿರ ಕೋಟಿ ಮೀಸಲಿರಿಸಿದೆ. ವಿಶ್ವಕರ್ಮ ಯೋಜನೆಗೆ ಈಗಾಗಲೇ ನೊಂದಣಿ ಆರಂಭವಾಗಿದ್ದು, ಆಯ್ಕೆಯಾದವರಿಗೆ 7 ದಿನಗಳ ತರಬೇತಿ ನೀಡಲಾಗುವುದು. ಈ ತರಬೇತಿ ಅವಧಿಯಲ್ಲಿ ₹500 ಗೌರವಧನ ನೀಡಲಾಗುವುದು. ಜೊತೆಗೆ ಇನ್ನೂ 15 ದಿನ ವಿಶೇಷ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಶೇ.7ರಷ್ಟು ಬಡ್ಡಿ ಸಬ್ಸಿಡಿ:ಕೋವಿಡ್ ಸಂಕಷ್ಟದ ಬಳಿಕ ಬೀದಿಬದಿ ವ್ಯಾಪಾರಿಗಳು ತೊಂದರೆಗೆ ಒಳಗಾದರು. ಅವರಿಗೆ ಆರ್ಥಿಕ ಶಕ್ತಿ ತುಂಬುವ ಹಿನ್ನೆಲೆಯಲ್ಲಿ ಸ್ವನಿಧಿ ಯೋಜನೆ ಜಾರಿಗೆ ತರಲಾಯಿತು. ಈಗಾಗಲೇ ಸುಮಾರು 60 ಲಕ್ಷ ಜನರಿಗೆ ₹11 ಸಾವಿರ ಕೋಟಿ ಬಂಡವಾಳ ನೀಡಲಾಗಿದೆ. ಈ ಯೋಜನೆ ಪ್ರಕಾರ ಆರಂಭದಲ್ಲಿ ₹10 ಸಾವಿರ ಸಾಲ ನೀಡಲಾಗುವುದು. ಅನಂತರ ಆ ಸಾಲ ತೀರಿದ ಮೇಲೆ ₹50 ಸಾವಿರ ಹಾಗೂ ₹1 ಲಕ್ಷದವರೆಗೂ ಬಂಡವಾಳ ಸಾಲ ನೀಡಲಾಗುತ್ತದೆ. ಶೇ.7ರಷ್ಟು ಬಡ್ಡಿ ಸಬ್ಸಿಡಿ ದೊರೆಯಲಿದೆ ಎಂದರು.
ಈ ಯೋಜನೆ ಜೊತೆಗೆ ಪ್ರಧಾನಮಂತ್ರಿಗಳ ಜೀವನ್ ಭೀಮಾ ಯೋಜನೆ, ಸುರಕ್ಷಾ ಯೋಜನೆ, ಪಿಂಚಣಿ ಯೋಜನೆ ಮುಂತಾದ ಯೋಜನೆಗಳನ್ನು ಕೂಡ ತಲುಪಿಸಲಾಗುವುದು. ಅಸಂಘಟಿತ ವಲಯದವರಿಗೆ ಪ್ರತಿ ತಿಂಗಳು ಪಿಂಚಣಿ ರೂಪದಲ್ಲಿ ಧನಸಹಾಯ ಮಾಡಲಾಗುವುದು. ಗರ್ಭೀಣಿಯಾದರೆ ₹5 ಸಾವಿರ ಹಾಗೂ ಬಾಣಂತನಕ್ಕೆ ₹6 ಸಾವಿರ ಧನಸಹಾಯ ನೀಡಲಾಗುವುದು. ಅಲೆಮಾರಿಗಳಿಗೂ ಕೂಡ ಈ ಯೋಜನೆ ತಲುಪಿಸಲಾಗುತ್ತದೆ. ಒಟ್ಟಾರೆ ಕಟ್ಟಕಡೆಯ ವ್ಯಕ್ತಿಯನ್ನು ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಈ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.ಶಿವಮೊಗ್ಗದಲ್ಲಿ ಯೋಜನೆಯಲ್ಲಿ ಸುಮಾರು 6037 ಗುರಿ ಹೊಂದಲಾಗಿತ್ತು. ಈಗಾಗಲೇ 5520 ಜನರು ಹೆಸರನ್ನು ನೋಂದಾಯಿಸಿದ್ದಾರೆ. ಡಿ.30ರೊಳಗೆ ಶೇ.100 ಈ ಯೋಜನೆ ಸಫಲವಾಗುತ್ತದೆ. ಸುಮಾರು 382 ಜನರು ಈಗಾಗಲೇ ಸಾಲ ಪಡೆದು ಹಿಂದಿರುಗಿಸಿ ಹೆಚ್ಚಿನ ಸಾಲ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ ಎಂದು ಹೇಳಿದರು.
ಮರ, ಕಬ್ಬಿಣದ ಕೆಲಸ, ಮಡಕೆ ತಯಾರಿಕರು, ಚಿನ್ನದ ಕೆಲಸ, ಹಳೆಯ ಪಾತ್ರೆಗಳ ವ್ಯಾಪಾರಿಗಳು, ಬಡಿಗೆ ಚಮ್ಮಾರ, ಬಿದಿರು ವ್ಯಾಪಾರಿಗಳು, ಹೂ ಮಾರುವವರು, ಮೀನಿನ ಬಲೆ ತಯಾರಕರು, ಗೋಣಿ ಚೀಲ ತಯಾರಕರು, ಸವಿತಾ ಸಮಾಜದವರು ಸೇರಿದಂತೆ ಸುಮಾರು 18 ವೃತ್ತಿಗಳನ್ನು ಈ ಯೋಜನೆಯ ವ್ಯಾಪ್ತಿಗೆ ತರಲಾಗುತ್ತದೆ. ರಾಜ್ಯದ 4 ಜನ ಪುಟ್‌ಪಾತ್ ವ್ಯಾಪಾರಿಗಳಿಗೆ ಈ ಬಾರಿಯ ಗಣರಾಜ್ಯೋತ್ಸವ ದಿನದಂದು ಸತ್ಕರಿಸಲಾಗುತ್ತದೆ. ಹಾಗೆಯೇ ವಿಶ್ವಕರ್ಮ ಯೋಜನೆಯ ಫಲಾನುಭವಿಗಳಾದ 10 ಜನರು ರಾಜ್ಯದ ಪರವಾಗಿ ಭಾಗವಹಿಸಲಿದ್ದಾರೆ. ಇದು ರಾಜ್ಯಕ್ಕೆ ಸಂದ ಗೌರವವಾಗಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಬಿ.ಕೆ.ಶ್ರೀನಾಥ್, ಶಿವರಾಜ್, ಮಾಲತೇಶ್, ಪ್ರಕಾಶ್, ಲೋಕನಾಥ್, ಋಷಿಕೇಶ್ ಪೈ, ಮೋಹನ್, ಅಣ್ಣಪ್ಪ ಇದ್ದರು.
- - - ಬಾಕ್ಸ್-1 ಲೋಕಸಭಾ ಚುನಾವಣೆಗೆ ಆಕಾಂಕ್ಷಿ ಅಲ್ಲ ಮೈಸೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಯಾರೇ ಆಗಲಿ ನಾನಂತೂ ಆಕಾಂಕ್ಷಿಯಲ್ಲ ಎಂದು ಮಾಜಿ ಸಚಿವ ರಾಮದಾಸ್ ತಿಳಿಸಿದರು. ಮೈಸೂರಿನ ಕೃಷ್ಣರಾಜ ಕ್ಷೇತ್ರ ಸಂಘಟನೆಯ ದೃಷ್ಟಿಯಿಂದ ದೇಶದಲ್ಲಿ ಹೆಸರು ಮಾಡಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಬಾರದು ಎಂದು ಪಕ್ಷ ಸೂಚಿಸಿದ ಮೇರೆಗೆ ಬೇರೆಯವರಿಗೆ ಬಿಟ್ಟು ಕೊಟ್ಟಿದ್ದೇನೆ.ಪಕ್ಷ ಏನೇ ತೀರ್ಮಾನ ತೆಗೆದುಕೊಂಡರು ಅದಕ್ಕೆ ಬದ್ಧರಾಗಿದ್ದೇವೆ. ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಗೆಲ್ಲಿಸಿ ಕೊಂಡು ಬರುತ್ತೇವೆ ಎಂದರು.- - - ಬಾಕ್ಸ್-2
ಯುವನಿಧಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷ ಹೈಜಾಕ್ಯುವ ನಿಧಿ ಕಾರ್ಯಕ್ರಮವು ಸರ್ಕಾರದ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮ ಕಾಂಗ್ರೆಸ್ ಹೈಜಾಕ್ ಮಾಡಿಕೊಂಡಿದೆ. ರಾಜಕೀಯ ಕಾರಣಕ್ಕೆ ಕಾಂಗ್ರೆಸ್ ಮುಖಂಡರು ಕಾರ್ಯಕ್ರಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಆರೋಪಿಸಿದರು.
ಶಿವಮೊಗ್ಗದಲ್ಲಿ ಜ.12ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಯುವನಿಧಿಗೆ ಚಾಲನೆ ಹಿನ್ನೆಲೆ ಕಾಂಗ್ರೆಸ್ ಮುಖಂಡ ಎಚ್.ಸಿ.ಯೋಗೀಶ್ ಪಿಯು ಕಾಲೇಜುಗಳಿಗೆ ಅಕ್ರಮ ಪ್ರವೇಶ ಮಾಡುತ್ತಿದ್ದಾರೆ. ಯಾವುದೇ ಸುತ್ತೋಲೆ ನೀಡದೇ ಮೌಖಿಕ ಸೂಚನೆ ನೀಡಿ ವಿದ್ಯಾರ್ಥಿಗಳ ಕಳುಹಿಸುವಂತೆ ಪ್ರಾಂಶುಪಾಲರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಬಸ್ ಗಳನ್ನು ಕಳುಹಿಸುತ್ತೇವೆ ವಿದ್ಯಾರ್ಥಿಗಳ ಕಳುಹಿಸಿ ಎನ್ನುತ್ತಿದ್ದಾರೆ. ಹೀಗೆ ಹೇಳಲು ಅವರಿಗೆ ಯಾರೂ ಅನುಮತಿ ನೀಡಿದವರು. ಅದರಲ್ಲೂ ಪಿಯುಸಿ ಮಕ್ಕಳಿಗೂ ವಿದ್ಯಾನಿಧಿ ಯೋಜನೆಗೂ ಏನು ಸಂಬಂಧವಿದೆ ಎಂದು ಪ್ರಶ್ನಿಸಿದರು.ಕಾಲೇಜು ವಿದ್ಯಾರ್ಥಿಗಳು ಬಸ್‌ನಲ್ಲಿ ಹೋದಾಗ ಏನಾದರೂ ಅವಘಡ ಆದರೆ ಹೊಣೆ ಯಾರು, ಪದವಿ ನಂತರದ ವಿದ್ಯಾರ್ಥಿಗಳು ಈ ಯೋಜನೆಯ ಫಲಾನುಭವಿಗಳು. ಆದರೆ, ಕಾರ್ಯಕ್ರಮಕ್ಕೆ ಜನ ಸೇರಿಸುವ ಸಲುವಾಗಿ ಪಿಯುಸಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡ್ತಿದ್ದಾರೆ ಎಂದು ಹರಿಹಾಯ್ದರು.
- - - (-ಫೋಟೋ: ರಾಮದಾಸ್)