ಕನ್ನಡಪ್ರಭ ವಾರ್ತೆ ಬೈಲಹೊಂಗಲಧಾರವಾಡ ಜಿಲ್ಲೆಯ ದಡ್ಡಿ ಕಮಲಾಪುರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಶುಕ್ರವಾರ ನಡೆದ ವಿಭಾಗ ಮಟ್ಟದ ಶಾಲಾ ಬ್ಯಾಂಡ್ ಸ್ಪರ್ಧೆಯಲ್ಲಿ ಬೈಲಹೊಂಗಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಬೈಲಹೊಂಗಲ ನಾಡಿಗೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ಧಾರವಾಡ ಜಿಲ್ಲೆಯ ದಡ್ಡಿ ಕಮಲಾಪುರದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಶುಕ್ರವಾರ ನಡೆದ ವಿಭಾಗ ಮಟ್ಟದ ಶಾಲಾ ಬ್ಯಾಂಡ್ ಸ್ಪರ್ಧೆಯಲ್ಲಿ ಬೈಲಹೊಂಗಲ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ಬ್ರಾಸ್ ಬ್ಯಾಂಡ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ಶಾಲೆಗೆ ಹಾಗೂ ಬೈಲಹೊಂಗಲ ನಾಡಿಗೆ ಕೀರ್ತಿ ತಂದಿದ್ದಾರೆ.ವಿದ್ಯಾರ್ಥಿನಿಯರ ಶಿಸ್ತು, ಸಂಘಟಿತ ಪ್ರಯತ್ನ, ನಿರಂತರ ಅಭ್ಯಾಸ ಹಾಗೂ ತಂಡದ ಸಮನ್ವಯ ಈ ಅದ್ಭುತ ಸಾಧನೆಗೆ ಪ್ರಮುಖ ಕಾರಣವಾಗಿವೆ. ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆ ಸಮರ್ಥವಾಗಿ ಪ್ರದರ್ಶಿಸಿದ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಈ ಸಾಧನೆಗೆ ಪ್ರೋತ್ಸಾಹ ಮತ್ತು ಬೆಂಬಲ ನೀಡಿದ ಶಾಸಕರಾದ ಮಹಾಂತೇಶ ಕೌಜಲಗಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ರಾಮನಗೌಡ ಕನ್ನೊಳ್ಳಿ ರಾಜ್ಯಮಟ್ಟದ ಸ್ಪರ್ಧೆಯಲ್ಲಿಯೂ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಶಾಲೆ ಕೀರ್ತಿ ಮತ್ತಷ್ಟು ಹೆಚ್ಚಿಸಲಿ ಎಂದು ಅವರು ಶುಭ ಹಾರೈಸಿದರು.

ಪ್ರಾಂಶುಪಾಲೆ ಲಲಿತಾ ಕುಲಕರ್ಣಿ, ಸಿಬ್ಬಂದಿ ಹಾಗೂ ಬ್ಯಾಂಡ್ ತರಬೇತಿಗೆ ಮಾರ್ಗದರ್ಶನ ನೀಡಿದ ಆಂಥೋನಿ ಅವರ ಪರಿಶ್ರಮ ಮತ್ತು ಪ್ರೋತ್ಸಾಹ ಈ ಸಾಧನೆಗೆ ಮಹತ್ವದ ಕೊಡುಗೆ ನೀಡಿದೆ ಎಂದರು. ವಿದ್ಯಾರ್ಥಿನಿಯರ ಈ ಯಶಸ್ಸಿಗೆ ಶಾಲೆ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.