ಸಾರಾಂಶ
ಪಾಕಿಸ್ತಾನ ಸೇರಿದಂತೆ ಅಖಂಡ ಭಾರತ ಸ್ಥಾಪನೆ ಮಾಡುವುದು ಬಿಜೆಪಿ ಸರ್ಕಾರದ ಗುರಿ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮೊದಲು ಪಾಕಿಸ್ತಾನ ಆಕ್ರಮಿತ ಭಾರತವನ್ನು ವಶಪಡಿಸಿಕೊಳ್ಳುವುದು, ನಂತರ ಪಾಕಿಸ್ತಾನವೂ ಸೇರಿದಂತೆ ಅಖಂಡ ಭಾರತ ಸ್ಥಾಪನೆ ಮಾಡುವುದು ಬಿಜೆಪಿ ಸರ್ಕಾರದ ಗುರಿಯಾಗಿದೆ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.ಅವರು ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳವಾರ ನಡೆದ ಪ್ರಬುದ್ಧರ ಚಿಂತನಾ ಗೋಷ್ಠಿಯ ನಂತರ ನಡೆದ ಸಂವಾದದಲ್ಲಿ ಮಾತನಾಡಿದರು.ಈಗಾಗಲೇ ಪಾಕ್ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರುವ ಪ್ರಕ್ರಿಯೆ ಆರಂಭವಾಗಿದೆ. ಅಲ್ಲಿರುವ ಜನರು ತಮ್ಮನ್ನು ಭಾರತದಲ್ಲಿರುವ ಕಾಶ್ಮೀರಕ್ಕೆ ಸೇರಿಸುವಂತೆ ಆಂದೋಲನ ಶುರು ಮಾಡಿದ್ದಾರೆ, ಬಹಳ ಬೇಗ ಅಖಂಡ ಭಾರತದ ಕನಸು ನನಸಾಗುತ್ತದೆ ಎಂದವರು ಹೇಳಿದರು.ಬಲಶಾಲಿಯಾಗಿರುವವರನ್ನು ಮಾತ್ರ ಜನರು ಪ್ರೀತಿಸುತ್ತಾರೆ, ತಾಕತ್ತು ಇಲ್ಲದವರು ಎಷ್ಟೇ ಶಾಂತಿಯ ಬಗ್ಗೆ ಮಾತನಾಡಲಿ ಅವರಿಂದ ಶಾಂತಿಸ್ಥಾಪನೆ ಸಾಧ್ಯವಾಗುವುದಿಲ್ಲ. ದೇಶದಲ್ಲಿ ಶಾಂತಿ ಸ್ಥಾಪನೆ ಹೇಡಿಯಿಂದ ಸಾಧ್ಯವಿಲ್ಲ. ಭಾರತವೀಗ ಬಲಶಾಲಿಯಾಗಿದೆ. ಆದ್ದರಿಂದಲೇ ಪಾಕಿಸ್ಥಾನಕ್ಕೆ ಭಾರತದತ್ತ ನೋಡುವ ಧೈರ್ಯವಾಗುತ್ತಿಲ್ಲ, ಚೀನಾ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಅದಕ್ಕೆ ಮೋದಿ ನೇತೃತ್ವದ ಭಾರತದ ಶಕ್ತಿಯ ಅರಿವಾಗಿದೆ, ಆದ್ದರಿಂದ ಚೀನಾ ಕೂಡ ಭಾರತದತ್ತ ಕಣ್ಣೆತ್ತಿ ನೋಡುತ್ತಿಲ್ಲ ಎಂದರು.10 ವರ್ಷಗಳಲ್ಲಿ ಮೋದಿ ತೋರಿಸಿದ್ದು ಟ್ರೈಲರ್ ಮಾತ್ರ, ಪೂರ್ಣ ಸಿನೆಮಾ ಮುಂದಿನ 5 ವರ್ಷಗಳಲ್ಲಿ ನೋಡಲಿದ್ದೇವೆ ಎಂದವರು ಹೇಳಿದರು.ಮೋದಿ ಅಧಿಕಾರಕ್ಕೆ ಬರುವ ಮೋದಲು ದೇಶದ 55 ಕೋಟಿ ಜನರು ಬ್ಯಾಂಕಿಂಗ್ ವ್ಯವಹಾರ ಬಿಟ್ಟು, ಬ್ಯಾಂಕುಗಳನ್ನೇ ನೋಡಿರಲಿಲ್ಲ. ಮೋದಿ ಅವರು ಜನಧನ್ ಖಾತೆ, ಆಧಾರ್ ಕಾರ್ಡ್ ಮತ್ತು ಮೊಬೈಲ್ ಆಧಾರಿತ ಯೋಜನೆಗಳ ಮೂಲಕ ಅವರನ್ನು ದೇಶದ ಆರ್ಥಿಕ ವ್ಯವಸ್ಥೆಯೊಳಗೆ ತಂದಿದ್ದಾರೆ.ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ, ದಕ ಜಿಲ್ಲಾಧ್ಯಕ್ಷ ಸತೀಶ್ ಕಂಪಲ, ಶಾಸಕ ಯಶಪಾಲ್ ಸುವರ್ಣ, ಉಡುಪಿ ಚಿಕ್ಕಮಗಳೂರು ಉಸ್ತುವಾರಿ ನವೀನ್ ಶೆಟ್ಟಿ ಕುತ್ಯಾರು ವೇದಿಕೆಯಲ್ಲಿದ್ದರು. ಬಿಜೆಪಿ ಸಾಮಾಜಿಕ ಜಾಲತಾಣ ಉಸ್ತುವಾರಿ ವಿನೋದ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಜಿಲ್ಲಾ ಪ್ರ.ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ವಂದಿಸಿದರು.ಮೋದಿ ಗ್ಯಾರಂಟಿ ಸಿದ್ದರಾಮಯ್ಯರ ಗ್ಯಾರಂಟಿಯಂತಲ್ಲ: ತನ್ನ 3ನೇ ಅವಧಿಯಲ್ಲಿ ಭಾರತವನ್ನು ವಿಶ್ವದ 3ನೇ ಪ್ರಬಲ ಅರ್ಥ ವ್ಯವಸ್ಥೆಯನ್ನಾಗಿ ಮಾಡುವುದಾಗಿ ಮೋದಿ ಗ್ಯಾರಂಟಿ ನೀಡಿದ್ದಾರೆ. ಮೋದಿ ಗ್ಯಾರಂಟಿ ಎಂದರೆ ಅದು ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ನೀಡಿದ ಗ್ಯಾರಂಟಿಗಳಂತಲ್ಲ, ಕಾಂಗ್ರೆಸ್ ನಾಯಕರಿಗೆ ಸುಳ್ಳು ಹೇಳುವುದು ಸಂಪ್ರದಾಯವಾಗಿದೆ ಎಂದವರು ಟೀಕಿಸಿದರು.ಕಾಂಗ್ರೆಸ್ ಸರ್ಕಾರ ದೇಶದ್ರೋಹಿಗಳನ್ನು ಜೈಲಿನಿಂದ ಬಿಡುಗಡೆ ಮಾಡಿ, ರಕ್ಷಣೆಯನ್ನೂ ನೀಡುತ್ತಿದೆ, ದೇಶದ್ರೋಹಿ ಘೋಷಣೆಗಳನ್ನು ಕೂಗಿದರೆ ಅದನ್ನು ಬೆಂಬಲಿಸುತ್ತಿದೆ. ಇದನ್ನು ತಡೆಯಬೇಕಾದ ಪೊಲೀಸ್ ವ್ಯವಸ್ಥೆ ರಾಜ್ಯ ಸರ್ಕಾರಗಳ ಕೈಯಲ್ಲಿದೆ. ಆದ್ದರಿಂದ ದೇಶದ್ರೋಹಿಗಳಿಗೆ ಶಿಕ್ಷೆಯಾಗಬೇಕಾದರೆ, ಅವರಿಗೆ ರಕ್ಷಣೆ ನೀಡುವ ಪಕ್ಷ ಅಧಿಕಾರಕ್ಕೆ ಬರದಂತೆ ತಡೆಯಬೇಕು ಎಂದವರು ಪ್ರಶ್ನೆಯೊಂದಕ್ಕೆ ಫಡ್ನವಿಸ್ ಉತ್ತರಿಸಿದರು.