ಸಾರಾಂಶ
ಕಾರವಾರ: ಅಂಕೋಲಾ ತಾಲೂಕಿನ ಹೊನ್ನಳ್ಳಿ ಬಳಿ ಉದ್ದೇಶಿತ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ರೈತರ ಭೂಮಿ ಸಮೀಕ್ಷೆ ನಡೆಸಲು ಅಧಿಕಾರಿಗಳು ಹಾಗೂ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧಿಕಾರಿಗಳು ಮುಂದಾದಾಗ ಅದನ್ನು ತಡೆದು ಸಮೀಕ್ಷೆಗೆ ಬಂದ ಅಧಿಕಾರಿಗಳನ್ನು ವಾಪಸ್ ಕಳುಹಿಸುವಲ್ಲಿ ರೈತರು ಯಶಸ್ವಿಯಾಗಿದ್ದಾರೆ.
ವೃಕ್ಷಮಾತೆ, ಪದ್ಮಶ್ರೀ ತುಳಸಿ ಗೌಡ ಹಾಗೂ ಭಾರತೀಯ ಕಿಸಾನ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ನೇತೃತ್ವದಲ್ಲಿ ಸ್ಥಳೀಯ ರೈತರು ಸೇರಿ ಸರ್ವೇ ಕಾರ್ಯವನ್ನು ತಡೆಹಿಡಿದು ಅಧಿಕಾರಿಗಳನ್ನು ಮರಳಿ ಕಳುಹಿಸುವಲ್ಲಿ ಯಶಸ್ವಿಯಾದರು.ಅಧಿಕಾರಿಗಳು ಯಾವುದೇ ಅಧಿಕೃತ ನೋಟಿಸ್ ನೀಡದೆ ಸರ್ವೇಗೆ ಮುಂದಾಗಿದ್ದರು. ಈ ಯೋಜನೆಗೆ ರೈತರ ಸಂಪೂರ್ಣ ವಿರೋಧ ಇರುವಾಗ ಯೋಜನೆಗೆ ಜಮೀನನ್ನು ಕೊಡುವ ಪ್ರಶ್ನೆಯೇ ಇಲ್ಲ ಎಂದು ರೈತರು ಒಕ್ಕೊರಲಿನಿಂದ ತಾಕೀತು ಪಡಿಸಿದರು.
ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ, ಈ ಯೋಜನೆಗೆ ಪರ್ಯಾಯವಾಗಿ ಕಾಳಿ ನದಿಯಿಂದ ನೀರನ್ನು ತರಬಹುದು. ಹೊನ್ನಳ್ಳಿ ಬಳಿ ನದಿಯ ಸಮೀಪ ದೊಡ್ಡ ದೊಡ್ಡ ಕೆರೆ ನಿರ್ಮಿಸಿ ನೀರು ಸಂಗ್ರಹಿಸಬಹುದು. ಇದೇ ನದಿಗೆ ಉಪ್ಪು ನೀರು ಪ್ರವೇಶಿಸದಂತೆ ತಡೆಗೋಡೆ ನಿರ್ಮಿಸಿ ಚಿಕ್ಕ ಚಿಕ್ಕ ಬ್ಯಾರೇಜ್ ಮುಖಾಂತರ ನೀರು ಸಂಗ್ರಹಿಸಬಹುದು. ಸಮುದ್ರ ನೀರನ್ನು ನಿರ್ಲವಣೀಕರಣ ಮಾಡಿ ಸಿಹಿ ನೀರನ್ನು ಪಡೆಯಬಹುದು. ಇಷ್ಟೆಲ್ಲ ಪರ್ಯಾಯ ಮಾರ್ಗ ಇದ್ದರೂ ಒಳಹರಿವಿಲ್ಲದೆ ಬರಡಾಗಿರುವ ಗಂಗಾವಳಿ ನದಿಗೆ ಅಣೆಕಟ್ಟು ನಿರ್ಮಿಸುವುದು ಉಚಿತವಲ್ಲ. ಅಣೆಕಟ್ಟೆಗಾಗಿ ಅರಣ್ಯ ಹಾಗೂ ಕೃಷಿ ಭೂಮಿ ನಾಶ ಮಾಡುವುದನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದರು.ಪದ್ಮಶ್ರೀ ತುಳಸಿ ಗೌಡ, ಅರಣ್ಯ ನಿರ್ಮಾಣ ಹಾಗೂ ರಕ್ಷಣೆಗಾಗಿ ರಾಷ್ಟ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ, ಈಗ ಇಂತಹ ಯೋಜನೆಗೆ ನಾನು ನೆಟ್ಟು, ಸಂರಕ್ಷಿಸಿದ ಗಿಡಗಳನ್ನು ಕಡಿಯುವುದಕ್ಕೆ ಮುಂದಾಗಿರುವುದನ್ನು ಕಂಡಾಗ ಬೇರೆ ರಾಷ್ಟ್ರದವರೂ ನಗೆಯಾಡುವ ಹಾಗಾಗಿದೆ. ಹೀಗಾಗಿ ಇಲ್ಲಿಯ ಒಂದು ಇಂಚು ಜಾಗದಲ್ಲೂ ಮರ ಕಡಿಯುವ ಅಥವಾ ಮುಳುಗಿಸಲು ಬಿಡುವುದಿಲ್ಲ. ಅಣೆಕಟ್ಟೆ ನಿರ್ಮಾಣಕ್ಕೂ ಅವಕಾಶ ಮಾಡಿಕೊಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದರು.
ಇಷ್ಟಾಗಿಯೂ ಇಲ್ಲಿ ಆಣೆಕಟ್ಟೆ ನಿರ್ಮಾಣಕ್ಕೆ ಮುಂದಾಗಿ ಮರ ಕಡಿಯಲು, ಭೂಮಿ ಸಮೀಕ್ಷೆಗೆ ಮುಂದಾದಲ್ಲಿ ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಹಾಗೂ ಜಿಲ್ಲಾಧಿಕಾರಿ ಕಚೇರಿ ಎದುರು ಹೋರಾಟ ನಡೆಸುತ್ತೇವೆ ಎಂದು ರೈತರು ಎಚ್ಚರಿಕೆ ನೀಡಿದರು.ಈ ಯೋಜನೆಗೆ 2017ರಲ್ಲಿ ಟೆಂಡರ್ ಆಗಿದೆ. ಇದರ ವಿರುದ್ಧ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಲಾಗಿದೆ. ಇದಿನ್ನೂ ವಿಚಾರಣೆ ಹಂತದಲ್ಲಿ ಇರುವಾಗಲೇ ಅಣೆಕಟ್ಟು ಸಂಬಂಧಿಸಿದ ಕೆಲಸ ಆರಂಭಿಸಿರುವುದು ನ್ಯಾಯಾಲಯಕ್ಕೆ ಅಗೌರವ ತೋರಿದಂತೆಯೂ ಆಗಿದೆ ಎಂದು ರೈತರು ಅಭಿಪ್ರಾಯಪಟ್ಟರು.
ವೃಕ್ಷಮಾತೆ ತುಳಸಿ ನೇತೃತ್ವದಲ್ಲಿ ಚೆನ್ನೈನಲ್ಲಿರುವ ಹಸಿರು ಪೀಠಕ್ಕೂ ಸಹಿತ ಮೇಲ್ಮನವಿ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಈ ಕಿಂಡಿ ಅಣೆಕಟ್ಟು ವಿರುದ್ಧ ಜಿಲ್ಲಾದ್ಯಂತ ರೈತರ ಬೆಂಬಲ ಪಡೆದು ಭೌತಿಕ ಹಾಗೂ ಕಾನೂನಾತ್ಮಕವಾಗಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಆನಂದು ಗೌಡ, ಸಂತೋಷ ಗೌಡ, ಜಯಪ್ರಕಾಶ ಹಿಲ್ಲೂರ ಇನ್ನೂ ಹಲವು ರೈತರು ಪಾಲ್ಗೊಂಡಿದ್ದರು.