18ಕ್ಕೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ: ರಾಘವೇಂದ್ರ

| Published : Mar 13 2024, 02:07 AM IST

18ಕ್ಕೆ ಶಿವಮೊಗ್ಗಕ್ಕೆ ಪ್ರಧಾನಿ ಮೋದಿ: ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು ಮಾ.18ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದಲೇ ಪ್ರಚಾರ ಆರಂಭಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರು ಮಾ.18ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದು, ಈ ಬಾರಿಯ ಲೋಕಸಭಾ ಚುನಾವಣೆಗೆ ಶಿವಮೊಗ್ಗದಿಂದಲೇ ಪ್ರಚಾರ ಆರಂಭಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಇಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಂದು ಮಧ್ಯಾಹ್ನ 2ಕ್ಕೆ ಅಲ್ಲಮ ಪ್ರಭು ಬಯಲು ರಂಗಮಂದಿರದಲ್ಲಿ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರಗಳ ಸಭೆ ನಡೆಯಲಿದ್ದು. 3ರಿಂದ 4 ಲಕ್ಷ ಜನ ಸೇರುವ ನಿರೀಕ್ಷೆ ಇದೆ ಎಂದರು.

ಅಲ್ಲಮ ಪ್ರಭು ಮೈದಾನದಲ್ಲಿ ಸುಮಾರು 2.5 ಲಕ್ಷ ರು. ಕುರ್ಚಿಗಳನ್ನು ಹಾಕಬಹುದಾಗಿದೆ. ಉಳಿದಂತೆ ಫ್ರೀಡಂ ಪಾರ್ಕ್‌ನ ಅಕ್ಕಪಕ್ಕ ದೊಡ್ಡ ಎಲ್‌ಇಡಿ ಟೀವಿಗಳನ್ನು ಅಳವಡಿಸಿ ಮೋದಿ ಭಾಷಣವನ್ನು ನೋಡಲು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ವೇದಿಕೆ ಸೇರಿದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

10 ವರ್ಷ ಯಶಸ್ವಿ ಆಡಳಿತ ನೀಡಿ ವಿಶ್ವ ಮಟ್ಟದಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿದ ನರೇಂದ್ರ ಮೋದಿ ಅವರು ಭ್ರಷ್ಟಾಚಾರ ಮುಕ್ತ ಆಡಳಿತ ನೀಡಿದ್ದಾರೆ. 3ನೇ ಬಾರಿಗೆ ಎನ್‌ಡಿಎ ನೇತೃತ್ವವಹಿಸಿಕೊಂಡು ಈ ಬಾರಿಯ ಚುನಾವಣೆ ಎದುರಿಸಲು ಸಿದ್ಧರಾಗಿದ್ದಾರೆ. ಮೋದಿಯೇ ದೊಡ್ಡ ಗ್ಯಾರಂಟಿ ಅವರು ಹಲವು ಗ್ಯಾರಂಟಿಗಳನ್ನು ಈಗಾಗಲೇ ನೀಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಸ್ಥಾಪನೆ, 370ರ ವಿಧಿಯನ್ನು ತೆಗೆದು ಹಾಕಿರುವುದು, ಇಡಿ ದೇಶವನ್ನು ಅಭಿವೃದ್ಧಿಪಡಿಸಿರುವುದು, ಇದೀಗ ಪೌರತ್ವ ಕಾಯ್ದೆ ಜಾರಿ ಮಾಡಿ ಅಲ್ಪಸಂಖ್ಯಾತ ಹಿಂದುಗಳಿಗೆ ಭಾರತದಲ್ಲಿ ಪೌರತ್ವ ನೀಡುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜರಿಗೆ ತಂದಿದ್ದಾರೆ. ಆ ಮೂಲಕ ಬಾಂಗ್ಲಾದೇಶ, ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ, 2014ರ ಡಿ.31ಕ್ಕೂ ಮೊದಲು ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಕ್, ಬೌದ್ಧ, ಜೈನ, ಪಾರ್ಸಿ ಹಾಗೂ ಕೈಸ್ತರಿಗೆ ಭಾರತ ಪೌರತ್ವ ನೀಡಬಹುದಾಗಿದ್ದು, ಇದೊಂದು ಮಹತ್ವದ ಹಾದಿಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ನವೀನ್, ಶಾಸಕ ಎಸ್‌.ಎನ್‌.ಚನ್ನಬಸಪ್ಪ, ಚಂದ್ರಪ್ಪ, ಪ್ರಮುಖರಾದ ಆರ್.ಕೆ.ಸಿದ್ರಾಮಣ್ಣ, ತಿಪ್ಪಾರೆಡ್ಡಿ, ಭಾನುಪ್ರಕಾಶ್, ಮಂಜುಳ, ಭಾರತಿಶೆಟ್ಟಿ, ಎಸ್. ದತ್ತಾತ್ರಿ, ಟಿ.ಡಿ. ಮೇಘರಾಜ್, ಮೋಹನ್‌ರೆಡ್ಡಿ, ಬಸವರಾಜ್ ನಾಯಕ್, ಶಿವಯೋಗಿ ಸ್ವಾಮಿ, ಕೆ.ವಿ. ಅಣ್ಣಪ್ಪ ಮತ್ತಿತರರು ಇದ್ದರು.

ಅಡಿಕೆ ಆಮದು ತಡೆಗೆ ಚರ್ಚೆ: ವಿದೇಶಗಳಿಂದ ಅಡಕೆ ಆಮದು ತಡೆಯಲು ಹಣಕಾಸು ಇಲಾಖೆ ಇಂತಹ ಅಡಕೆಗೆ ಹೆಚ್ಚಿನ ಸೆಸ್ ವಿಧಿಸಿದೆ. ಆದರೆ, ಈಗ ಕಳ್ಳ ಹಾದಿಯಲ್ಲಿ ಅಡಕೆ ಆಮದಾಗುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಕೋರಲಾಗಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದರು.ಪ್ರಮುಖವಾಗಿ ಗೃಹ ಸಚಿವ ಅಮಿತ್‌ಷಾ ಹಾಗೂ ಹಣಕಾಸು ಸಚಿವರ ಗಮನಕ್ಕೆ ಅಡಕೆ ಆಮದು ವಿಷಯ ತಂದಿದ್ದು, ಅವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಮಲೆನಾಡಿನ ಅಡಕೆ ಬೆಳೆಗಾರರ ಹಿತ ಕಾಪಾಡುತ್ತಾರೆ ಎಂಬ ನಂಬಿಕೆ ಇದೆ. ಈ ಬಗ್ಗೆ ಮ್ಯಾಮ್‌ಕೋಸ್ ಹಾಗೂ ಆಪ್‌ಕೋಸ್ ಪ್ರಮುಖ ರೊಂದಿಗೂ ಚರ್ಚಿಸಿದ್ದು ಅಡಕೆ ಆಮದು ತಡೆ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ ಎಂದು ತಿಳಿಸಿದರು.ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ವತಂತ್ರ ಅಭ್ಯರ್ಥಿಯಾಗಿ ನಿಲ್ಲುತ್ತಾರೆ ಎಂಬುದು ತಪ್ಪು ಕಲ್ಪನೆ. ಈಶ್ವರಪ್ಪ ಅವರು ಪಕ್ಷದ ವಿರುದ್ಧ ಚುನಾವಣೆ ಮಾಡುತ್ತಾರೆ ಎಂಬುದು ಸುಳ್ಳು ಸಂದೇಶ. ಅವರು ನಮ್ಮೊಂದಿಗೆ ಇರುತ್ತಾರೆ. ಅಂತಹ ಯಾವುದೇ ಗೊಂದಲವಿಲ್ಲ. ಪ್ರಧಾನಿ ಮೋದಿ ಅವರ ಶಿವಮೊಗ್ಗ ಪ್ರವಾಸ ಕಾರ್ಯಕ್ರಮದಲ್ಲಿ ಕೆ.ಎಸ್.ಈಶ್ವರಪ್ಪ ಸೇರಿದಂತೆ ಎಲ್ಲರೂ ಸಹ ಇರುತ್ತಾರೆ ಎಂಬ ವಿಶ್ವಾಸವಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.