ಸಾರಾಂಶ
ಶಿರಹಟ್ಟಿ: ಶಿರಹಟ್ಟಿ ಪಪಂ ವ್ಯಾಪ್ತಿಗೆ ಒಳಪಡುವ ವಿದ್ಯಾನಗರ, ನವನಗರ, ಶಬ್ಬೀರನಗರ, ಸಿದ್ದರಾಮೇಶ್ವರ ನಗರ, ಫಕೀರೇಶ್ವರ ನಗರ, ಶಿವಲಿಂಗಪ್ಪ ಪ್ಲಾಟ್ ಸೇರಿದಂತೆ ಹೊಸದಾಗಿ ನಿರ್ಮಾಣಗೊಂಡ ಎಲ್ಲ ಬಡಾವಣೆಗಳಲ್ಲಿ ಶುದ್ಧ ಕುಡಿಯುವ ನೀರು, ಚರಂಡಿ, ಸುಗಮ ಸಂಚಾರಕ್ಕೆ ರಸ್ತೆ, ಬೀದಿ ದೀಪ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುವುದರ ಜತೆಗೆ ಸಮಗ್ರ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಶಂಕರ ಹುಲ್ಲಮ್ಮನವರ ಹೇಳಿದರು.
ಶನಿವಾರ ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ೨೦೨೫-೨೬ನೇ ಸಾಲಿನ ಆಯವ್ಯಯ ಮಂಡನೆ ಮಾಡಿ ಸಭೆಯಲ್ಲಿ ಮಾತನಾಡಿದರು. ಎಲ್ಲ ಮೂಲಗಳಿಂದ ರಾಜಸ್ವ ಬಂಡವಾಳ ಹಾಗೂ ಅಸಾಧಾರಣ ಆದಾಯಗಳಿಂದ ₹೭ ಕೋಟಿ ೮ ಲಕ್ಷ ೨೦ ಸಾವಿರ ಅಂದಾಜಿಸಲಾಗಿದೆ ಎಂದರು.ಪ್ರಸಕ್ತ ವರ್ಷದ ಪಪಂ ಆದಾಯಗಳು, ಆಸ್ತಿ ಕರ, ಮಳಿಗೆ ಬಾಡಿಗೆ, ನೀರಿನ ಬಾಡಿಗೆ ಜಾಹೀರಾತು ತೆರಿಗೆ, ವ್ಯಾಪಾರ ಪರವಾನಗಿ, ಅಭಿವೃದ್ಧಿ ಶುಲ್ಕ, ಖಾತಾ ಉತಾರ ಶುಲ್ಕ, ಖಾತೆ ಬದಲಾವಣೆ, ಸಂತೆ ಕರ, ದಂಡ ಜುಲ್ಮಾನೆ ಹಾಗೂ ಇತರೇ ಶುಲ್ಕಗಳಿಂದ ₹೪೩ ಲಕ್ಷ ೩೪ ಸಾವಿರ ನಿರೀಕ್ಷೆ ಮಾಡಲಾಗಿದೆ.
ಎಸ್‌ಎಫ್‌ಸಿ ಮುಕ್ತನಿಧಿ, ೧೫ ನೇ ಹಣಕಾಸು ಎಸ್.ಎಫ್‌ಸಿ ವಿಶೇಷ ಅನುದಾನ, ಗೃಹಭಾಗ್ಯ, ಕುಡಿಯುವ ನೀರಿನ ಸಮಸ್ಯೆ ಪರಿಹಾರ ಅನುದಾನ ಮತ್ತು ಇತರೇ ಅನುದಾನದ ಮೂಲದಿಂದ ರಾಜಸ್ವ ಬಂಡವಾಳ ಹಾಗೂ ವಿವಿಧ ಆದಾಯಗಳಿಂದ ₹೭,೨೦ ಲಕ್ಷ ನಿರೀಕ್ಷೆ ಮಾಡಲಾಗಿದೆ ಎಂದು ವಿವರಿಸಿದರು.ಪಪಂ ಆಡಳಿತ ವೆಚ್ಚಗಳಿಗೆ ಸಂಬಂಧಿಸಿದಂತೆ ಪಪಂ ನಿಧಿಯಿಂದ ಆಡಳಿತ ಮತ್ತು ಕಚೇರಿ ವೆಚ್ಚ ಹಾಗೂ ಇನ್ನಿತರೇ ಮೊತ್ತ ₹೧ ಕೋಟಿ ೯೨ ಲಕ್ಷ ೪೫ ಸಾವಿರ ನಿರೀಕ್ಷೆ ಮಾಡಲಾಗಿದೆ. ನೀರು ಸರಬರಾಜಿಗೆ ಸಂಬಂಧಿಸಿದಂತೆ ಸಾಮಗ್ರಿ ಖರೀದಿ ದುರಸ್ತಿ ಮತ್ತು ನಿರ್ವಹಣೆ ವೆಚ್ಚಗಳಿಗೆ ₹೯೪ ಲಕ್ಷ ಅಂದಾಜು ಮಾಡಲಾಗಿದೆ. ಬೀದಿದೀಪ ನಿರ್ವಹಣೆ ಮತ್ತು ದುರಸ್ತಿಗೆ ₹೪೫ ಲಕ್ಷ ೫೦ ಸಾವಿರ ನಿರೀಕ್ಷೆ ಮಾಡಲಾಗಿದೆ ಎಂದು ಸಭೆಗೆ ತಿಳಿಸಿದರು.
ಪ್ರಸಕ್ತ ಸಾಲಿನ ಉಳಿತಾಯ ಬಜೆಟ್ ₹೧೨ ಲಕ್ಷ ೨೦ ಸಾವಿರ ಮಾಡಲಾಗಿದ್ದು, ಪಂಚಾಯ್ತಿ ಎಲ್ಲ ಮೂಲಗಳಿಂದ ಕೊನೆಯ ಶುಲ್ಕ ೬ ಕೋಟಿ ೭೪ ಲಕ್ಷ ೮೭ ಸಾವಿರ ನಿರೀಕ್ಷೆ ಮಾಡಲಾಗಿದೆ. ಒಟ್ಟಾರೆ ಪಂಚಾಯ್ತಿ ಮೂಲಭೂತ ಸೌಕರ್ಯ ಒದಗಿಸಲು ಹೆಚ್ಚಿನ ಪ್ರಾಧಾನ್ಯತೆ ನೀಡಿ ಸಂಪನ್ಮೂಲಗಳ ಕ್ರೋಢಿಕರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದರು.ಒಟ್ಟಾರೆ ದುಡಿಯುವ ವರ್ಗಕ್ಕೆ ತೊಂದರೆಯಾಗದಂತೆ ಸೂಕ್ತ ಕ್ರಮ ವಹಿಸುವುದಾಗಿ ತಿಳಿಸಿದರು. ಜತೆಗೆ ಸಾರ್ವಜನಿಕರು ಪಪಂಗೆ ಬರುವ ಅನುದಾನ ಗಮನದಲ್ಲಿಟ್ಟುಕೊಂಡು ಸಲಹೆ ಸೂಚನೆ ನೀಡುವುದು ಒಳಿತು ಎಂದು ಸೂಚನೆ ನೀಡಿದರು.
ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಅಭಿಯಂತರ ವಿ.ಪಿ.ಕಾಟೇವಾಲೆ, ಪರಮೇಶ ಪರಬ, ಆಶ್ರತ್ ಡಾಲಾಯತ, ದೇವಪ್ಪ ಆಡೂರ, ರಾಜು ಕಪ್ಪತ್ತನವರ, ರಂಗಪ್ಪ ಗುಡಿಮನಿ ಸೇರಿದಂತೆ ಅನೇಕರು ಇದ್ದರು.