ಕಾಂಗ್ರೆಸ್‌ಗೆ ಬುದ್ಧಿ ಹೇಳುವ ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಮಾಡಿಕೊಳ್ಳಿ, ನಂತರ ನಮ್ಮ ಬಗ್ಗೆ ಮಾತನಾಡಿ’ ಎಂದು ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

‘ತನ್ನ ಎಲೆಯಲ್ಲಿ ಆನೆ ಸತ್ತು ಬಿದ್ದಿದ್ದರೂ ಎದುರಿನವರ ಎಲೆಯಲ್ಲಿ ಸತ್ತುಬಿದ್ದ ನೊಣಕ್ಕಾಗಿ ಹುಡುಕಾಡುವ ಢೋಂಗಿ ಬುದ್ಧಿಯನ್ನು ತಮ್ಮ ಭಾಷಣದಲ್ಲಿ ತೋರಿದ್ದೀರಿ. ಕಾಂಗ್ರೆಸ್‌ಗೆ ಬುದ್ಧಿ ಹೇಳುವ ಮೊದಲು ಕುಸಿದು ಬೀಳುತ್ತಿರುವ ನಿಮ್ಮ ಮನೆಯನ್ನು ಭದ್ರಮಾಡಿಕೊಳ್ಳಿ, ನಂತರ ನಮ್ಮ ಬಗ್ಗೆ ಮಾತನಾಡಿ’ ಎಂದು ಪ್ರಧಾನಿ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಪ್ರಧಾನಮಂತ್ರಿ ಅವರ ಭಾನುವಾರದ ಭಾಷಣಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಪ್ರಧಾನಿ ಕುರ್ಚಿಯ ಘನತೆ, ಗಾಂಭಿರ್ಯ ಮತ್ತು ಔಚಿತ್ಯವನ್ನು ನರೇಂದ್ರ ಮೋದಿಯವರು ತಮ್ಮ ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷ ಅಸೂಹೆಯ ಭಾಷಣದ ಮೂಲಕ ಮಣ್ಣುಪಾಲು ಮಾಡಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ನರೇಂದ್ರ ಮೋದಿಯವರು ಭಾನುವಾರ ಬೆಂಗಳೂರಿನಲ್ಲಿ ಮಾತನಾಡಿದ್ದು ದೇಶದ ಪ್ರಧಾನಿಯಾಗಿಯೋ? ಅಥವಾ ರಾಜ್ಯ ಬಿಜೆಪಿ ಅಧ್ಯಕ್ಷರಾಗಿಯೋ? ಇಲ್ಲವೇ ರಾಜ್ಯದ ವಿರೋಧ ಪಕ್ಷದ ನಾಯಕರಾಗಿಯೋ? ಎನ್ನುವುದನ್ನು ಅವರೇ ಸ್ಪಷ್ಟಪಡಿಸಿ ಸಾರ್ವಜನಿಕರಲ್ಲಿ ಮೂಡಿರುವ ಗೊಂದಲ ಬಗೆಹರಿಸಬೇಕು. ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನುದ್ದೇಶಿಸಿ ಮಾತನಾಡಿದ್ದರೂ ಅವರ ಮಾತಿನಲ್ಲಿ ಕೇಂದ್ರದಲ್ಲಿರುವ ಅವರದ್ದೇ ಸರ್ಕಾರದ ವೈಫಲ್ಯ ಮತ್ತು ರಾಜ್ಯದಲ್ಲಿರುವ ಅವರ ಪಕ್ಷದ ದುಸ್ಥಿತಿ ಸರಿಪಡಿಸಲಾಗದ ಅಸಹಾಯಕತೆ ಇತ್ತು ಎಂದು ತಿರುಗೇಟು ನೀಡಿದ್ದಾರೆ.

ಪೂರ್ವ ತಯಾರಿ ಮಾಡಿಕೊಂಡು ಬನ್ನಿ:

ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ. ದೇಶದ ತಲಾವಾರು ಆದಾಯ 2.11 ಲಕ್ಷ ರು.ಗಳಾಗಿದ್ದರೆ ಕರ್ನಾಟಕದ್ದು 4.33 ಲಕ್ಷ ರು. ಇದೆ. ದೇಶದ ಜಿಡಿಪಿ ಬೆಳವಣಿಗೆಯ ದರ ಶೇ.7.4 ಆಗಿದ್ದರೆ, ಕರ್ನಾಟಕದ್ದು ಶೇ.8.1 ರಷ್ಟಿದೆ. ದೇಶದ ಜಿಡಿಪಿಯಲ್ಲಿ ಕರ್ನಾಟಕದ ಪಾಲೇ ಶೇ.9.19 ಆಗಿದೆ. ಜಿಎಸ್‌ಟಿ ಸಂಗ್ರಹದಲ್ಲಿ ಮಹಾರಾಷ್ಟ್ರದ ನಂತರ ಕರ್ನಾಟಕದ್ದೇ ಅತ್ಯಧಿಕ ಪಾಲು ಇದೆ.

ಕರ್ನಾಟಕವು ಅಭಿವೃದ್ದಿಯ ಪಥದಲ್ಲಿ ವೇಗದಲ್ಲಿ ಸಾಗುತ್ತಿರುವುದಕ್ಕೆ ಇನ್ನೇನು ಪುರಾವೆ ಬೇಕು? ಮುಂದಿನ ಬಾರಿ ನಮ್ಮ ಸರ್ಕಾರದ ವಿರುದ್ಧ ಆರೋಪ ಮಾಡುವಾಗ ಸ್ವಲ್ಪ ಪೂರ್ವ ತಯಾರಿ ಮಾಡಿಕೊಂಡು ಬನ್ನಿ. ದೇಶದ ಪ್ರಧಾನಿಯವರ ಬಾಯಲ್ಲಿ ಸುಳ್ಳು ಹೇಳಿಕೆಗಳು ಶೋಭೆಯಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರಧಾನಿ ಕುರ್ಚಿ ಘನತೆ ಮಣ್ಣುಪಾಲು:

ಪಂಡಿತ್ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ಅಟಲ್‌ ಬಿಹಾರಿ ವಾಜಪೇಯಿಯವರೂ ಸೇರಿ ದೇಶದ ಪ್ರಧಾನಮಂತ್ರಿಯಾದವರು ಎಂದೂ ಕೆಟ್ಟ ರಾಜಕಾರಣಿಗಳ ರೀತಿ ಬೀದಿ ಭಾಷಣ ಮಾಡಿ ವಿರೋಧಪಕ್ಷಗಳನ್ನು ಹಳಿಯಲು ಹೋಗಿಲ್ಲ. ಅವರೆಲ್ಲರೂ ಕಾಪಾಡಿಕೊಂಡು ಬಂದಿದ್ದ ಪ್ರಧಾನಿ ಕುರ್ಚಿಯ ಘನತೆ, ಗಾಂಭಿರ್ಯ ಮತ್ತು ಔಚಿತ್ಯವನ್ನು ಮೋದಿಯವರು ತಮ್ಮ ಸುಳ್ಳು, ಕೀಳು ಅಭಿರುಚಿ ಮತ್ತು ದ್ವೇಷಾಸೂಯೆಗಳನ್ನು ವ್ಯಕ್ತಪಡಿಸುವ ಭಾಷಣಗಳ ಮೂಲಕ ಮಣ್ಣುಪಾಲು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದು ಯಾವ ಅಭಿವೃದ್ಧಿಯ ಲಕ್ಷಣ?-ಸಿಎಂ:

2024-25ರಲ್ಲಿಯೇ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ದೇಶ ಮಾಡುವೆ ಎಂದು ಕೊಚ್ಚಿಕೊಂಡಿದ್ದರು. ಭಾರತದ ಅಭಿವೃದ್ದಿ ರಥ ನಾಗಾಲೋಟದಿಂದ ಮುಂದೋಡುತ್ತಿದೆ ಎಂದು ಬೀಗಿದ್ದ ಮತ್ತು ದೇಶದ ಬಡತನವನ್ನು ನಿರ್ಮೂಲನೆ ಮಾಡಿ ಆಗಿದೆ ಎಂದು ತನ್ನ ಬೆನ್ನನ್ನು ತಾನೇ ಚಪ್ಪರಿಸಿಕೊಂಡಿದ್ದ ಪ್ರಧಾನಿಯವರು ಈಗ ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಮತ್ತು ಖಾದ್ಯ ಎಣ್ಣೆ ಕಡಿಮೆ ಬಳಸಿ, ವಿದೇಶ ಪ್ರವಾಸ ಮಾಡಬೇಡಿ ಮತ್ತು ಗೊಬ್ಬರ ಬಳಕೆ ತಗ್ಗಿಸಿ ಎಂದು ಬೇಡಿಕೊಳ್ಳುತ್ತಿರುವುದು ಯಾವ ಅಭಿವೃದ್ದಿಯ ಲಕ್ಷಣ ಎನ್ನುವುದನ್ನು ಮೋದಿಯವರೇ ಸ್ಪಷ್ಟಪಡಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಖಾದ್ಯತೈಲ ಎಲ್ಲವೂ ದುಬಾರಿಯಾಗಿ ದೇಶದ ಜನರ ನಿತ್ಯದ ಜೀವನ ನಿರ್ವಹಣೆಗಾಗಿ ಪರದಾಡುವಂಥ ಸ‍್ಥಿತಿ ನಿರ್ಮಾಣಕ್ಕೆ ದೇಶದ ಎಡಬಿಡಂಗಿ ವಿದೇಶಾಂಗ ನೀತಿ ಕಾರಣ. ಮೋದಿಯವರೇ, ಈ ವೈಫಲ್ಯಕ್ಕೆ ಯಾರನ್ನು ದೂರುತ್ತೀರಿ? ಜವಾಹರಲಾಲ್ ನೆಹರೂ ಅವರನ್ನೇ? ಕಾಂಗ್ರೆಸ್ ಪಕ್ಷವನ್ನೇ? ಉತ್ತರಿಸಿ ಎಂದು ಒತ್ತಾಯಿಸಿದರು.

ಬಿಜೆಪಿಯ ದ್ರೋಹದ ಚರಿತ್ರೆ ನೆನಪಿಸಿಕೊಳ್ಳಿ:

ಬಿಎಸ್‌ಪಿ, ಟಿಎಂಸಿ, ಡಿಎಂಕೆ, ಎಐಡಿಎಂಕೆ, ಪಿಡಿಪಿ, ಶಿವಸೇನೆ, ಅಕಾಲಿದಳ, ನ್ಯಾಷನಲ್ ಕಾನ್ಫರೆನ್ಸ್ ಸೇರಿ ಬಿಜೆಪಿ ಜೊತೆ ಮೈತ್ರಿಮಾಡಿಕೊಂಡು ವಿಶ್ವಾಸದ್ರೋಹಕ್ಕೊಳಗಾದ ಪ್ರಾದೇಶಿಕ ಪಕ್ಷಗಳ ಪಟ್ಟಿ ಬೆಳೆಯುತ್ತಲೇ ಇದೆ. ಮತ್ತೊಂದೆಡೆ ಕಾಂಗ್ರೆಸ್ ಮತ್ತು ಇತರ ಪಕ್ಷಗಳ ನಾಯಕರನ್ನು ಬ್ಲಾಕ್ ಮೇಲ್ ಮಾಡಿ ಅವರು ತಮ್ಮ ಪಕ್ಷಗಳಿಗೆ ವಿಶ್ವಾಸದ್ರೋಹ ಎಸಗುವಂತೆ ಮಾಡಿ, ಬಿಜೆಪಿಗೆ ಸೇರಿಸಿಕೊಂಡ ವಿರೋಧ ಪಕ್ಷದ ನಾಯಕರ ಪಟ್ಟಿಯೂ ಬೆಳೆಯುತ್ತಿದೆ. ಇಂತಹ ವಿಶ್ವಾಸದ್ರೋಹಿ ಪಕ್ಷದ ನಾಯಕರಾದ ಮೋದಿಯವರು ಕಾಂಗ್ರೆಸ್ ಪಕ್ಷದ ವಿರುದ್ಧ ವಿಶ್ವಾಸದ್ರೋಹದ ಆರೋಪ ಮಾಡುತ್ತಿರುವುದನ್ನು ನೋಡಿ ದೇಶದ ಜನರೇ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.