ಕನ್ನಡಪ್ರಭ ವಾರ್ತೆ ಮೇಲುಕೋಟೆ
ಮೊದಲ ಶ್ರಾವಣ ಶನಿವಾರದ ಅಂಗವಾಗಿ ಶನಿವಾರ ಮೇಲುಕೋಟೆ ಶ್ರೀಚೆಲುವನಾರಾಯಣಸ್ವಾಮಿ ದರ್ಶನಕ್ಕೆಸಹಸ್ರಾರು ಭಕ್ತಸಾಗರವೇ ಹರಿದು ಬಂದಿತ್ತು. ಇಡೀ ದಿನ ಸರಿ ಸುಮಾರು 50 ಸಾವಿರಕ್ಕೂ ಹೆಚ್ಚುಮಂದಿ ಭಕ್ತರು ಆಗಮಿಸಿದ್ದರಿಂದ ಇಡೀ ಕ್ಷೇತ್ರ ಭಕ್ತರಿಂದ ತುಂಬಿ ತುಳುಕುತ್ತಿತ್ತು.ಸ್ವಾಂತ್ರಂತ್ರೋತ್ಸವದ ರಜೆಯೂ ಶ್ರಾವಣ ಶನಿವಾರದೊಟ್ಟಿಗೆ ಬಂದ ಕಾರಣ ಭಕ್ತರ ದಟ್ಟಣೆ ಹೆಚ್ಚಾಗಿತ್ತು. ಬೆಳಗ್ಗೆ 10-30ರ ವೇಳೆಗೆ ಪ್ರಾಥಮಿಕ ಆರೋಗ್ಯಕೇಂದ್ರದ ಮುಂಭಾಗದ ಪಾರ್ಕಿಂಗ್ ಚುಂಚನಗಿರಿ ಸಮುದಾಯ ಭವನದ ಮೈದಾನವೂ ಭಕ್ತರವಾಹನಗಳಿಂದ ತುಂಬಿದ್ದು, ಇದರಿಂದ ರಸ್ತೆಬದಿಯಲ್ಲೇ ಪಾರ್ಕಿಂಗ್ ಮಾಡಲಾಗಿತ್ತು.
ಸರ್ಕಲ್ ಇನ್ಸ್‌ಪೆಕ್ಟರ್ ಆನಂದಗೌಡ ಮಾರ್ಗದರ್ಶನದಲ್ಲಿದೇವಾಲಯದ ಬಳಿಗೆ ವಾಹನಗಳು ಬರುವುದನ್ನು ನಿರ್ಬಂದಿಸಿ ಪ್ರಾಥಮಿಕ ಆರೋಗ್ಯಕೇಂದ್ರದ ಬಳಿಯೇ ಪಾರ್ಕಿಂಗ್ ವ್ಯವಸ್ಥೆ ಮಾಡಿ ವಾಹನದಟ್ಟಣೆ ನಿಯಂತ್ರಿಸಲಾಗಿತ್ತು.ಮನೆದೇವರ ಒಕ್ಕಲಿನ ಭಕ್ತರು ಸಂಸಾರ ಸಮೇತ ಮೇಲುಕೋಟೆಗೆ ಆಗಮಿಸಿ ದೇವರದರ್ಶನ ಪಡೆಯುತ್ತಿದ್ದರು. ಅಮ್ಮನವರ ವರ್ಧಂತಿ ಕಾರ್ಯಕ್ರಮಗಳು ಶುಕ್ರವಾರ 2 ಗಂಟೆಯವರೆಗೆ ನಡೆದರೂ ಕೂಡ ಭಕ್ತರ ದರ್ಶನಕ್ಕೆ ಹೆಚ್ಚಿನ ಶ್ರಮವಹಿಸಿದ ಪಾರುಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಮತ್ತು ಪಾರುಪತ್ತೇಗಾರ್ ಎಂ.ಎನ್ ಪಾರ್ಥಸಾರಥಿ ಬೆಳಗಿನ 4.30ಕ್ಕೆ ದೇವಸ್ಥಾನದಲ್ಲಿ ನಿತ್ಯಪೂಜಾಕೈಂಕರ್ಯ ಆರಂಭಿಸಿ 6 ಗಂಟೆಯಿಂದಲೇ ಭಕ್ತರಿಗೆ ದೇವರ ದರ್ಶನ ಲಭಿಸುವಂತೆ ಮಾಡಿದ್ದರು. ಶನಿವಾರ ರಾತ್ರಿಯೂ 12 ಗಂಟೆಗೆ ದೇವಾಲಯದ ಶೇರ್ತಿಸೇವೆ ಕಾರ್ಯಕ್ರಮಗಳು ನೆರವೇರಿದವು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶಗೌಡ, ಸದಸ್ಯರಾದ ಕಾಡೇನಹಳ್ಳಿಯ ವಕೀಲ ಸತೀಶ್, ಬಚ್ಚಿಕೊಪ್ಪಲು ರಾಜು, ಪುಟ್ಟಸ್ವಾಮಿಗೌಡ ಹಾಜರಿದ್ದು ಭಕ್ತರು ಸರತಿಸಾಲಿನಲ್ಲಿ ಸಾಗಿ ಸುಗಮದರ್ಶನ ಪಡೆಯಲು ಶ್ರಮಿಸಿದರು. ರಾಜಬೀದಿಯಲ್ಲಿಟ್ಟಿದ್ದ ಹತ್ತಾರು ಕಡಲೆಪುರಿ, ಸಿಹಿತಿಂಡಿಗಳ ಅಂಗಡಿಗಳವರು ಭರ್ಜರಿವ್ಯಾಪಾರ ನಡೆಸಿದ್ದು ಕಂಡುಬಂತು.
ಚೆಲುವನಾರಾಯಣನಿಗೆ ತೋಮಾಲೆಯೇ ಇಲ್ಲ:
ಶ್ರಾವಣದ ವಿಶೇಷ ಶನಿವಾರದಂದೂ ಸಹ ಮೂಲಮೂರ್ತಿ ಚೆಲುವನಾರಾಯಣಸ್ವಾಮಿಗೆ ತೋಮಾಲೆ ಅಲಂಕಾರ ಇರಲಿಲ್ಲ. ಇನ್ನು ದೇವಾಲಯದ ಬಾಗಿಲುಗಳಿಗೆ ಬಾಳೆ ಕಂದು ತಳಿರುತೋರಣದ ವ್ಯವಸ್ಥೆ ಸಹ ಕಂಡು ಬರಲಿಲ್ಲ. ಮಹಾವಿಷ್ಣುವಿನ ಅನುಗ್ರಹಕ್ಕೆ ಶ್ರಾವಣ ಶನಿವಾರ ಪ್ರಶಸ್ತ ದಿನವಾಗಿದ್ದು, ತಿರುಪತಿಗೆ ಸಮಾನ ಮಹತ್ವವಿರುವ ಮೇಲುಕೋಟೆಯಲ್ಲಿ ಮೂಲಮೂರ್ತಿಗೆ ಕನಿಷ್ಠ ತೋಮಾಲೆಯಿಂದ ಅಲಂಕರಿಸದಿರುವುದು ಭಕ್ತರ ಬೇಸರಕ್ಕೆ ಕಾರಣವಾಗಿತ್ತು.ಚೆಲುವನಾರಾಯಣಸ್ವಾಮಿ ದೇಗುಲ ಎಗ್ರೇಡ್ ದೇವಾಲಯವಾಗಿದ್ದು, ದೇವಾಲಯದ ಹುಂಡಿ, ಪೋಟೋಷೂಟ್. ವಿವಿಧ ಸೇವೆ ಲಾಡು ಮಾರಾಟ ವಿಶೇಷ ದರ್ಶನಗಳಿಂದ ಕೋಟ್ಯಾಂತರರೂ ಕಾಣಿಕೆ ಸಲ್ಲಿಕೆಯಾಗುತ್ತದೆ. ಆದರೂ ಪ್ರಮುಖ ಉತ್ಸವಗಳು ವಿಶೇಷ ದಿನಗಳ ವ್ಯವಸ್ಥೆಗಳ ಬಗ್ಗೆ ದೇವಾಲಯದ ಆಡಳಿತ ಮಂಡಳಿ ಕಾಳಜಿ ವಹಿಸಿಲ್ಲ. ಮುಂದಿನ ಮೂರೂ ಶ್ರಾವಣ ಶನಿವಾರಗಳಲ್ಲಾದರೂ ಚೆಲುವನಾರಾಯಣಸ್ವಾಮಿ ಮತ್ತು ಯೋಗನರಸಿಂಹಸ್ವಾಮಿಗೆ ಕನಿಷ್ಠ ತೋಮಾಲೆ ಅಲಂಕಾರ ದೇವಾಲಯದ ಬಾಗಿಲುಗಳಿಗೆ ತಳಿರು-ತೋರಣ ಬಾಳೆಕಂಬ ಕಟ್ಟುವ ಕಾರ್ಯಮಾಡಬೇಕು ಎಂದು ನಾಗರೀಕರು ಒತ್ತಾಯಿಸಿದ್ದಾರೆ.