ಮೊದಲ ಬಾರಿಗೆ ಪಾಲಿಕೆ ದಾಖಲಾತಿ ಲ್ಯಾಮಿನೇಷನ್

| Published : Oct 25 2024, 12:59 AM IST

ಸಾರಾಂಶ

ದಾವಣಗೆರೆ ನಗರದ 1948 ರಿಂದ 2000ನೇ ಸಾಲಿನ ಹಳೆಯ ಎಲ್ಲಾ ಆಸ್ತಿ ದಾಖಲಾತಿಗಳ ಪುಸ್ತಕಗಳ ಹಾಳೆಗಳನ್ನು ಲ್ಯಾಮಿನೇಷನ್ ಮಾಡುವ ಮೂಲಕ ಅಕ್ರಮ ನಡೆಯದಂತಹ ವಿನೂತನ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರದ 1948 ರಿಂದ 2000ನೇ ಸಾಲಿನ ಹಳೆಯ ಎಲ್ಲಾ ಆಸ್ತಿ ದಾಖಲಾತಿಗಳ ಪುಸ್ತಕಗಳ ಹಾಳೆಗಳನ್ನು ಲ್ಯಾಮಿನೇಷನ್ ಮಾಡುವ ಮೂಲಕ ಅಕ್ರಮ ನಡೆಯದಂತಹ ವಿನೂತನ ಕಾರ್ಯಕ್ಕೆ ಪಾಲಿಕೆ ಮುಂದಾಗಿದೆ ಎಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ ಇದ್ದಂತಹ ದಾಖಲೆಗಳು, ಆಸ್ತಿ ಪುಸ್ತಕದ ದಾಖಲೆಗಳನ್ನು ತಿದ್ದಿ, ಆಸ್ತಿಯನ್ನು ಸಬ್ ರಿಜಿಸ್ಟರ್ ಕಚೇರಿ ಮೂಲಕ ತಮ್ಮ ಹೆಸರಿಗೆ ಮಾಡಿಕೊಂಡು, ಆಸ್ತಿ ಕಬಳಿಸುತ್ತಿದ್ದಂತಹ ಕೃತ್ಯಗಳ ತಡೆಗೆ ಪಾಲಿಕೆ ಈ ವಿನೂತನ ಪ್ರಯತ್ನಕ್ಕೆ ಕೈಹಾಕಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್‌ರವರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸಭೆ ಮಾಡಿ, ಹಳೆಯ ದಾಖಲೆಗಳ ಪುಸ್ತಕಗಳನ್ನು ಲ್ಯಾಮಿನೇಷನ್ ಮಾಡುವಂತೆ ಸೂಚಿಸಿದ್ದರು. ಅದರ ಪ್ರಕಾರ 1948ರಿಂದ 2000ರವರೆಗಿನ ದಾವಣಗೆರೆ ಹಳೆ ದಾಖಲಾತಿ ಪುಸ್ತಕಗಳ ಪ್ರತಿ ಹಾಳೆಯನ್ನೂ ಲ್ಯಾಮಿನೇಷನ್ ಮಾಡಲಾಗಿದೆ ಎಂದು ಅವರು ಹೇಳಿದರು.

ದಾಖಲೆ ಪುಸ್ತಕಗಳನ್ನು ಲ್ಯಾಮಿನೇಷನ್ ಮಾಡಿ, ಎಲ್ಲಾ ದಾಖಲೆಗಳನ್ನೂ ಅಚ್ಚುಕಟ್ಟಾಗಿ ಇಡಲಾಗಿದೆ. ಇದರಿಂದ ದಾಖಲೆಗಳನ್ನು ತಿದ್ದುವುದಕ್ಕೆ ಸಾಧ್ಯವಿಲ್ಲ. ಮುಂದೆ ಯಾರೂ ಸಹ ಪತ್ರಗಳನ್ನು ತಿದ್ದಿ, ಮತ್ತೊಬ್ಬರ ಹೆಸರಿಗೆ ಮಾಡಿಕೊಳ್ಳದಂತೆ ಎಲ್ಲಾ ರೀತಿಯ ಎಚ್ಚರ ವಹಿಸಲಾಗಿದೆ. ಎಲ್ಲಾ ದಾಖಲೆಗಳನ್ನು ಮೂಲ ಕಡತದಲ್ಲೇ ಫೈಲ್ ಮಾಡಿದ್ದು, ರ್‍ಯಾಕ್ ಸಿಸ್ಟಮ್ ಮಾಡಲಾಗಿದೆ. ಇಡೀ ಪಾಲಿಕೆ ಇತಿಹಾಸದಲ್ಲೇ ಇದೊಂದು ಅತ್ಯುತ್ತಮ ಕೆಲಸ ಎಂದು ತಿಳಿಸಿದರು.

ಸಿಎ ನಿವೇಶನ, ಸಾರ್ವಜನಿಕ ಸ್ಥಳ, ಪಾರ್ಕ್ ಸೇರಿದಂತೆ ಇನ್ನಿತರೆ ಆಸ್ತಿಗಳ ದಾಖಲೆ ತಿದ್ದಿ, ಅಕ್ರಮವಾಗಿ ಆಸ್ತಿ ಮಾಡಿಕೊಂಡಿದ್ದನ್ನು ಪತ್ತೆ ಮಾಡಿರುವ ಪಾಲಿಕೆ ಅಧಿಕಾರಿಗಳು ಸುಮಾರು ₹40 ಕೋಟಿ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದಾರೆ. ಪಾರ್ಕ್ ಜಾಗ ಒತ್ತುವರಿ ತೆರವು ಮಾಡಲಾಗಿದೆ. ಸಿಎ ನಿವೇಶನ ಸೇರಿದಂತೆ ಪಾಲಿಕೆಗೆ ಸಂಬಂಧಿಸಿದ ಆಸ್ತಿ ದಾಖಲೆ ತಿದ್ದಿ, ವಂಚಿಸಿ ಹೆಸರಿಗೆ ಬದಲಾಯಿಸಿಕೊಂಡಿದ್ದರು. ನಮ್ಮ ಅಧಿಕಾರಿಗಳು ಅದನ್ನೆಲ್ಲಾ ಪತ್ತೆ ಮಾಡಿ, ಪಾಲಿಕೆ ವಶಕ್ಕೆ ಪಡೆದಿದ್ದಾರೆ ಎಂದು ಮೇಯರ್ ರೇಣುಕಾ ವಿವರಿಸಿದರು.

ಮೇಯರ್ ಕೆ. ಚಮನ್ ಸಾಬ್‌, ಉಪ ಮೇಯರ್ ಶಾಂತಕುಮಾರ ಸೋಗಿ ಇತರರು ಇದ್ದರು.