ಸಂಡೂರಲ್ಲಿ ಗೆದ್ದ ಮೊದಲ ಮಹಿಳೆ

| Published : Nov 24 2024, 01:48 AM IST

ಸಾರಾಂಶ

ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪತಿ ಈ.ತುಕಾರಾಂ ಕಳೆದ ಲೋಕಸಭೆಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಲೋಕಸಭೆ ಪ್ರವೇಶಿಸಿದರು.

ಬಳ್ಳಾರಿ: ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಅವರ ಪತಿ ಈ.ತುಕಾರಾಂ ಕಳೆದ ಲೋಕಸಭೆಯ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದು ಲೋಕಸಭೆ ಪ್ರವೇಶಿಸಿದರು. ಇದೀಗ ಉಪ ಚುನಾವಣೆಯಲ್ಲಿ ತುಕಾರಾಂ ಪತ್ನಿ ಅನ್ನಪೂರ್ಣ ಗೆಲುವು ಪಡೆದು ವಿಧಾನಸಭೆ ಪ್ರವೇಶ ಪಡೆದಿದ್ದಾರೆ. ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಪತಿ-ಪತ್ನಿ ಲೋಕಸಭೆ ಹಾಗೂ ವಿಧಾನಸಭೆಗೆ ಪ್ರವೇಶ ಪಡೆದ ಮೊದಲಿಗರಾಗಿದ್ದಾರೆ. ಅಷ್ಟೇ ಅಲ್ಲ; ಈ. ಅನ್ನಪೂರ್ಣ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬೀಗಿದ ಮೊದಲ ಮಹಿಳೆ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಸಂಡೂರು ಉಪ ಚುನಾವಣೆ ವೇಳೆ ಕೇಳಿ ಬಂದ ಕುಟುಂಬ ರಾಜಕಾರಣದ ಆರೋಪಕ್ಕೆ ಕ್ಷೇತ್ರದ ಮತದಾರರು ತಲೆಕೆಡಿಸಿಕೊಂಡಿಲ್ಲ ಎಂಬುದು ಶನಿವಾರ ಹೊರಬಿದ್ದ ಫಲಿತಾಂಶದಿಂದ ಸ್ಪಷ್ಟವಾಗಿದೆ. ಕ್ಷೇತ್ರದ ಮತದಾರರು ಎಂದಿನಂತೆ ಕೈ ಅಭ್ಯರ್ಥಿಯನ್ನು ಕೈ ಹಿಡಿದಿದ್ದಾರೆ.

ಸತತ ನಾಲ್ಕು ಬಾರಿ ಸಂಡೂರು ವಿಧಾನಸಭಾ ಕ್ಷೇತ್ರದಿಂದ ಸರಣಿ ಗೆಲುವು ದಾಖಲಿಸಿದ್ದ ಈ.ತುಕಾರಾಂ ಲೋಕಸಭೆಗೆ ಆಯ್ಕೆಯಾಗಿ, ಪತ್ನಿಯನ್ನು ವಿಧಾನಸಭೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ.

ಕಾಂಗ್ರೆಸ್ ಭದ್ರಕೋಟೆ ಮತ್ತೆ ಸಾಬೀತು:

ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಸಂಸದ ಈ.ತುಕಾರಾಂ ಪತ್ನಿ ಅವರ ಹೆಸರು ಘೋಷಣೆಯಾಗುತ್ತಿದ್ದಂತೆಯೇ ಕೈ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದಿತು. ನಾಲ್ಕು ಬಾರಿ ಶಾಸಕ, ಸಚಿವರಾಗಿದ್ದ ಈ.ತುಕಾರಾಂ ಅವರನ್ನು ಲೋಕಸಭಾ ಚುನಾವಣೆ ಟಿಕೆಟ್ ನೀಡಿ ಗೆಲ್ಲಿಸಲಾಗಿದೆ. ಮತ್ತೆ ಅದೇ ಕುಟುಂಬಕ್ಕೆ ಉಪ ಚುನಾವಣೆಗೆ ಟಿಕೆಟ್ ನೀಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದುರಾಯಿತು. ಕುಟುಂಬ ರಾಜಕಾರಣದ ಆರೋಪ, ಕೈ ಪಕ್ಷದ ಗೆಲುವಿಗೆ ತೊಡಕಾಗಬಹುದು ಎಂದೇ ವಿಶ್ಲೇಷಿಸಲಾಗಿತ್ತು. ಆದರೆ, ಸಂಡೂರಿನ ಮತದಾರರು ಕುಟುಂಬ ರಾಜಕಾರಣ ವಿಚಾರದ ಬಗ್ಗೆ ಹೆಚ್ಚು ಗಮನ ನೀಡದೇ ಮತ್ತೆ ಕೈ ಪಕ್ಷಕ್ಕೆ ಮಣೆ ಹಾಕಿದ್ದಾರೆ. ಈ ಮೂಲಕ ಸಂಡೂರು ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಮತ್ತೊಂದು ಬಾರಿ ರುಜುವಾತು ಪಡಿಸಿದ್ದಾರೆ.

ಸಿಎಂ ಪ್ರಚಾರ-ಲಾಡ್ ಕಾರ್ಯತಂತ್ರ:

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆದಿಯಾಗಿ ಇಡೀ ಸಚಿವ ಸಂಪುಟದ ಸದಸ್ಯರು ಸಂಡೂರಿಗೆ ಆಗಮಿಸಿ ಪ್ರಚಾರ ಕೈಗೊಂಡಿದ್ದು, ಮಹಿಳೆಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದು, ಪಂಚ ಗ್ಯಾರಂಟಿಗಳ ಕುರಿತು ಕೈ ನಾಯಕರು ನಡೆಸಿದ ಮನೆಮನೆ ಪ್ರಚಾರ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗೆ ಹೆಚ್ಚು ಆಸ್ಪದ ಒದಗಿಸಿತು.

ಆಡಳಿತಾರೂಢ ಪಕ್ಷದ ವಿರೋಧಿ ಅಲೆ, ಮುಡಾ, ವಾಲ್ಮೀಕಿ ಹಗರಣ ಹಾಗೂ ಸಂಡೂರು ಅಭಿವೃದ್ಧಿಗೆ ತೆರೆದುಕೊಂಡಿಲ್ಲ ಎಂಬ ಬಿಜೆಪಿ ನಾಯಕರ ಆರೋಪಗಳಿಗೆ ಮತದಾರರು ಕಿವಿಗೊಟ್ಟಿಲ್ಲ ಎಂಬುದು ಉಪ ಚುನಾವಣೆಯ ಫಲಿತಾಂಶದಿಂದ ಸ್ಪಷ್ಟವಾದಂತಾಗಿದೆ.

ಉಪ ಚುನಾವಣೆ ಹಿನ್ನೆಲೆಯಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಮಾಡಿ ಪ್ರಚಾರ ಕಾರ್ಯ ಕೈಗೊಂಡಿದ್ದನ್ನು ಚುನಾವಣೆ ಪ್ರಚಾರಕ್ಕೆ ಸಮರ್ಥವಾಗಿ ಬಳಸಿಕೊಂಡ ಸಚಿವ ಸಂತೋಷ್‌ ಲಾಡ್, ರೆಡ್ಡಿ ಸಂಡೂರಿನಲ್ಲಿ ಮನೆ ಮಾಡಿರುವುದು ಈ ಊರಿನ ಅಭಿವೃದ್ಧಿಗಲ್ಲ. ಗಣಿಮಣ್ಣಿನ ಆಸೆಗೆ ಇಲ್ಲಿಗೆ ಬಂದಿದ್ದಾರೆ ಎಂದು ಚುನಾವಣೆ ಪ್ರಚಾರದಲ್ಲಿ ಹೇಳಿದ್ದು ಮತದಾರರನ್ನು ಜಾಗ್ರತಗೊಳಿಸಿದಂತಾಯಿತು.

ರೆಡ್ಡಿ ಸಂಡೂರು ಪ್ರವೇಶಕ್ಕೆ ತಡೆಯೊಡ್ಡಲು ಲಾಡ್ ಪ್ರಚಾರದ ಹೇಳಿಕೆ ಪರಿಣಾಮ ಬೀರಿತು ಎನ್ನುತ್ತಾರೆ ಸಂಡೂರಿನ ಕಾಂಗ್ರೆಸ್ ಮುಖಂಡರು.

ಕಳೆದ 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ತುಕಾರಾಂ ಬಿಜೆಪಿ ಅಭ್ಯರ್ಥಿ ಶಿಲ್ಪಾ ರಾಘವೇಂದ್ರ ವಿರುದ್ಧ 35,522 ಮತಗಳ ಅಂತರದ ಗೆಲುವು ದಾಖಲಿಸಿದ್ದರು. ಉಪ ಚುನಾವಣೆಯಲ್ಲಿ ತುಕಾರಾಂ ಅವರ ಪತ್ನಿ ಅನ್ನಪೂರ್ಣ 9649 ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಮಣಿಸಿದ್ದಾರೆ.

ಸಂಡೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣ ಗೆಲುವು ದಾಖಲಿಸಿದ ಬಳಿಕ ಪತಿ ಈ.ತುಕಾರಾಂ ಅವರಿಗೆ ಪಕ್ಷದ ಕಾರ್ಯಕರ್ತರು ಹೂಮಾಲೆಗಳನ್ನು ಹಾಕಿ ಜಯ ಘೋಷ ಕೂಗಿದರು.