ಕುರಿ ಹಟ್ಟಿ ಗುಡಿಸಲಿನಲ್ಲಿ ಪ್ರಥಮ ಪೂಜಿತನ ಆರಾಧನೆ

| Published : Sep 01 2025, 01:04 AM IST

ಕುರಿ ಹಟ್ಟಿ ಗುಡಿಸಲಿನಲ್ಲಿ ಪ್ರಥಮ ಪೂಜಿತನ ಆರಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುರಿ ಕಾಯುತ್ತಾ ಬದುಕು ಕಟ್ಟಿಕೊಂಡಿರುವ ಅಲೆಮಾರಿ ನಿಪ್ಪಾಣಿ ಕುರಿಗಾರರು ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಿ ಪೂಜಿಸುತ್ತಿರುವುದು ಭಕ್ತಿಯ ಸಂಕೇತವಾಗಿದೆ

ಅಮರೇಶ್ವರಸ್ವಾಮಿ ಕಂದಗಲ್ಲಮಠ ಕುಕನೂರು

ಪ್ರಥಮ ಪೂಜಿತ ಗಣೇಶನನ್ನು ಕುರಿಹಟ್ಟಿಯಲ್ಲಿ ಪ್ರತಿಷ್ಠಾಪಿಸಿ ಅಲೆಮಾರಿ ಕುರಿಗಾರರು ಆರಾಧನೆ ಮಾಡುತ್ತಿದ್ದಾರೆ.

ತಾಲೂಕಿನ ಮಂಡ್ಲಿಗೇರಿ ಸೀಮಾದ ವ್ಯಾಪ್ತಿಯಲ್ಲಿ ಕುರಿಗಳನ್ನು ಮೇಯಿಸುತ್ತಾ ಬಂದಿರುವ ನಿಪ್ಪಾಣಿ ಕುರಿಗಾರರು ಗಣೇಶ ಹಬ್ಬದ ಪ್ರಯುಕ್ತ ಗಣೇಶನನ್ನು ವಿಶೇಷ ರೀತಿಯಲ್ಲಿ ಸ್ಥಾಪಿಸಿ ಭಕ್ತಿ ಮೆರೆದಿದ್ದಾರೆ.

ಗಣೇಶನನ್ನು ಸ್ಥಾಪಿಸಲು ಗುಡಿಸಲು ನಿರ್ಮಿಸಿದ್ದಾರೆ. ಗುಡಿಸಲು ಮಳೆ ಬಂದರೆ ತೇವವಾಗದಂತೆ ತಾಡಪತ್ರಿ ಹೊದಿಸಿದ್ದಾರೆ. ಗಣೇಶ ಚತುರ್ಥಿ ದಿನ ಗಣೇಶ ಮೂರ್ತಿ ತಂದು ಗುಡಿಸಲಿನಲ್ಲಿ ಸ್ಥಾಪಿಸಿ ಪೂಜಿಸಿದ್ದಾರೆ. ಅಲ್ಲದೇ ಗೌರಿ ದೇವಿಯನ್ನು ಸಹ ತಂದು ಪೂಜಿಸಿದ್ದಾರೆ. ಕುರಿ ಕಾಯುತ್ತಾ ಬದುಕು ಕಟ್ಟಿಕೊಂಡಿರುವ ಅಲೆಮಾರಿ ನಿಪ್ಪಾಣಿ ಕುರಿಗಾರರು ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಿ ಪೂಜಿಸುತ್ತಿರುವುದು ಭಕ್ತಿಯ ಸಂಕೇತವಾಗಿದೆ.

ಐದು, ಆರು ದಿನ ಹೀಗೆ ತಾವಿರುವ ಜಮೀನಿನಲ್ಲಿ ಹಾಕಿರುವ ಗುಡಿಸಿಲಿನಲ್ಲಿ ಗಣೇಶನನ್ನು ಆರಾಧನೆ ಮಾಡುತ್ತಾರೆ. ಕುರಿ ಕಾಯುತ್ತಾ ಹಬ್ಬ ಹಾಗೂ ಭಕ್ತಿ ಪಾಲಿಸುತ್ತಾ ಬದುಕು ಕಟ್ಟಿಕೊಂಡಿದ್ದಾರೆ. ಗಣೇಶ ಹಬ್ಬಕ್ಕೆಂದು ತಮ್ಮ ಕುಟುಂಬ ವರ್ಗವನ್ನು ತಾವಿರುವ ಸ್ಥಳಕ್ಕೆ ಕರೆಯಿಸಿಕೊಂಡು ಗಣೇಶ ಮೂರ್ತಿ ವಿಸರ್ಜನೆ ದಿನದ ವರೆಗೂ ವಿಶೇಷವಾದ ಪ್ರಸಾದ ಮಾಡುತ್ತಾರೆ.ನಿತ್ಯ ಗಣೇಶನಿಗೆ ವಿಶೇಷ ನೈವೇದ್ಯ ಸಹ ಸಮರ್ಪಿಸಿ ಭಕ್ತಿ ಮೆರೆಯುತ್ತಿದ್ದಾರೆ.

ನಾವು ಏಳು ದಿನಗಳ ಕಾಲ ಗಣೇಶ ಮೂರ್ತಿ ಸ್ಥಾಪಿಸಿ ಪೂಜೆ ಮಾಡುತ್ತೇವೆ. ಮಳೆ ಬಂದರೂ ಸುರಕ್ಷಿತವಾಗಿರುವ ಗುಡಿಸಲು ಹಾಕಿ ಪೂಜೆ ಮಾಡುತ್ತೇವೆ. ಕುಟುಂಬ ವರ್ಗದವರನ್ನು ಕರೆದು ಪೂಜೆಯಲ್ಲಿ ಭಾಗಿಯಾಗುತ್ತವೆ. ನಮಗೆ ಕುರಿ ಕಾಯುತ್ತಾ ಗಣೇಶ ಹಬ್ಬ ಆಚರಿಸುವುದು ಖುಷಿ ನೀಡುತ್ತಿದೆ ಎಂದು ನಿಪ್ಪಾಣಿ ಕುರಿಗಾರರ ಮಹಿಳೆ ಸಾವಿತ್ರಿ ತಿಳಿಸಿದ್ದಾರೆ.

ಕುರಿ ಕಾಯುತ್ತಾ ನಿತ್ಯದ ಜೀವನ ನಡೆಸುವುದು ಸಾಮಾನ್ಯ ಕೆಲಸವಲ್ಲ. ಈ ಮಧ್ಯೆ ಏಳು ದಿನ ಗಣೇಶನನ್ನು ಸ್ಥಾಪಿಸಿ ಕುರಿಗಾರರು ಪೂಜೆ ಮಾಡುತ್ತಿರುವುದು ನಿಜಕ್ಕೂ ಭಕ್ತಿಯ ಸಂಕೇತ. ಕುರಿಗಾರರ ಭಕ್ತಿ ನಿಜಕ್ಕೂ ಮಾದರಿ ಎಂದು ಮಂಡ್ಲಿಗೇರಿಯ ರೈತ ಮಹಿಳೆ ಶಿವಲೀಲಾ ದಳವಾಯಿ ಹೇಳಿದರು.