ದಾಬಸ್‌ಪೇಟೆಯಲ್ಲಿ ಹಣಕಾಸಿನ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ

| Published : Sep 29 2024, 01:34 AM IST

ದಾಬಸ್‌ಪೇಟೆಯಲ್ಲಿ ಹಣಕಾಸಿನ ವಿಚಾರಕ್ಕೆ ಗಲಾಟೆ: ಕೊಲೆಯಲ್ಲಿ ಅಂತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಹಣಕಾಸಿನ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ 48ರ ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಖಾಸಗಿ ಹೋಟೆಲ್ ಬಳಿಯಲ್ಲಿರುವ ವಠಾರದ ಶೆಡ್ ಮನೆಯಲ್ಲಿ ನಡೆದಿದೆ.

-ತಮಿಳುನಾಡು ಮೂಲದ ವ್ಯಕ್ತಿ ಕೊಲೆ - ₹85,000ಗೆ ಒಂದೇ ರೂಮಿನಲ್ಲಿದ್ದ ಇಬ್ಬರು ಸ್ನೇಹಿತರ ನಡುವೆ ಗಲಾಟೆ । ಕೇಸ್‌ ದಾಖಲುಕನ್ನಡಪ್ರಭ ವಾರ್ತೆ ದಾಬಸ್‌ಪೇಟೆ

ಹಣಕಾಸಿನ ವಿಚಾರಕ್ಕೆ ಇಬ್ಬರು ಸ್ನೇಹಿತರ ನಡುವೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ತ್ಯಾಮಗೊಂಡ್ಲು ಹೋಬಳಿಯ ಮಹಿಮಾಪುರದ ಖಾಸಗಿ ಹೋಟೆಲ್ ಬಳಿಯಲ್ಲಿರುವ ವಠಾರದ ಶೆಡ್ ಮನೆಯಲ್ಲಿ ನಡೆದಿದೆ.

ತಮಿಳುನಾಡು ಮೂಲದ ರಾಜೀವ್ ಗಾಂಧಿ ಪೆರುಮಾಳ್ (40) ಕೊಲೆಯಾದ ವ್ಯಕ್ತಿ. ಈತನ ಸ್ನೇಹಿತ ಸುರೇಶ್ ಅಲಿಯಾಸ್ ಬಾಲಾಜಿ (42) ಕೊಲೆ ಮಾಡಿದ ಆರೋಪಿ.

ಘಟನೆ ಹಿನ್ನೆಲೆ: ಕೊಲೆಯಾದ ರಾಜೀವ್ ಗಾಂಧಿ ಪೆರುಮಾಳ್ ಮತ್ತು ಕೊಲೆ ಮಾಡಿದ ಆರೋಪಿ ಸುರೇಶ್ ಇಬ್ಬರು ತಮಿಳುನಾಡು ಮೂಲದವರಾಗಿದ್ದು, ಇವರಿಬ್ಬರು ಸ್ನೇಹಿತರಾಗಿ ಸಾಕಷ್ಟು ದಿನದಿಂದ ಮಹಿಮಾಪುರ ಬಳಿಯಿರುವ ಶೆಡ್‌ನಲ್ಲಿ ವಾಸವಿದ್ದು, ಕಲ್ಲು ಕೆಲಸ, ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದರು. ಸೆ.27 ರಂದು ರಾತ್ರಿ ಇವರಿಬ್ಬರ ನಡುವೆ ಹಣಕಾಸಿನ ವಿಚಾರದಲ್ಲಿ ಜಗಳ ಆರಂಭವಾಗಿದ್ದು, ಈ ಜಗಳದಲ್ಲಿ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದೆ. ಈ ವೇಳೆ ಸುರೇಶ್ ಶೆಡ್‌ನಲ್ಲಿದ್ದ ದೊಣ್ಣೆಯಿಂದ ರಾಜೀವ್ ಗಾಂಧಿ ಪೆರುಮಾಳ್ ತಲೆಗೆ ಹೊಡೆದು ಹಲ್ಲೆ ನಡೆಸಿದ್ದಾನೆ.

ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ರಾಜೀವ್ ಗಾಂಧಿ ಪೆರುಮಾಳ್ ನನ್ನು, ಸುರೇಶ್‌ ಬೆಂಗಳೂರಿನ ಎಂಟನೇ ಮೈಲಿ ಬಳಿ ಇರುವ ಪ್ರಕ್ರಿಯ ಖಾಸಗಿ ಆಸ್ಪತ್ರೆ ದಾಖಲಿಸಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ರಾಜೀವ್ ಗಾಂಧಿ ಪೆರುಮಾಳ್ ಸಾವನಪ್ಪಿದ್ದಾರೆ. ₹85,000 ವಿಚಾರವಾಗಿ ಒಂದೇ ರೂಮಿನಲ್ಲಿದ್ದ ಇಬ್ಬರು ಸ್ನೇಹಿತರ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಸ್ಥಳಕ್ಕೆ ಬೆಂ.ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ, ಎಎಸ್ಪಿ ನಾಗೇಶ್, ಡಿವೈಎಸ್ಪಿ ರವಿ, ನೆಲಮಂಗಲ ಗ್ರಾಮಾಂತರ ಠಾಣೆ ಪಿಐ ನರೇಂದ್ರ ಬಾಬು, ವಿಧಿ-ವಿಜ್ಞಾನ ಪ್ರಯೋಗಾಲಯದ ತಂಡ, ಬೆರಳಚ್ಚು ತಜ್ಞರ ತಂಡದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಬ್ಬರು ಸ್ನೇಹಿತರ ನಡುವಿನ ಜಗಳವಾಗಿದ್ದು, ವಾಗ್ವಾದದಿಂದ ಹಲ್ಲೆ ಸ್ವರೂಪ ಪಡೆದು, ದೊಣ್ಣೆಯಿಂದ ಸ್ನೇಹಿತನ ಕೊಲೆಯಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪ್ರಗತಿಯಲ್ಲಿದ್ದು ತನಿಖೆ ನಂತರ ಕೊಲೆಯಾಗಿದ್ದಕ್ಕೆ ಕಾರಣವೆನೆಂಬುದನ್ನು ತಿಳಿಯಬಹುದಾಗಿದೆ.

ಸಿ.ಕೆ.ಬಾಬಾ, ಎಸ್ಪಿ ಬೆಂಗಳೂರು ಗ್ರಾಮಾಂತರ.