ಸಾರಾಂಶ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತಾಶ್ರಯದಲ್ಲಿ ಚಾಮರಾಜನಗರದ ಡಾ. ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಮೈಸೂರು ವಿಭಾಗ ಮಟ್ಟದ ದಸರಾ ಕ್ರೀಡಾಕೂಟದ ಫುಟ್ ಬಾಲ್ ಮತ್ತು ಹ್ಯಾಂಡ್ ಬಾಲ್ ಸ್ಪರ್ಧೆಯ ಉದ್ಘಾಟನಾ ಸಮಾರಂಭವವನ್ನು ಚುಡಾ ಅಧ್ಯಕ್ಷ ಮಹಮದ್ ಅಸ್ಗರ್ (ಮುನ್ನಾ) ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಿ, ಸೋಲು ಮುಂದಿನ ಗೆಲುವಿನ ಮೆಟ್ಟಿಲೆಂದು ಅರಿತು ಕ್ರೀಡಾಸ್ಫೂರ್ತಿ ಮೆರೆಯುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಸಲಹೆ ನೀಡಿದರು.ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮೈಸೂರು ವಿಭಾಗಮಟ್ಟದ ದಸರಾ ಕ್ರೀಡಾಕೂಟದ ಅಂಗವಾಗಿ ೮ ಜಿಲ್ಲೆಗಳ ಕ್ರೀಡಾಪಟುಗಳು ಪಾಲ್ಗೊಂಡಿದ್ದ ಫುಟ್‌ಬಾಲ್ ಮತ್ತು ಹ್ಯಾಂಡ್‌ಬಾಲ್ ಸ್ಪರ್ಧೆಗಳನ್ನು ಉದ್ಘಾಟಿಸಿ, ಕ್ರೀಡಾಕೂಟದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ದೇಹ ಸದೃಢಗೊಳ್ಳಲಿದೆ. ಇದರಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ, ಸ್ಥಿರತೆ ಉಂಟಾಗಲಿದ್ದು, ಪ್ರತಿಯೊಬ್ಬರು ಕ್ರೀಡೆಗೆ ಆದ್ಯತೆ ನೀಡಬೇಕು. ಕ್ರೀಡೆಯಿಂದ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆ ಸಾಧ್ಯವಾಗಲಿದೆ. ಕ್ರೀಡಾಪಟುಗಳು ತಮ್ಮಲ್ಲಿರುವ ನಕಾರಾತ್ಮಕ ಅಂಶಗಳನ್ನು ಸರಿಪಡಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ. ತೀರ್ಪುಗಾರರು ನಿಷ್ಪಕ್ಷವಾಗಿ ತೀರ್ಪು ನೀಡಬೇಕು ಎಂದರು. ನಮ್ಮದು ಚೆಲುವ ಚಾಮರಾಜನಗರ ಜಿಲ್ಲೆಯಾಗಿದೆ. ಜಿಲ್ಲೆಯಲ್ಲಿ ಶೇ. ೫೨ರಷ್ಟು ಸಮೃದ್ಧ ಅರಣ್ಯ ಪ್ರದೇಶವಿದೆ. ಅಭಯಾರಣ್ಯಗಳು, ದೈವಿಕತೆಗೆ ಹೆಸರುವಾಸಿಯಾದ ಧಾರ್ಮಿಕ ಸ್ಥಳಗಳು, ಕೈಬೀಸಿ ಕರೆಯುವ ಪ್ರವಾಸಿ ತಾಣಗಳಿವೆ. ದಸರಾ ಕ್ರೀಡಾಕೂಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ಕ್ರೀಡಾಪಟುಗಳು ಇಲ್ಲಿನ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಜಿಲ್ಲೆಯ ವಿಶೇಷತೆಯನ್ನು ಅರಿಯಬೇಕು ಎಂದು ಅವರು ತಿಳಿಸಿದರು.ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಕ್ರೀಡೆಯಲ್ಲಿ ಸೋಲು-ಗೆಲುವು ಸಹಜ. ಕ್ರೀಡಾಪಟುಗಳು ತೀರ್ಪುಗಾರರು ನೀಡುವ ತೀರ್ಪಿಗೆ ಬದ್ದರಾಗಿರಬೇಕು. ಕ್ರೀಡೆಯಲ್ಲಿ ಗೆದ್ದವರು ಹಿಗ್ಗದೇ, ಸೋತವರು ಹತಾಶರಾಗದೇ ಗೆಲ್ಲಲು ಮರಳಿ ಪ್ರಯತ್ನ ಮಾಡಬೇಕು ಎಂದರು.
ಜಿಲ್ಲಾ ನೆಟ್‌ಬಾಲ್ ಅಸೋಶಿಯೇಷನ್ ಅಧ್ಯಕ್ಷೆ ನರ್ಗಿಸ್ ಬಾನು ಮಾತನಾಡಿ, ಪ್ರಥಮ ಬಾರಿಗೆ ಮೈಸೂರು ವಿಭಾಗಮಟ್ಟದ ದಸರಾ ಕ್ರೀಡಾಕೂಟದ ಫುಟ್‌ಬಾಲ್ ಹಾಗೂ ನೆಟ್‌ಬಾಲ್ ಸ್ಪರ್ಧೆಗಳು ಚಾಮರಾಜನಗರದಲ್ಲಿ ನಡೆಯುತ್ತಿದೆ. ಇದು ಜಿಲ್ಲೆಯ ಕ್ರೀಡಾಭಿವೃದ್ಧಿಗೆ ಸಹಕಾರಿಯಾಗಲಿದೆ. ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆ ತೋರಲು ಉತ್ತಮ ಅವಕಾಶವಿದೆ ಎಂದು ಹೇಳಿದರು. ಪಂಚಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶಿವಸ್ವಾಮಿ, ಜಿಲ್ಲಾ ಕ್ರೀಡಾಂಗಣ ಸಮಿತಿ ಸದಸ್ಯ ಶ್ರೀನಿವಾಸಪ್ರಸಾದ್, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ (ಗ್ರೇಡ್-೨) ಚಿಕ್ಕಬಸವಯ್ಯ, ಫುಟ್‌ಬಾಲ್ ತರಬೇತುದಾರ ಗಣೇಶ್, ಇತರರು ಕಾರ್ಯಕ್ರಮದಲ್ಲಿ ಇದ್ದರು.