ಸಾರಾಂಶ
ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ಮೀನುಗಾರಿಕೆ ಇಲ್ಲವಾದರೆ ಮೀನುಗಾರರು, ವ್ಯಾಪಾರಿಗಳು ಬೀದಿಗೆ ಬೀಳುವ ಆತಂಕ
ಕಾರವಾರ: ಅಂಕೋಲಾ ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಖಂಡಿಸಿ ಮಂಗಳವಾರ ಕಾರವಾರದಲ್ಲೂ ಮೀನುಗಾರರು ಪ್ರತಿಭಟನೆ ಮಾಡಿ, ಮೀನು ಮಾರಾಟ ಬಂದ್ ಮಾಡಿದರು.
ಜಿಲ್ಲಾ ಮಹಿಳಾ ಮೀನು ಮಾರಾಟ ಅಭಿವೃದ್ಧಿ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಕೇಣಿ ಬಂದರು ಯೋಜನೆಗೆ ಧಿಕ್ಕಾರ ಕೂಗುತ್ತ, ಯಾವುದೇ ಕಾರಣಕ್ಕೂ ವಾಣಿಜ್ಯ ಬಂದರುಗಳ ನಿರ್ಮಾಣ ಹಾಗೂ ವಿಸ್ತರಣೆ ಮಾಡದೇ ಕಡಲ ತೀರವನ್ನು ಮೀನುಗಾರರಿಂದ ಕಸಿದುಕೊಳ್ಳದಂತೆ ಆಗ್ರಹಿಸಿದರು.ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಸಾವಿರಾರು ಕುಟುಂಬಗಳು ಮೀನುಗಾರಿಕೆ ಇಲ್ಲವಾದರೆ ಮೀನುಗಾರರು, ವ್ಯಾಪಾರಿಗಳು ಬೀದಿಗೆ ಬೀಳುವ ಆತಂಕ ಉಂಟಾಗಿದೆ. ಮೀನುಗಾರರ ಜೀವನಕ್ಕೆ ಕಂಟಕವಾದ ಬಂದರು ಯೋಜನೆ ಬೇಡವೇ ಬೇಡ ಎಂದು ಮೀನುಗಾರರು ಘೋಷಣೆ ಕೂಗುತ್ತಾ ವಿರೋಧಿಸಿದರು.
ಮೀನುಗಾರ ಮಹಿಳೆಯರು ಉದ್ದೇಶಿತ ಕೇಣಿ ಬಂದರು ಯೋಜನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೀನು ಮಾರಾಟ ಬಂದಾದ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಬಂದ ವ್ಯಾಪಾರಿಗಳು ಹಿಂದಿರುಗಿದರು.