ಸಾರಾಂಶ
ಭಟ್ಕಳ: ಪಟ್ಟಣದ ಹಳೇ ಬಸ್ ನಿಲ್ದಾಣದ ರಾಜಾಂಗಣ ಮೀನು ಮಾರುಕಟ್ಟೆಯ ಕುರಿತು ಸ್ವಚ್ಛತೆಯ ಹೆಸರಿನಲ್ಲಿ ಅಪಪ್ರಚಾರ ಮತ್ತು ಶಾಂತಿ ಭಂಗ ದುರುದ್ದೇಶದಿಂದ ಮೀನು ಮಾರುಕಟ್ಟೆ ಬಳಿ ಕಸ ತಂದು ಹಾಕಿದ ಕಿಡಿಗೇಡಿಗಳ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿ ತಾಲೂಕು ಮೀನುಗಾರರು ಮತ್ತು ಮೀನು ಮಾರಾಟಗಾರರ ಸಂಘದಿಂದ ಪುರಸಭೆ ಎದುರು ಪ್ರತಿಭಟನೆ ನಡೆಸಿ ಮುಖ್ಯಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಯಿತು.
ಮನವಿಯಲ್ಲಿ ಹಳೇ ಬಸ್ ನಿಲ್ದಾಣದ ಸನಿಹದ ಮೀನು ಮಾರುಕಟ್ಟೆಯ ಸ್ವಚ್ಛತೆ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಕೆಲವು ವ್ಯಕ್ತಿಗಳು ಧರ್ಮಾಧಾರಿತವಾಗಿಯೂ ಹಳೇ ಮೀನು ಮಾರುಕಟ್ಟೆ ಬಗ್ಗೆ ನಿರಂತರ ಅಪಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆಯ ಗಮನಕ್ಕೂ ತರಲಾಗಿದೆ. ಹಳೇ ಮೀನು ಮಾರುಕಟ್ಟೆಯ ಬಳಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರಲು ಕೆಲವು ಕಿಡಿಗೇಡಿಗಳು ಕಸದ ರಾಶಿ ಹಾಕಿ ಹೋಗಿದ್ದಾರೆ. ಪುರಸಭೆಯ ಅಧಿಕಾರಿಗಳು ಹಳೇ ಮೀನು ಮಾರುಕಟ್ಟೆಯ ಬಗ್ಗೆ ಅಪಪ್ರಚಾರ ಮತ್ತು ಮೀನು ಮಾರುವ ಸ್ಥಳದಲ್ಲಿ ಕಸದ ರಾಶಿ ಹಾಕಿದವರ ವಿರುದ್ಧ ಪೊಲೀಸ್ ಇಲಾಖೆಗೆ ದೂರು ನೀಡಬೇಕು ಎಂದು ಆಗ್ರಹಿಸಲಾಗಿದೆ.ಹಳೇ ಮೀನು ಮಾರುಕಟ್ಟೆಯಲ್ಲಿ ನೂರಾರು ವರ್ಷಗಳಿಂದ ಯಾವುದೇ ಪಕ್ಷಭೇದ, ಧರ್ಮಭೇದವಿಲ್ಲದೇ ವ್ಯಾಪಾರ ವಹಿವಾಟು ನಡೆಸಿಕೊಂಡು ಹೋಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವರು ಶಾಂತಿ ಭಂಗ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಪುರಸಭೆಯವರು ಆರೋಪಿಗಳ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸದೇ ಇದ್ದಲ್ಲಿ ಪುರಸಭೆಯ ನಿರ್ಲಕ್ಷ್ಯ ಧೋರಣೆ ಖಂಡಿಸಿ ಪುರಸಭೆಯ ಅಧಿಕಾರಿಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆಂದು ನಮ್ಮ ಸಂಘದಿಂದ ಪೊಲೀಸ್ ದೂರು ದಾಖಲಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.
ಮೀನು ಮಾರಾಟ ಮಹಿಳೆಯರು ಮೀನು ಮಾರುಕಟ್ಟೆಯ ಬಗ್ಗೆ ಅಪಪ್ರಚಾರ ಮಾಡುತ್ತಿರುವುದಕ್ಕೆ ಮತ್ತು ಮೀನು ಮಾರುವ ಜಾಗದಲ್ಲಿ ಕಸದ ರಾಶಿ ಹಾಕಿದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ ಆರೋಪಿತರ ವಿರುದ್ಧ ಕಾನೂನು ಕ್ರಮ ಆಗಲೇಬೇಕು ಎಂದು ಪಟ್ಟು ಹಿಡಿದರು.ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಮೀನು ಮಾರಾಟಗಾರರಾದ ಖಾಜಾ, ಕಲ್ಯಾಣಿ ಮೊಗೇರ, ಹಿಂಜಾವೇ ಅಧ್ಯಕ್ಷ ಜಯಂತ ನಾಯ್ಕ ಮತ್ತಿತರರು ಹಳೇ ಮೀನು ಮಾರುಕಟ್ಟೆಯ ಬಗ್ಗೆ ಅಪಪ್ರಚಾರ ಮಾಡುವವರ ಮತ್ತು ಕಸ ಹಾಕಿದವರ ವಿರುದ್ಧ ಪ್ರಕರಣ ದಾಖಲಿಸದೇ ಇರಲು ಯಾರ ಒತ್ತಡ ಇದೆ ಎಂದು ಹೇಳಿ ಎಂದು ಮುಖ್ಯಾಧಿಕಾರಿ ಅವರನ್ನು ಪ್ರಶ್ನಿಸಿದರು. ಮುಖ್ಯಾಧಿಕಾರಿ ವೆಂಕಟೇಶ ನಾವುಡ ಮನವಿ ಸ್ವೀಕರಿಸಿ ಕಸ ಎಸೆದವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳವ ಭರವಸೆ ನೀಡಿದರು.