ಸಾರಾಂಶ
ಮಾಗಡಿ: ತಾಲೂಕಿನಲ್ಲಿ ವಾರದಿಂದ ಸುರಿದ ಸತತ ಮಳೆಯಿಂದ ಬಹುತೇಕ ತಾಲೂಕಿನ ಕೆರೆಗಳೆಲ್ಲ ಕೋಡಿ ಹರಿದು ಕೆರೆಯಲ್ಲಿ ಬಿಟ್ಟಿದ್ದ ಮೀನೆಲ್ಲ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.
ಮಾಗಡಿ: ತಾಲೂಕಿನಲ್ಲಿ ವಾರದಿಂದ ಸುರಿದ ಸತತ ಮಳೆಯಿಂದ ಬಹುತೇಕ ತಾಲೂಕಿನ ಕೆರೆಗಳೆಲ್ಲ ಕೋಡಿ ಹರಿದು ಕೆರೆಯಲ್ಲಿ ಬಿಟ್ಟಿದ್ದ ಮೀನೆಲ್ಲ ಕೊಚ್ಚಿ ಹೋಗಿ ಅಪಾರ ನಷ್ಟ ಉಂಟಾದ ಘಟನೆ ನಡೆದಿದೆ.
ಕಳೆದ ಎರಡು ವರ್ಷಗಳ ಹಿಂದೆ ಮೀನುಗಾರಿಕೆ ಇಲಾಖೆಯ ಹರಾಜಿನಲ್ಲಿ ಕೆರೆಗಳಲ್ಲಿ ಮೀನು ಸಾಕಾಣಿಕೆಗೆ ಕೆಲವರು ಟೆಂಡರ್ ಪಡೆದಿದ್ದರು. ಅದರಂತೆ ಎರಡು ವರ್ಷಗಳಿಂದಲೂ ಮೀನು ಸಾಕುತ್ತಿದ್ದರು. ಈಗ ಕೆರೆಗಳಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದಿದ್ದು ಕೋಡಿ ಹರಿದ ನೀರಿನಲ್ಲಿ ಮೀನು ಮರಿಗಳು ಕೊಚ್ಚಿ ಹೋಗಿವೆ. ಇದರಿಂದ ಲಕ್ಷಾಂತರ ರು. ನಷ್ಟವಾಗಿದೆ ಎಂದು ಮೀನು ಸಾಕುತ್ತಿದ್ದ ಮಾಲೀಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.ತಾಲೂಕಿನ ಬೆಳಗುಂಬ ಕೆರೆ ಹಾಗೂ ಕೆಂಪಸಾಗರ ಕೆರೆಗಳಿಗೆ ಇತ್ತೀಚೆಗಷ್ಟೇ ಮೀನು ಮರಿಗಳನ್ನು ಬಿಡಲಾಗಿತ್ತು. ಈಗ ಈ ಎರಡು ಕೆರೆಗಳು ಕೋಡಿ ಬಿದ್ದು ಅಪಾರ ಸಂಖ್ಯೆಯಲ್ಲಿ ನೀರು ಹರಿಯುತ್ತಿದೆ. ಮೀನುಗಾರಿಕೆ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಯಾವುದೇ ಕಾರಣಕ್ಕೂ ಮೀನನ್ನು ಹಿಡಿಯುವ ನಿಟ್ಟಿನಲ್ಲಿ ಕೆರೆಯ ಕೋಡಿಗೆ ತಂತಿ ಬಲೆ ಹಾಗೂ ಮೆಸ್ ಹಾಕಬಾರದು. ಬಲೆಗಳಲ್ಲಿ ವಸ್ತುಗಳು ಸಿಲುಕಿಕೊಂಡು ನೀರು ಅಲ್ಲೇ ಉಳಿದರೆ ಕೆರೆ ಏರಿಗೆ ಅಪಾಯ ಆಗುತ್ತದೆ ಎಂದು ಮೀನು ಬಿಟ್ಟಿದ್ದ ಮಾಲೀಕರಿಗೆ ಸೂಚನೆ ನೀಡಿದ್ದಾರೆ. ಇದರಿಂದ ಮೀನುಗಳು ಕೆರೆ ಕೋಡಿಯಿಂದ ಕೊಚ್ಚಿ ಹೋಗಿದ್ದು ಅಪಾರ ನಷ್ಟ ಉಂಟಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.
ಮಾಗಡಿ ತಾಲೂಕಿನಲ್ಲಿ ಬೆಳಗುಂಬ ಗ್ರಾಪಂ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಬೆಳಗುಂಬ ಕೆರೆ ಕೋಡಿ ನೀರು ಹರಿದು ತೊರೆಚೆನ್ನನಹಳ್ಳಿ ಸೇತುವೆ ಕೂಡ ಕೊಚ್ಚಿಹೋಗಿದೆ. ಬೆಳಗುಂಬ ಕೆರೆಗೆ ಮಳೆಗೆ ಮೊದಲು 25 ಲಕ್ಷ ಮೀನಿನ ಮರಿ ಬಿಡಲಾಗಿದ್ದು, ಮಳೆಯಿಂದ ನಷ್ಟ ಉಂಟಾಗಿದೆ.