ಸಮುದ್ರದಲ್ಲಿ ಬಲೆ ಹಾಕಲು ತಯಾರಿ ಮಾಡುತ್ತಿರುವಾಗ ಬಂದ ಸುಳಿಗಾಳಿಗೆ ದೋಣಿ ಸಿಕ್ಕಿಹಾಕಿಕೊಂಡು ಮಗುಚಿ ಬಿತ್ತು. ಇತರ ಮೀನುಗಾರರು ಈಜಿಕೊಂಡು ದಡಕ್ಕೆ ಸೇರಿದರೂ, ದುರಾದೃಷ್ಟವಶಾತ್ ನೀಲಾಧರ ಅವರು ನೀರಿನಲ್ಲಿದ್ದ ಮೀನಿನ ಬಲೆಗೆ ಸಿಕ್ಕಿ ಹಾಕಿಕೊಂಡರು.

ಕನ್ನಡಪ್ರಭ ವಾರ್ತೆ ಮಲ್ಪೆಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.

ನೀಲಾಧರ ತಿಂಗಳಾಯ (51) ಮೃತರು.ಶುಕ್ರವಾರ ಬೆಳಗ್ಗೆ ಕೃಷ್ಣ ಜಿ. ಕೊಟ್ಯಾನ್ ಎಂಬವರ ಮಾಲಿಕತ್ವದ ದೋಣಿಯಲ್ಲಿ ಒಟ್ಟು 24 ಜನ ಮೀನುಗಾರರು ಸಮುದ್ರಕ್ಕೆ ತೆರಳಿದ್ದರು. ಸಮುದ್ರದಲ್ಲಿ ಬಲೆ ಹಾಕಲು ತಯಾರಿ ಮಾಡುತ್ತಿರುವಾಗ ಬಂದ ಸುಳಿಗಾಳಿಗೆ ದೋಣಿ ಸಿಕ್ಕಿಹಾಕಿಕೊಂಡು ಮಗುಚಿ ಬಿತ್ತು. ಇತರ ಮೀನುಗಾರರು ಈಜಿಕೊಂಡು ದಡಕ್ಕೆ ಸೇರಿದರೂ, ದುರಾದೃಷ್ಟವಶಾತ್ ನೀಲಾಧರ ಅವರು ನೀರಿನಲ್ಲಿದ್ದ ಮೀನಿನ ಬಲೆಗೆ ಸಿಕ್ಕಿ ಹಾಕಿಕೊಂಡರು. ಇದನ್ನು ತಕ್ಷಣ ಉಳಿದ ಮೀನುಗಾರರು ಗಮನಸಿ ಅವರನ್ನು ಬಲೆಯಿಂದ ಬಿಡಿಸಿ ದಡಕ್ಕೆ ತಂದಾಗ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅವರು ಅದಾಗಲೇ ಮೃತಪಟ್ಟಿದ್ದರು. ಮಲ್ಪೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮೀನುಗಾರನ ಮನೆಗೆ ಶಾಸಕ ಯಶ್ಪಾಲ್ ಭೇಟಿ, ಸಾಂತ್ವಾನ

ಮಲ್ಪೆ ಬಂದರಿನಿಂದ ನಾಡದೋಣಿ ಮೀನುಗಾರಿಕೆಗೆ ತೆರಳಿದ್ದ ಸಂದರ್ಭದಲ್ಲಿ ದೋಣಿ ಮಗುಚಿ ಮೃತಪಟ್ಟ ಉದ್ಯಾವರ ಗ್ರಾಮದ ಪಿತ್ರೋಡಿಯ ಮೀನುಗಾರ ನೀಲಾಧರ ಜಿ. ತಿಂಗಳಾಯ ಅವರ ಮನೆಗೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.ಕಾಪು ಶಾಸಕ ಸುರೇಶ್ ಶೆಟ್ಟಿ ಅವರೊಂದಿಗೆ ಸಮಾಲೋಚನೆ ನಡೆಸಿ ಮೀನುಗಾರಿಕೆ ಇಲಾಖೆ ಸಚಿವ ಮಾಂಕಾಳ ವೈದ್ಯ ಅವರಿಗೆ ಘಟನೆಯ ಮಾಹಿತಿ ನೀಡಿ, ತಕ್ಷಣ ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ 10 ಲಕ್ಷ ರು. ಪರಿಹಾರವನ್ನು ಒದಗಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಕಾಪು ಬಿಜೆಪಿ ಮಂಡಲ ಅಧ್ಯಕ್ಷ ಜಿತೇಂದ್ರ ಶೆಟ್ಟಿ, ಉದ್ಯಾವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ರಾಜೇಶ್ ಕುಂದರ್, ಗ್ರಾಮ ಪಂಚಾಯಿತಿ ಸದಸ್ಯರಾದ ಸಚಿನ್ ಸುವರ್ಣ, ಚೇತನ್, ನಾಡದೋಣಿ ಮೀನುಗಾರ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.