ಸಾರಾಂಶ
ಮೀನು ಹಿಡಿಯಲು ಹೋದ ಮೀನುಗಾರ ಬಲೆ ಕಾಲಿಗೆ ಸಿಲುಕಿಕೊಂಡು ಮಗಳ ಕಣ್ಣೆದುರಲ್ಲೇ ಕೃಷ್ಣಾ ನದಿಯಲ್ಲಿ ಮುಳುಗಿ ಅಸುನೀಗಿದ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ-ಮಹಿಷವಾಡಗಿ ಸೇತುವೆ ಬಳಿ ಕೃಷ್ಣಾನದಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಮೀನು ಹಿಡಿಯಲು ಹೋದ ಮೀನುಗಾರ ಬಲೆ ಕಾಲಿಗೆ ಸಿಲುಕಿಕೊಂಡು ಮಗಳ ಕಣ್ಣೆದುರಲ್ಲೇ ಕೃಷ್ಣಾ ನದಿಯಲ್ಲಿ ಮುಳುಗಿ ಅಸುನೀಗಿದ ಘಟನೆ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ-ಮಹಿಷವಾಡಗಿ ಸೇತುವೆ ಬಳಿ ಕೃಷ್ಣಾನದಿಯಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.ತಾಲೂಕಿನ ಕುಲಹಳ್ಳಿ ಗ್ರಾಮದ ಬಾವುಸಾಬ ಬಾಗಡೆ (೪೨) ಮೃತ ವ್ಯಕ್ತಿ. ಎಂದಿನಂತೆ ಶುಕ್ರವಾರ ರಬಕವಿ-ಮಹಿಷವಾಡಗಿ ಸೇತುವೆ ಬಳಿ ಕೃಷ್ಣಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ಹಿಂದಿನ ದಿನ ಬಲೆ ಹಾಕಿ ಮರುದಿನ ಬಲೆ ತೆಗೆಯುವ ವೇಳೆ ಕಾಲಿಗೆ ಬಲೆ ಸಿಲುಕಿ ನೀರಲ್ಲಿ ಮಳುಗಿ ಅಸುನೀಗಿದ್ದಾನೆ. ಮಗಳ ಎದುರೇ ಸಾವು:
೧೦ ವರ್ಷದ ಬಾಲಕಿ ಸಹ ತಂದೆಯೊಂದಿಗೆ ನದಿಗೆ ಬಂದಿದ್ದಳು. ತಂದೆ ಬಾವುಸಾಬ ಮೀನಿಗೆ ಹಾಕಿದ ಬಲೆಯನ್ನು ತರುವುದಾಗಿ ತಿಳಿಸಿ ನದಿ ತೀರದಲ್ಲಿ ಕೂಡ್ರಿಸಿದ್ದಾನೆ. ಕಣ್ಣೆದುರೇ ತಂದೆ ನೀರಿನಲ್ಲಿ ಮುಳುಗುತ್ತಿದ್ದರೂ ಅಸಾಹಾಯಕಳಾಗಿ ನಿಂತು ನೋಡುವಂತಾಯಿತು. ಈಜುಗಾರರ ತಂಡದ ಸಹಾಯದಿಂದ ಶವಕ್ಕಾಗಿ ಶೋಧ ನಡೆಸಿದ್ದು, ಸ್ಥಳಕ್ಕೆ ಬನಹಟ್ಟಿ ಪೊಲೀಸರು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಶುಕ್ರವಾರ ಸಂಜೆಯವರೆಗೆ ಶವ ಸಿಕ್ಕಿರಲಿಲ್ಲ. ಶನಿವಾರ ಬೆಳಗ್ಗೆ ಮತ್ತೆ ಶೋಧ ಕಾರ್ಯಾಚರಣೆ ನಡೆಸಿದಾಗ ಶವ ಕುಲಹಳ್ಳಿ ಬಳಿ ಪತ್ತೆಯಾಗಿದೆ.