ಹೊನ್ನಾವರ ತಾಲೂಕಿನ ಕಾಸರಕೋಡಿನ ಟೊಂಕ ಬಳಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಾಣಿಜ್ಯ ಬಂದರು ಯೋಜನೆ ಕೈಬಿಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ಮೀನುಗಾರರು ಒತ್ತಾಯಿಸಿದರು.

ಹೊನ್ನಾವರ: ತಾಲೂಕಿನ ಕಾಸರಕೋಡಿನ ಟೊಂಕ ಬಳಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಾಣಿಜ್ಯ ಬಂದರು ಯೋಜನೆ ಕೈಬಿಡಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ, ಕಾಗೇರಿ ಅವರನ್ನು ಮೀನುಗಾರರು ಒತ್ತಾಯಿಸಿದರು. ಕಾಸರಕೋಡಿನಲ್ಲಿ ಬುಧವಾರ ನಡೆದ ಕಾರ್ಯಕ್ರಮ ಮುಗಿಸಿದ ಬಳಿಕ ಪ್ರವಾಸಿ ಮಂದಿರದಲ್ಲಿ ಮೀನುಗಾರರ ಜತೆ ಅವರು ಚರ್ಚಿಸಿದರು. ಕಾಸರಕೋಡು ವ್ಯಾಪ್ತಿಯ ಮೀನುಗಾರರು ಸಂಸದರ ಬಳಿ ತಮ್ಮ ದುಃಖ ಹಂಚಿಕೊಂಡರು. ಈಗ ತಮ್ಮ ಮೇಲೆ ವಿನಾಕಾರಣ ಎಫ್‌ಐಆರ್‌ ಹಾಕಲಾಗುತ್ತಿದೆ. ಯಾರು ಈ ವಿಚಾರದ ಬಗ್ಗೆ ಮಾತನಾಡುತ್ತಾರೋ ಅವರನ್ನು ಹೆಚ್ಚಾಗಿ ಟಾರ್ಗೆಟ್‌ ಮಾಡಲಾಗುತ್ತದೆ. ಬಂದರು ನಿರ್ಮಾಣಕ್ಕಾಗಿ 94 ಎಕರೆ ನೀಡಿದ್ದೇವೆ ಎನ್ನಲಾಗಿತ್ತು. ಆದರೆ ಈಗ ಅವರು ಸಂಪೂರ್ಣ ಕಾಸರಕೋಡು ಅವರದ್ದೆ ಎಂದು ಹೇಳುತ್ತಿದ್ದಾರೆ. ಬಂದರು‌ ಇಲಾಖೆಯವರು ಸುಳ್ಳು ಮಾಹಿತಿ ನೀಡಿದ್ದಾರೆ. ಕಾಸರಕೋಡಿನಲ್ಲಿ ಮೀನುಗಾರರು ಇಲ್ಲ ಎಂದೇ ತೋರಿಸಿದ್ದಾರೆ. ನಕಾಶೆಯಿಂದಲೇ ಕೆಲವು ಭಾಗಗಳನ್ನು ತೆಗೆದಿದ್ದಾರೆ. ಸುಳ್ಳು ಮಾಹಿತಿ ನೀಡಿ ಅಪಪ್ರಚಾರ ಮಾಡುತ್ತಿದ್ದಾರೆ. ಯಥಾಸ್ಥಿತಿ ನೋಡಿ ವರದಿ ನೀಡಬೇಕು. ಯಾವುದೋ ಆಫೀಸ್‌ನಲ್ಲಿ ಕುಳಿತು ಬರೆಯುವುದಲ್ಲ. ಎಷ್ಟು ಮನೆ ಇದೆ? ಮೀನುಗಾರರು ಎಷ್ಟಿದ್ದಾರೆ? ಎಂಬುದನ್ನು ತಿಳಿದು ವರದಿ‌ ನೀಡಬೇಕು ಎಂದು ಮೀನುಗಾರರು ವಿವರಿಸಿದರು.

ಇಲ್ಲಿ ಸುಮಾರು‌ ಒಂದೂವರೆ ಸಾವಿರ ಕುಟುಂಬಗಳಿವೆ. ಸಾವಿರ ಮಂದಿಗೆ ಉದ್ಯೋಗ ಸಿಗುತ್ತದೆ ಎಂದು ಹೇಳುತ್ತಾರೆ. ಆದರೆ ಕೇವಲ 70 ಜನರಿಗೆ ಉದ್ಯೋಗ ಸಿಗಬಹುದು. ಸಾವಿರಾರು ಜನರಿಗೆ ತೊಂದರೆ ನೀಡುವ ಈ ಬಂದರು ನಮಗೆ ಬೇಕಾ ಎಂದು ಆಕ್ರೋಶ ಹೊರಹಾಕಿದರು.

ನಾವು ಅಭಿವೃದ್ಧಿ ವಿರೋಧಿಗಳಲ್ಲ. ನಮ್ಮ ಜಿಲ್ಲೆಯಲ್ಲಿ ಅವಕಾಶಗಳಿವೆ. ಈ ಹಿಂದಿನ‌ ಬಂದರುಗಳನ್ನು ಮೇಲ್ದರ್ಜೆಗೆ ಏರಿಸಿ. ಬದಲಾಗಿ ಮೀನುಗಾರಿಕೆಗೆ ಪೂರಕವಾದ ಫಿಶ್ ಮಿಲ್‌ಗಳನ್ನು, ಅಳಿವೆಗೆ ಸಂಬಂಧಿಸಿದ ಯೋಜನೆ ತನ್ನಿ ಎಂದು ಆಗ್ರಹಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸಂಸದರು, ಸ್ಥಳೀಯರಿಗೆ ಈ ಬಂದರಿನಿಂದ ಉದ್ಯೋಗ ಸಿಗುವುದಿಲ್ಲ. ಜನವಸತಿ ಬಗ್ಗೆ ಸರಿಯಾದ ಮಾಹಿತಿ ಸಂಗ್ರಹಿಸುತ್ತೇವೆ. ಸಂಬಂಧಿಸಿದ ಇಲಾಖೆ ಜತೆ ಮಾತಾಡುತ್ತೇನೆ ಎಂದು ಭರವಸೆ ನೀಡಿದರು. ತಾಲೂಕು ಅಧ್ಯಕ್ಷ ಮಂಜುನಾಥ ನಾಯ್ಕ, ಬಿಜೆಪಿ ಪದಾಧಿಕಾರಿಗಳು ಹಾಜರಿದ್ದರು. ಜನರ ಸಂಕಷ್ಟ ಕೇಳಲಿ: ಐದು ವರ್ಷದ ಹಿಂದೆ ಶಾಸಕನಾಗಿದ್ದಾಗಿಂದಲೂ ಈ ವಿಚಾರದ ಬಗ್ಗೆ ಹೋರಾಡಿದ್ದೇನೆ. ಬೇಕಾಬಿಟ್ಟಿ‌ ಎಫ್‌ಐಆರ್ ಹಾಕುತ್ತಿರುವ ಕುರಿತು ಎಸ್‌ಪಿ ಗಮನಕ್ಕೂ ತಂದಿದ್ದೇನೆ. ಪ್ರತಿಭಟನೆ ಮಾಡುವುದು ಜನರ ಹಕ್ಕು, ಅದನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ. ಸಚಿವರು, ಡಿಸಿ, ಎಸ್‌ಪಿ ಅವರೆಲ್ಲಾ ಜನರ ಸಂಕಷ್ಟ ಕೇಳಲಿ ಎಂದು ಮಾಜಿ ಶಾಸಕ ಸುನೀಲ್‌ ನಾಯ್ಕ ಹೇಳಿದರು. ಮೀನುಗಾರರಿಗೆ ಮೂಲಭೂತ ಸೌಕರ್ಯ ನೀಡುವ ಕೆಲಸ ಮಾಡಿ. ಅವರ ಪ್ರತಿಭಟನೆ ಹಕ್ಕು ಕಸಿದುಕೊಳ್ಳಬೇಡಿ ಎಂದು ಹೇಳಿದರು.