ಸಾರಾಂಶ
ಕಾರವಾರ: ವಿಶ್ವ ಮೀನುಗಾರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಮೀನುಗಾರ ಸಮುದಾಯದವರಿಂದ ನಗರದಲ್ಲಿ ಮಂಗಳವಾರ ಬೃಹತ್ ಮೆರವಣಿಗೆ ಹಾಗೂ ಮೀನುಗಾರಿಕೆಯ ಸ್ತಬ್ಧಚಿತ್ರಗಳ ಪ್ರದರ್ಶನ ನಡೆಯಿತು.
ನಗರದ ಕೋಡಿಬೀರ ದೇವಸ್ಥಾನ ಪ್ರವೇಶದ್ವಾರದ ಬಳಿ ಮೆರವಣಿಗೆಗೆ ವಿಶ್ವ ಮೀನುಗಾರಿಕೆ ದಿನಾಚರಣೆಯ ಸಮಿತಿಯ ಅಧ್ಯಕ್ಷ ಅಶೋಕ ಹರಿಕಂತ್ರ ಚಾಲನೆ ನೀಡಿದ್ದು, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಮೀನುಗಾರ ಮುಖಂಡ ಗಣಪತಿ ಮಾಂಗ್ರೆ ಸಾಥ್ ನೀಡಿದರು.ಬಳಿಕ ನಗರದ ಪ್ರಮಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಜಿಲ್ಲೆಯ ವಿವಿಧ ಭಾಗದಿಂದ ಬಂದ ನೂರಾರು ಮೀನುಗಾರರು ವಿವಿಧ ಮೀನುಗಾರಿಕೆ ಸ್ತಬ್ಧಚಿತ್ರದೊಂದಿಗೆ ಸಮಾಜಕ್ಕೆ ಸಂದೇಶ ನೀಡಿದರು. ಆಮೆ ಸಂರಕ್ಷಣೆಯ ಜಾಗೃತಿ, ಹಿಂದೆ ಗತವೈಭವವನ್ನು ಸಾರುತ್ತಿದ್ದ ರಂಪಣಿ ಮೀನುಗಾರಿಕೆ, ನಶಿಸುತ್ತಿರುವ ಏಂಡಿ ಮೀನುಗಾರಿಕೆ, ಬಲೆ ನೇಯುವುದು, ಮೀನುಗಾರ ಮಹಿಳೆಯರ ಮೀನು ಮಾರಾಟ, ಮೀನು ಸಂಗ್ರಹಣೆ ಹಾಗೂ ಸಾಗಾಟ ಸೇರಿದಂತೆ ಮೀನುಗಾರಿಕೆಯ ಮಹತ್ವ ಹಾಗೂ ಮೀನುಗಾರರ ಜೀವನ ಶೈಲಿಯ ಕುರಿತಾದ ವಿಶಿಷ್ಟ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪ್ರದರ್ಶನಗೊಂಡವು.
ಟಾಗೋರ್ ಕಡಲ ತೀರದ ಮಕ್ಕಳ ಉದ್ಯಾನದ ಬಳಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ, ಮೀನುಗಾರರ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಯಾವತ್ತೂ ಹಿಂದೆ ಸರಿಯುವುದಿಲ್ಲ ಎಂದರು.ವಿಧಾನ ಪರಿಷತ್ ಸದಸ್ಯ ಗಣಪತಿ ಡಿ. ಉಳ್ವೇಕರ್ ಮಾತನಾಡಿ, ಮೀನುಗಾರರ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.
ಉತ್ತರ ಕನ್ನಡ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಮಾಜಿ ಅಧ್ಯಕ್ಷ ಗಣಪತಿ ಆರ್. ಮಾಂಗ್ರೆ ಮಾತನಾಡಿ, ಮೀನುಗಾರರ ಸಮಸ್ಯೆ ಪರಿಹಾರಕ್ಕೆ ಪಕ್ಷಾತೀತ ಪ್ರಯತ್ನವಾಗಬೇಕಿದೆ ಎಂದರು. ಡಾ. ಪ್ರಕಾಶ ಮೇಸ್ತ, ದೇವರಾಯ ಸೈಲ್, ಗೋವಾದ ವಿಲಿಯಮ್ ಮಾತನಾಡಿದರು.ಕಾರವಾರ ನಗರಸಭೆಯ ಮೀನುಗಾರ ಸಮಾಜದ ಸದಸ್ಯರು, ಗಾಬಿತ, ಅಂಬಿಗ, ಖಾರ್ವಿ ಸಮಾಜದ ಅಧ್ಯಕ್ಷರು, ಕಾರ್ಯಕ್ರಮ ಸಂಘಟನೆಯ ಅಧ್ಯಕ್ಷ ಅಶೋಕ ಹರಿಕಂತ್ರ, ಸುಶೀಲಾ ಹರಿಕಂತ್ರ ಉಪಸ್ಥಿತರಿದ್ದರು. ಮಂಜು ಮುದಗೇಕರ್ ನಿರ್ವಹಿಸಿದರು. ಚೇತನ ಹರಿಕಂತ್ರ, ಪ್ರಕಾಶ ಹರಿಕಂತ್ರ, ವಿಕಾಸ ತಾಂಡೇಲ್, ರೋಶನ್ ಹರಿಕಂತ್ರ, ರೋಹಿದಾಸ ಬಾನಾವಳಿ ಮತ್ತಿತರರು ಉಪಸ್ಥಿತರಿದ್ದರು.