ಸಾರಾಂಶ
ಅರಬ್ಬಿ ಸಮುದ್ರದಲ್ಲಿ 5 ನಾಟಿಕಲ್ ಮೈಲ್ ದೂರದಲ್ಲಿ ಈಗಾಗಲೇ ವಾಣಿಜ್ಯ ಬಂದರು ನಿರ್ಮಾಣ ಕಾಮಗಾರಿಯ ಕುರಿತ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಯಾಂತ್ರಿಕ ಬೋಟ್‌ಗಳಿಗೆ, ಪಾತಿ ದೋಣಿಗಳಿಗೆ ತೊಂದರೆಯಾಗುತ್ತಿದೆ.
ಕಾರವಾರ: ಅಂಕೋಲಾ ತಾಲೂಕಿನ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣ ಮಾಡಲು ಹೊರಟಿರುವುದನ್ನು ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸ್ಥಳೀಯರು ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಅರಬ್ಬಿ ಸಮುದ್ರದಲ್ಲಿ 5 ನಾಟಿಕಲ್ ಮೈಲ್ ದೂರದಲ್ಲಿ ಈಗಾಗಲೇ ಕಾಮಗಾರಿಯ ಕುರಿತ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಇದರಿಂದ ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಯಾಂತ್ರಿಕ ಬೋಟ್‌ಗಳಿಗೆ, ಪಾತಿ ದೋಣಿಗಳಿಗೆ ತೊಂದರೆಯಾಗುತ್ತಿದೆ. ಗುರುತಿಗಾಗಿ ಕಲ್ಲುಗಳನ್ನು ಹಾಕಿದ್ದು, ಅದಕ್ಕೆ ಬಲೆಗೆ ತಾಗಿ ಹರಿದು ನಷ್ಟವಾಗುತ್ತಿದೆ. ಲಕ್ಷಾಂತರ ರುಪಾಯಿ ಬೆಲೆಬಾಳುವ ಬಲೆಗಳಾಗಿದ್ದು, ಈ ರೀತಿ ಕಲ್ಲಿಗೆ ಸಿಲುಕಿ ಹರಿದು ಹೋದರೆ ಅಪರ ನಷ್ಟವಾಗುತ್ತದೆ.
ಈ ಬಂದರು ನಿರ್ಮಾಣ ಮಾಡುವುದರಿಂದ ಕೇಣಿ ಊರಿಗೆ ಒಂದೇ ಅಲ್ಲದೇ ಸುತ್ತಮುತ್ತಲಿನ ಗಾಬೀತಕೇಣಿ, ಹರಿಕಂತ್ರವಾಡ, ಗೇರಕೊಪ್ಪಾ, ರಾಮನಗರ, ಕೋಮಾರಪಂಥವಾಡ, ಬಡಗೇರಿ ಹೀಗೆ ಹತ್ತಾರು ಊರುಗಳಿಗೂ ತೊಂದರೆ ಉಂಟಾಗುತ್ತದೆ ಎಂದು ದೂರಿದರು.ಬಂದರು ನಿರ್ಮಾಣ ಮಾಡುವುದರಿಂದ ೪೦೦೦ ಕುಟುಂಬಗಳು ನಿರಾಶ್ರಿತರಾಗುವ ಪರಿಸ್ಥಿತಿ ಬಂದಿದೆ.
ಇದಕ್ಕಾಗಿ ಯಾವುದೇ ಭೂಮಿ ಹಾಗೂ ಮನೆಗಳನ್ನು ಭೂಸ್ವಾಧೀನ ಮಾಡಿಕೊಳ್ಳುವುದಿಲ್ಲ. ತೆರವು ಮಾಡುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಆದರೆ ಕೇಣಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ 35 ರಿಂದ 50 ಎಕರೆ ಜಮೀನು ಈಗಾಗಲೇ ಬಂದರು ನಿರ್ಮಾಣ ಮಾಡುವ ಕಂಪನಿ ಹೆಸರಿನಲ್ಲಿ ನೋಂದಣಿಯಾಗಿದೆ. ಜತೆಗೆ ಈ ಬಂದರು ವಿಷಯವಾಗಿ ಜಿಲ್ಲಾಡಳಿತ ಅಥವಾ ತಾಲೂಕು ಆಡಳಿತವಾಗಲಿ, ಬಂದರು ಇಲಾಖೆಯಾಗಲಿ ಯಾವುದೇ ಪರಿಸರ ಆಲಿಕೆ ಸಭೆ ಕರೆದಿಲ್ಲ. ಸ್ಥಳೀಯ ಜನರ ಅಹವಾಲನ್ನು ಸ್ವೀಕರಿಸಿಲ್ಲ. ಬಂದರು ನಿರ್ಮಾಣಕ್ಕೆ ಸಂಪೂರ್ಣವಾಗಿ ವಿರೋಧವಿದೆ. ಬಲವಂತವಾಗಿ ಬಂದರು ನಿರ್ಮಾಣ ಮಾಡಲು ಹೊರಟರೆ ಕಾನೂನು ಮೂಲಕ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಶ್ರೀಕಾಂತ ದುರ್ಗೇಕರ, ಚಂದ್ರಕಾಂತ ಹರಿಕಾಂತ, ಸೂರಜ್ ಹರಿಕಂತ್ರ, ಉದಯ ನಾಯಕ, ಹೂವಾ ಚಂಡೇಕರ ಮುಂತಾದವರು ಇದ್ದರು.
ಅಂಕೋಲಾದಲ್ಲೂ ಮೀನುಗಾರರಿಂದ ಬೃಹತ್ ಪ್ರತಿಭಟನೆ
ಅಂಕೋಲಾ: ತಾಲೂಕಿನ ಕೇಣಿಯಲ್ಲಿ ನಿರ್ಮಿಸಲಾಗುವ ಬೃಹತ್ ಬಂದರು ಕಾಮಗಾರಿಗೆ ಕೇಣಿ, ಭಾವಿಕೇರಿಯ ಮೀನುಗಾರು ಹಾಗೂ ಇತರ ಸಮಾಜದವರು ತೀವ್ರವಾಗಿ ವಿರೋಧಿಸಿ ಶುಕ್ರವಾರ ಪಾದಯಾತ್ರೆಯ ಮೂಲಕ ಆಗಮಿಸಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಮೀನುಗಾರ ಮುಖಂಡ ಶ್ರೀಕಾಂತ ದುರ್ಗೇಕರ ಮಾತನಾಡಿ, ಭಾವಿಕೇರಿ ಪಂಚಾಯಿತಿ ವ್ಯಾಪ್ತಿಯ ಕೇಣಿಯಲ್ಲಿ ಜೆಎಸ್‌ಡಬ್ಲ್ಯು ಕಂಪನಿಯಿಂದ ನಿರ್ಮಾಣವಾಗುವ ಈ ಬಂದರು ನಿರ್ಮಾಣ ಮಾಡುವುದರಿಂದ ಸುತ್ತಮುತ್ತಲಿನ ಗ್ರಾಮಗಳಿಗೂ ತೊಂದರೆಯಾಗುತ್ತಿದ್ದು, ಈ ಯೋಜನೆಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರ ಕೈಬಿಡಬೇಕೆಂದು ಎಂದು ಒತ್ತಾಯಿಸಿದರು.ಭಾವಿಕೇರಿ ಪಂಚಾಯಿತಿ ಸದಸ್ಯ ಉದಯ ನಾಯಕ, ಮೀನುಗಾರ ಮುಖಂಡ ಸಂಜು ಬಲೆಗಾರ್, ಭಾವಿಕೇರಿ ಗ್ರಾಪಂ ಅಧ್ಯಕ್ಷೆ ದೀಪಾ ನಾಯಕ ಮಾತನಾಡಿದರು. ಹೋರಾಟದಲ್ಲಿ ಮೀನುಗಾರ ಮುಖಂಡರು, ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.