ಕೇಣಿ ಬೃಹತ್ ಬಂದರು ನಿರ್ಮಾಣಕ್ಕೆ ಮೀನುಗಾರರ ವಿರೋಧ

| Published : Nov 28 2024, 12:31 AM IST

ಸಾರಾಂಶ

ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಯಾವ ಮಾಹಿತಿಯನ್ನೂ ಪ್ರಕಟಿಸದೆ ಏಕಾಏಕಿ ಜಿಪಿಎಸ್ ಸರ್ವೆ ಮುಂತಾದ ಕೆಲಸಗಳನ್ನು ಪ್ರಾರಂಭಿಸಿದೆ ಎಂದು ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದರು.

ಅಂಕೋಲಾ: ಇಲ್ಲಿನ ಕೇಣಿಯಲ್ಲಿ ಉದ್ದೇಶಿತ ಬಹುಕೋಟಿ ವೆಚ್ಚದ ಬೃಹತ್ ಬಂದರು ಕಾಮಗಾರಿಗೆ ಸ್ಥಳೀಯ ಮೀನುಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಂಗಳವಾರ ಸಂಜೆ ಕೇಣಿ ಕಡಲತೀರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮೀನುಗಾರರು ಕೇಣಿಯಲ್ಲಿ ವಾಣಿಜ್ಯ ಬಂದರು ಬೇಡವೇ ಬೇಡ ಎಂದು ಒಕ್ಕೊರಲಿನಿದ ಧಿಕ್ಕಾರ ಕೂಗಿ ಯೋಜನೆಯನ್ನು ವಿರೋಧಿಸಿ, ಸರ್ಕಾರ ಮತ್ತು ಜೆಎಸ್‌ಡಬ್ಲ್ಯು ಕಂಪನಿಯ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಮಹಾಜನ ಸಂಘದ ಅಧ್ಯಕ್ಷ ಹೂವಾ ಖಂಡೇಕರ ಮಾತನಾಡಿ, ತಲೆತಲಾಂತರದಿಂದ ಕೇಣಿಯಲ್ಲಿ ಮೀನುಗಾರಿಕೆಯನ್ನೇ ಮಾಡಿಕೊಂಡು ಬದುಕು ಕಟ್ಟಿಕೊಂಡ ಕುಟುಂಬಗಳು ವಾಣಿಜ್ಯ ಬಂದರು ನಿರ್ಮಾಣದಿಂದ ಬೀದಿಪಾಲಾಗಲಿದೆ. ಇಲ್ಲಿನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಯಾವ ಮಾಹಿತಿಯನ್ನೂ ಪ್ರಕಟಿಸದೆ ಏಕಾಏಕಿ ಜಿಪಿಎಸ್ ಸರ್ವೆ ಮುಂತಾದ ಕೆಲಸಗಳನ್ನು ಪ್ರಾರಂಭಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾವಿಕೇರಿ ಗ್ರಾಪಂ ಮಾಜಿ ಉಪಾಧ್ಯಕ್ಷ ಚಂದ್ರಕಾಂತ ಹರಿಕಂತ್ರ ಮಾತನಾಡಿ, ಸರ್ಕಾರ ಬೇಕಿದ್ದರೆ ಕೇಣಿಯಲ್ಲಿ ಮೀನುಗಾರಿಕಾ ಬಂದರನ್ನು ಅಭಿವೃದ್ಧಿ ಪಡಿಸಲಿ ಆದರೆ ವಾಣಿಜ್ಯ ಬಂದರು ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ ಎಂದರು. ಪ್ರಮುಖರಾದ ಸಂಜೀವ ಬಲೆಗಾರ ಮಾತನಾಡಿ, ಕಾರವಾರ, ಅಂಕೋಲಾ ಭಾಗದ ಮೀನುಗಾರರು ಈಗಾಗಲೇ ಹಲವು ಬೃಹತ್ ಯೋಜನೆಗಳಿಗಾಗಿ ಇದ್ದ ಅಲ್ಪಸ್ವಲ್ಪ ಜಮೀನು ಹಾಗೂ ಮೀನುಗಾರಿಕಾ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಈಗ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಮುಂದಾದರೆ ಮೀನುಗಾರಿಕೆ ಉದ್ಯೋಗವೇ ಸರ್ವನಾಶವಾಗಿ ಮೀನುಗಾರ ಸಮಾಜದವರು ಬೀದಿಪಾಲಾಗಲಿದ್ದಾರೆ. ಸರ್ಕಾರ ಮತ್ತು ಗುತ್ತಿಗೆದಾರ ಕಂಪನಿಗಳು ಗುಟ್ಟಾಗಿ ಕಾಮಗಾರಿಯನ್ನು ಪ್ರಾರಂಭಿಸುವ ಸೂಚನೆಗಳು ಕಂಡುಬರುತ್ತಿವೆ. ಯಾವುದೇ ಕಾರಣಕ್ಕೂ ಇಲ್ಲಿ ವಾಣಿಜ್ಯ ಬಂದರು ಬೇಡವೇ ಬೇಡ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆಯಲಿದೆ ಎಂದರು. ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶ್ರೀಕಾಂತ ದುರ್ಗೇಕರ ಪ್ರಾಸ್ತಾವಿಕವಾಗಿ ಮಾತನಾಡಿ, ಬಂದರು ನಿರ್ಮಾಣದಿಂದ ಮೀನುಗಾರರಿಗೆ ಮತ್ತು ಮೀನುಗಾರ ಸಮಾಜದವರಿಗೆ ಆಗುವ ತೊಂದರೆಗಳನ್ನು ತಿಳಿಸಿದರು. ಜೆಎಸ್‌ಡಬ್ಲ್ಯು ಗುತ್ತಿಗೆದಾರ ಕಂಪನಿಯವರು ತಯಾರಿಸಿದ ಬಂದರಿನ ನೀಲನಕ್ಷೆಯನ್ನು ತೋರಿಸಿ ಬಂದರು ಕಾಮಗಾರಿ ಎಲ್ಲಿಯವರೆಗೆ ವಿಸ್ತರಿಸಲಿದೆ ಎನ್ನುವುದನ್ನು ವಿವರಿಸಿದರು. ಸರ್ಕಾರ ಕೂಡಲೇ ಮೀನುಗಾರರ ಬೇಡಿಕೆಗೆ ಸ್ಪಂದಿಸಿ ಯೋಜನೆಯನ್ನು ಕೈಬಿಡಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಭಾವಿಕೇರಿ ಗ್ರಾಪಂ ಮಾಜಿ ಅಧ್ಯಕ್ಷೆ ಸರಿತಾ ಬಲೆಗಾರ, ಹಾಲಿ ಸದಸ್ಯ ಜ್ಞಾನೇಶ್ವರ ಹರಿಕಂತ್ರ, ಮಾಜಿ ಸದಸ್ಯ ಸೂರಜ ಹರಿಕಂತ್ರ, ಮಾಜಿ ಸದಸ್ಯೆ ರಾಜೇಶ್ವರಿ ಕೇಣಿಕರ, ನಾಗರತ್ನ ಹರಿಕಂತ್ರ, ಶಂಕರ ಬಲೆಗಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.