ಸಾರಾಂಶ
ಕಾರವಾರ: ಜಿಲ್ಲೆಯ ವಿವಿಧೆಡೆ ಶನಿವಾರ ಭಾರಿ ಮಳೆಯಾಗಿದೆ. 10- 12 ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸುತ್ತಿದೆ.
ಕರಾವಳಿ ತಾಲೂಕುಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ ಹಾಗೂ ಕಾರವಾರಗಳಲ್ಲಿ ಬೆಳಗ್ಗೆ ಭಾರಿ ಮಳೆಯಾಯಿತು. ಸಂಜೆಯಾಗುತ್ತಿದ್ದಂತೆ ಮಳೆಯ ಪ್ರಮಾಣ ಇಳಿಮುಖವಾಗಿದೆ.
ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ಹಾಗೂ ಜೋಯಿಡಾ ತಾಲೂಕುಗಳಲ್ಲಿ ಗುರುವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ದಾಂಡೇಲಿ ಹಾಗೂ ಹಳಿಯಾಳಗಳಲ್ಲೂ ಆಗಾಗ ಮಳೆ ಬೀಳುತ್ತಿದೆ.
ಮುಂಗಾರು ಆರಂಭವಾಗುತ್ತಿದ್ದಂತೆ ತಿಂಗಳ ಕಾಲ ಬಿಟ್ಟೂ ಬಿಡದೆ ಮಳೆ ಸುರಿದು ಭಾರಿ ಅನಾಹುತ ಉಂಟಾಗಿತ್ತು. ಶಿರೂರಿನಲ್ಲಿ ಗುಡ್ಡ ಕುಸಿತದಿಂದ 11 ಜನರು ಮೃತಪಟ್ಟರು. ಅವರಲ್ಲಿ 8 ಜನರ ಮೃತದೇಹ ಮಾತ್ರ ಪತ್ತೆಯಾಗಿದೆ. ಪ್ರವಾಹದಿಂದ ಸಾವಿರಾರು ಜನರು ಮನೆಗಳನ್ನು ಬಿಟ್ಟು ಕಾಳಜಿ ಕೇಂದ್ರದಲ್ಲಿ ವಾಸ್ತವ್ಯ ಮಾಡುವಂತಾಗಿತ್ತು. ನೂರಾರು ಮನೆಗಳು ಕುಸಿದವು. ಇಡೀ ಜಿಲ್ಲೆ ತಲ್ಲಣಗೊಂಡಿತ್ತು. ಆದಾದ ನಂತರ 10- 12 ದಿನಗಳಿಂದ ಮಳೆ ಬಿಡುವು ನೀಡಿತ್ತು. ಬಿಸಿಲೂ ಕಾಣಿಸಿಕೊಂಡು ಜನತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಪ್ರವಾಹದಿಂದ ಸಂತ್ರಸ್ತರಾದವರು ಬದುಕು ಕಟ್ಟಿಕೊಳ್ಳುತ್ತಿರುವಾಗಲೆ ಮತ್ತೆ ಮಳೆ ಅಬ್ಬರಿಸುತ್ತಿದೆ.
ಭಾರಿ ಮಳೆ, ಸಮುದ್ರದಲ್ಲಿ ಎತ್ತರದ ಅಲೆಗಳು ಏಳುತ್ತಿರುವುದರಿಂದ ಮೀನುಗಾರಿಕೆಯನ್ನು ಸ್ಥಗಿತಗೊಳಿಸಿ ಮೀನುಗಾರರು ತಮ್ಮ ಬೋಟುಗಳೊಂದಿಗೆ ಬಂದರುಗಳಿಗೆ ಆಗಮಿಸಿದ್ದಾರೆ. ಕಾರವಾರದಿಂದ ಭಟ್ಕಳ ತನಕದ ಮೀನುಗಾರಿಕೆ ಬಂದರುಗಳಲ್ಲಿ ಸ್ಥಳೀಯ ಬೋಟುಗಳಷ್ಟೇ ಅಲ್ಲ, ತಮಿಳುನಾಡು, ಕೇರಳ, ಗೋವಾದ ಬೋಟುಗಳೂ ಕೂಡ ಲಂಗರು ಹಾಕಿವೆ. ಎರಡು ದಿನಗಳಿಂದ ಯಾಂತ್ರೀಕೃತ ಮೀನುಗಾರಿಕೆ ಸಂಪೂರ್ಣ ಸ್ಥಗಿತಗೊಂಡಿದೆ.
ಶಿರೂರು ಗುಡ್ಡ ಕುಸಿತ ದುರಂತದಿಂದ ಕಣ್ಮರೆಯಾದ 11 ಜನರಲ್ಲಿ 8 ಜನರ ಮೃತದೇಹಗಳು ದೊರಕಿವೆ. ನಾಪತ್ತೆಯಾಗಿರುವ ಜಗನ್ನಾಥ ನಾಯ್ಕ, ಲೋಕೇಶ ನಾಯ್ಕ ಹಾಗೂ ಕೇರಳದ ಲಾರಿ ಚಾಲಕ ಅರ್ಜುನ್ ಶವಕ್ಕಾಗಿ ಎರಡು ಬಾರಿ ಕೈಗೊಂಡ ಕಾರ್ಯಾಚರಣೆಯನ್ನು ಮಳೆ, ಪ್ರತಿಕೂಲ ಪರಿಸ್ಥಿತಿಯಿಂದಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಗೋವಾದಿಂದ ಡ್ರೆಜಿಂಗ್ ಮಶಿನ್ ತಂದು ಕಾರ್ಯಾಚರಣೆ ಆರಂಭಿಸಲು ಯೋಜಿಸಲಾಗಿದೆ. ಆದರೆ ಮಳೆ ಮುಂದುವರಿದರೆ ಶೋಧ ಕಾರ್ಯದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.
ಬರ್ಗಿಯಲ್ಲಿ ಬಿರುಕು ಬಿಟ್ಟ ಗುಡ್ಡಗೋಕರ್ಣ: ಬರ್ಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುರಿಗದ್ದೆಯ ಜನವಸತಿ ಪ್ರದೇಶದ ಸಮೀಪದ ಗುಡ್ಡದಲ್ಲಿ ಭಾರಿ ಪ್ರಮಾಣದ ಬಿರುಕು ಕಾಣಿಸಿಕೊಂಡಿದ್ದು, ನಿವಾಸಿಗಳು ಆತಂಕಗೊಂಡಿದ್ದಾರೆ.ಗ್ರಾಮದ ಕೃಷ್ಣಪ್ಪ ರಾಮಯ್ಯ ಪಟಗಾರ ಎಂಬವರ ಮನೆ ಸಮೀಪದಲ್ಲಿರುವ ಅರಣ್ಯ ಪ್ರದೇಶದಲ್ಲಿ ಸುಮಾರು ಅರ್ಧ ಕಿಮೀ ಜಾಗದಲ್ಲಿ ಭಾರೀ ಪ್ರಮಾಣದಲ್ಲಿ ಭೂಮಿ ಬಾಯಿ ತೆರೆದುಕೊಂಡಿದೆ. ಗುಡ್ಡದಲ್ಲಿ ಬಿರುಕು ಭಯಾನಕವಾಗಿದ್ದು, ಯಾವುದೇ ಕ್ಷಣದಲ್ಲಾದ್ದರೂ ಗುಡ್ಡ ಕುಸಿಯುವ ಸಾಧ್ಯತೆ ಹೆಚ್ಚಾಗಿದೆ. ಶುಕ್ರವಾರ ರಾತ್ರಿಯಿಂದ ಮಳೆ ಜೋರಾಗಿದ್ದು, ಶನಿವಾರ ಅಬ್ಬರ ಮುಂದುವರಿದಿದೆ. ಇದೇ ಮಳೆ ಮುಂದುವರಿದರೆ ಅನಾಹುತ ಸಂಭವಿಸುವ ಭೀತಿ ಉಂಟಾಗಿದೆ.
ಅಧಿಕಾರಿಗಳ ಭೇಟಿ: ಗುಡ್ಡ ಬಿರುಕು ಬಿಟ್ಟಿರುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗುಡ್ಡ ಕುಸಿಯುವ ಆತಂಕ ಇರುವ ಕಾರಣ ಇಲ್ಲಿನ ನಿವಾಸಿಗಳಿಗೆ ವಾಸ್ತವ್ಯ ಮಾಡದಂತೆ ಸೂಚನೆ ನೀಡಿದ್ದಾರೆ. ಗೋಕರ್ಣ ಪೊಲೀಸರು ಸಹ ಭೇಟಿ ನೀಡಿ ಜನರಿಗೆ ತಿಳಿವಳಿಕೆ ನೀಡಿದ್ದಾರೆ.