ಸಾರಾಂಶ
ಕನ್ನಡಪ್ರಭ ವಾರ್ತೆ ಹರಪನಹಳ್ಳಿ
ಮೀನುಗಾರಿಕೆ ಅತ್ಯಂತ ಸುಲಭದಾಯಕ ಕೃಷಿ ಕ್ಷೇತ್ರ ಎಂದು ಮೀನುಗಾರಿಕೆ ಇಲಾಖೆಯ ವಿಜಯನಗರ ಜಿಲ್ಲಾ ಉಪನಿರ್ದೇಶಕ ಬಿ.ಮಲ್ಲೇಶ್ ತಿಳಿಸಿದರು.ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಮೀನುಗಾರಿಕಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೆಲ ದಶಕಗಳ ಹಿಂದೆ ಮೀನುಗಾರಿಕಾ ಕ್ಷೇತ್ರವು ಮಂದಗತಿಯಲ್ಲಿ ಸಾಗುತ್ತಿತ್ತು. ಕಾಲಾನಂತರದಲ್ಲಿ ಹಿರಾನಂದ ಚೌದರಿ ಹಾಗೂ ಹನಿಕುನಿ ಎನ್ನುವ ವಿಜ್ಞಾನಿಗಳ ಪರಿಶ್ರಮದಿಂದ ಮೀನುಗಾರಿಕಾ ಕ್ಷೇತ್ರವು ಸಾಕಷ್ಟು ಅಭಿವೃದ್ಧಿ ಹೊಂದಿದೆ ಎಂದರು.ಮಾಲವಿ ಮೀನು ಪಾಲನ ಕೇಂದ್ರದ ಉಪನಿರ್ದೇಶಕ ರಿಜ್ವಾನ್ ಅಹ್ಮದ್ ಮಾತನಾಡಿ, ಮೀನಿನಲ್ಲಿ ಸಾಕಷ್ಟು ಔಷಧಿಯ ಗುಣಗಳು ಇದ್ದು ಮಾನವನ ದೇಹದ ಪ್ರಮುಖ ಅಂಗಾಗಳ ಬೆಳವಣಿಗೆ ಮತ್ತು ಪಿಟ್ಯುಟರಿ ಗ್ರಂಥಿ ಬಲವರ್ಧನೆಗೆ ಉಪಯುಕ್ತವಾಗಿದೆ ಎಂದು ಹೇಳಿದರು.
ಜಾಗತಿಕವಾಗಿ ಮೀನುಗಾರಿಕಾ ಕ್ಷೇತ್ರದಲ್ಲಿ ದೇಶವು ಅತ್ಯಂತ ಪ್ರಬಲವಾಗಿದೆ. ಜಗತ್ತಿನಲ್ಲಿ ಎರಡನೇ ಅತಿ ದೊಡ್ಡ ಉತ್ಪಾದನಾ ಶಕ್ತಿಯಾಗಿದೆ.ದೇಶದಲ್ಲಿ ೨.೮ ಕೋಟಿ ಜನ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿದ್ದಾರೆ ಎಂದರು.ದೇಶದ ಆರ್ಥಿಕತೆಯಲ್ಲಿ ಶೇ. ೮ರಷ್ಟು ಮೀನುಗಾರಿಕಾ ಕ್ಷೇತ್ರದಿಂದ ಆದಾಯ ಬರುತ್ತಿದೆ. ಮೀನುಗಾರರು ತಮ್ಮ ವೃತ್ತಿಯ ಜೊತೆಗೆ ಮಕ್ಕಳ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ನೀಡಿದರೆ ಆರ್ಥಿಕ, ಸಾಮಾಜಿಕ, ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಕೂಡ್ಲಿಗಿ ಮೀನುಗಾರಿಕಾ ಸಹಾಯಕ ನಿರ್ದೇಶಕ ರಜನೀಶ್ ದೇಸಾಯಿ ಮಾತನಾಡಿ, ಬೆಳೆಯಲು ಯೋಗ್ಯವಲ್ಲದ ತಮ್ಮ ಜಮೀನುಗಳಲ್ಲಿ ಮೀನುಗಾರಿಕೆ ಕೃಷಿ ಪ್ರಾರಂಭಿಸಿ ರೈತರು ಸಾಕಷ್ಟು ಆದಾಯ ಗಳಿಕೆ ಮಾಡಿಕೊಳ್ಳಬಹುದಾಗಿದೆ. ೧ ಎಕರೆ ಜಮೀನಿನಲ್ಲಿ ಸರ್ಕಾರದಿಂದ ಸೌಲಭ್ಯ ಪಡೆದು ೫ ಸಾವಿರದಿಂದ ೮ ಸಾವಿರದವರೆಗೆ ಮೀನು ಮರಿಗಳನ್ನು ಸಂರಕ್ಷಣೆ ಮಾಡುಬಹುದು ಎಂದರು.ಸಸ್ಯಹಾರಿ ಪದಾರ್ಥಗಳ ಬೆಳೆಗಳ ಜೊತೆಗೆ ಇದನ್ನು ಪ್ರಾರಂಭಿಸಿದರೆ ಆರ್ಥಿಕವಾಗಿ ಸಬಲರಾಗಲು ಸಾಧ್ಯ. ಜಲ ವಿಸ್ತ್ರೀರ್ಣಕ್ಕೆ ಅನುಗುಣವಾಗಿ ಮೀನು ಮರಿ ಬಿಡಬೇಕು, ಅವೈಜ್ಞಾನಿಕವಾಗಿ ಮೀನುಗಳನ್ನು ಹೆಚ್ಚಾಗಿ ಬಿಟ್ಟರೆ ಆದಾಯ ಪಡೆಯಲು ಸಾಧ್ಯವಿಲ್ಲವೆಂದರು.
ಮೀನುಗಾರಿಕಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಗಂಗಮ್ಮ ಪವಾಡಿ, ನಾಗೇಂದ್ರಪ್ಪ, ಪರುಸಪ್ಪ, ಕೊಟ್ರಪ್ಪ, ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.ನಿರ್ದೇಶಕರಾದ ಶಾಂತಕುಮಾರ್, ಮಂಜುನಾಥ, ಮಲ್ಯಾನಾಯ್ಕ, ಮೋರಿಗೆರೆ ಹೇಮಣ್ಣ, ಖಾಜಾ ಹುಸೇನ್, ನೀಲಪ್ಪ, ನಾಗೇಂದ್ರಪ್ಪ, ಮೀನುಗಾರ ಸಹಕಾರ ಸಂಘದ ಪದಾಧಿಕಾರಿಗಳಾದ ಎನ್ ರವಿ, ಆನಂದ, ದ್ಯಾಮಜ್ಜಿ ಹನುಮಂತ, ತಿಮ್ಮಣ್ಣ, ತಿಪ್ಪನಹಳ್ಳಿ ಮಂಜುನಾಥ, ಸಿದ್ದೇಶ್ ಬಿ., ಅಂಬಿ ರಾಜಪ್ಪ, ಅಂಜಿನಪ್ಪ, ಭೀಮಪ್ಪ, ಕುಲುಮಿ ವೀರಣ್ಣ, ಹಿರೇಮೇಗಳಗೇರಿ ನಾಗರಾಜ, ಹುಲಿಕಟ್ಟಿ ಸಾತಲಿಂಗಪ್ಪ, ಶಿಗ್ರಿಹಳ್ಳಿ ಗುಡ್ಡಪ್ಪ, ಕಂಚಿಕೆರೆ ಅಂಜಿನಪ್ಪ ಸೇರಿದಂತೆ ಇತರರಿದ್ದರು.