ಗದಗ: ವಿದ್ಯಾರ್ಥಿಗಳ ಹೆಸರಿನಲ್ಲಿ ಖಾತೆ ತೆರೆದು, ಕಮಿಷನ್‌ ಆಸೆಗಾಗಿ ಬ್ಯಾಂಕ್‌ ಖಾತೆ ವಿವರಗಳನ್ನು ಸೈಬರ್‌ ಕ್ರೈಂ ವಂಚಕರಿಗೆ ಮಾರಲು ಯತ್ನಿಸಿದ್ದ ಐವರು ಆರೋಪಿಗಳನ್ನು ಗದಗ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದು, ಅವರಿಂದ ಮೊಬೈಲ್‌ ಫೋನ್‌ ಮತ್ತು ಬ್ಯಾಂಕ್‌ ಪಾಸ್‌ಬುಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಇದೊಂದು ಕ್ಲಿಷ್ಟಕರ ಮತ್ತು ಅಪರೂಪದ ಪ್ರಕರಣವಾಗಿದ್ದು, ಇದನ್ನು ಬೇಧಿಸುವಲ್ಲಿ ಗದಗ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ದಸರಹಳ್ಳಿ ತಾಂಡಾದ ವಕದೋತ್‌ ವಕೀಲ್‌, ರಾಜಾ ರೆಖೆನಾಯಕ್‌, ಗೋವಾದ ಜೀಶಾನ್‌ ಅನ್ಸಾರಿ, ಆಕಾಶ್‌ ಹಾಗೂ ಛತ್ತೀಸ್‌ಗಡದ ಸಾಹಿಲ್‌ ಬಂಧಿತ ಆರೋಪಿಗಳಾಗಿದ್ದಾರೆ.

ವಕದೋತ್‌ ಮತ್ತು ರಾಜಾ ರೆಖೆನಾಯಕ್‌ ಅವರು ಗದಗ ನಗರದ ಮೆಟ್ರಿಕ್‌ ನಂತರ ವೃತ್ತಿಪರ ಬಾಲಕರ ವಸತಿನಿಲಯದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಕೊಡಿಸುವ ಸುಳ್ಳು ಭರವಸೆ ನೀಡಿ ಅವರ ಹೆಸರಿನಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ಖಾತೆ ತೆರೆಸಿದ್ದರು.

ಖಾತೆ ತೆರೆಯಲು ಆರಂಭಿಕ ಠೇವಣಿ ₹2 ಸಾವಿರ ಹಣವನ್ನು ಆರೋಪಿಗಳೇ ನೀಡಿದ್ದರು. ನಂತರ, ಅವರಿಂದ ಬ್ಯಾಂಕ್‌ ಪಾಸ್‌ಬುಕ್‌, ಎಟಿಎಂ ಕಾರ್ಡ್‌, ಇಂಟರ್ನೆಟ್‌ ಬ್ಯಾಂಕಿಂಗ್‌ ವಿವರ ಹಾಗೂ ಖಾತೆಗೆ ಲಿಂಕ್‌ ಇದ್ದ ಮೊಬೈಲ್‌ ಸಿಮ್‌ ಕಾರ್ಡ್‌ ಪಡೆದುಕೊಂಡಿದ್ದರು. ಈ ವಂಚನೆ ಕುರಿತು ಮಾ. 11ರಂದು ಪ್ರಕರಣ ದಾಖಲಾಗಿತ್ತು.

ಆರೋಪಿಗಳು ಬ್ಯಾಂಕ್‌ ಖಾತೆ ವಿವರಗಳನ್ನು ಸೈಬರ್‌ ವಂಚಕರಿಗೆ ಹಸ್ತಾಂತರ ಮಾಡಲು ಗೋವಾಕ್ಕೆ ಹೋಗುತ್ತಿದ್ದಾಗ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ ಗೋವಾದಲ್ಲಿದ್ದ ವಂಚಕರ ಮಾಹಿತಿ ಸಿಕ್ಕಿದ್ದು, ಅವರನ್ನೂ ಬಂಧಿಸಿ ಕರೆತಂದಿದ್ದಾರೆ.


ಆರೋಪಿಗಳಿಂದ 11 ಮೊಬೈಲ್‌ ಫೋನ್‌, ಹಾವೇರಿ ಜಿಲ್ಲೆಯಲ್ಲಿ ತೆರೆಯಲಾದ ಖಾತೆಗಳ ಮೂರು ಬ್ಯಾಂಕ್‌ ಕಿಟ್‌, ಗದಗ ಜಿಲ್ಲೆಯಲ್ಲಿ ತೆರೆಯಲಾದ ಐದು ಬ್ಯಾಂಕ್‌ ಕಿಟ್‌ ಪತ್ತೆಯಾಗಿವೆ. ಹಲವು ಕಡೆ ಬ್ಯಾಂಕ್‌ ಖಾತೆಗಳನ್ನು ತೆರೆದಿರುವುದು ಗೊತ್ತಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಮೂವರು ಪ್ರಮುಖ ಆರೋಪಿಗಳಿದ್ದು, ಅವರ ಬಂಧನಕ್ಕೂ ಜಾಲ ಬೀಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.