ಸಾರಾಂಶ
ಹುಬ್ಬಳ್ಳಿ:
ಆರ್‌ಟಿಐ ಕಾರ್ಯಕರ್ತನ ಹೆಸರಲ್ಲಿ ನಗರದ ಕೋ ಆಪರೇಟಿವ್ ಸೊಸೈಟಿಯ ಮ್ಯಾನೇಜರ್‌ಗೆ ಬ್ಲಾಕ್‌ಮೇಲ್ ಮಾಡಿ ₹1.5 ಕೋಟಿ ಬೇಡಿಕೆ ಇಟ್ಟಿದ್ದ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಗದಗ-ಬೆಟಗೇರಿ ಮೂಲದ ಮಂಜುನಾಥ ಹದ್ದಣ್ಣವರ, ಮುಂಡಗೋಡದ ವೀರೇಶ ಲಿಂಗದಾಳ, ಮಹಾದೇಶ್ವರ ಲಿಂಗದಾಳ, ಮಹಾಬಲೇಶ್ವರ ಮಂಕಾಳ ಶಿರೂರಕರ್, ಶಿವಪ್ಪ ಬೊಮ್ಮನಳ್ಳಿ ಎಂಬುವರನ್ನು ಬಂಧಿಸಲಾಗಿದೆ. ನ. 5ರಂದು ಇಲ್ಲಿಯ ಹೊಸ ಬಸ್ ನಿಲ್ದಾಣದ ಬಳಿ ಮಂಜುನಾಥನನ್ನು ಬಂಧಿಸಲಾಗಿದ್ದು, ಉಳಿದ ನಾಲ್ವರನ್ನು ಹಣ ಪಡೆಯುತ್ತಿದ್ದ ವೇಳೆ ಬಂಧಿಸಿ ₹1.70 ಲಕ್ಷ ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ನಾಲ್ವರು ಇದ್ದು, ಅವರ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ತಿಳಿಸಿದರು.
ಏನಿದು ಘಟನೆ?:ನಗರದ ಗೋಕುಲ ರಸ್ತೆಯ ಕೋ ಆಪರೇಟಿವ್ ಸೊಸೈಟಿ ವಿರುದ್ಧ ಆರೋಪಿ ಮಂಜುನಾಥ ಹದ್ದಣ್ಣವರ ಇಲ್ಲಸಲ್ಲದ ಆರೋಪ ಮಾಡಿದ್ದರು. ಅಲ್ಲದೇ, ಸೊಸೈಟಿಯಲ್ಲಿ ನಡೆದ ಅಕ್ರಮಗಳ ಬಗ್ಗೆ ದಾಖಲೆಗಳಿವೆ. ಅವುಗಳನ್ನು ಬಯಲಿಗೆ ತಂದರೆ, ಸೊಸೈಟಿ ಮುಚ್ಚಿ ಹೋಗುತ್ತದೆ ಎಂದು ಬೆದರಿಕೆ ಹಾಕಿದ್ದನು. ಎಂಎಲ್ಎ, ದಲಿತ ಸಂಘಟನೆಗಳ ಬೆಂಬಲವಿದ್ದು, ಸೊಸೈಟಿ ವಿರುದ್ಧ ಹೋರಾಟ ನಡೆಸಿ ಸೊಸೈಟಿಯನ್ನು ರಾಜ್ಯದಿಂದ ಕಿತ್ತು ಎಸೆಯುತ್ತೇನೆ ಎಂದು ಹೆದರಿಸಿದ್ದನು. ನಂತರ ₹1.5 ಕೋಟಿ ನೀಡಬೇಕು, ಇಲ್ಲದಿದ್ದರೆ ಸೊಸೈಟಿ ಬೀದಿಗೆ ತರುತ್ತೇನೆ ಎಂದು ಸೊಸೈಟಿಯ ಮ್ಯಾನೇಜರ್ ಮಂಜುನಾಥ ಸೊನ್ನದ ಅವರಿಗೆ ಬ್ಲಾಕ್‌ಮೇಲ್ ಮಾಡುತ್ತಿದ್ದನು. ಈ ಬಗ್ಗೆ ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಸೊಸೈಟಿ ಸೇಲ್ಸ್ ಹೆಡ್ ಭರಣೀಧರ್ ಪಿ.ಕೆ. ಪ್ರಕರಣ ದಾಖಲಿಸಿದ್ದರು.
ಸುದ್ದಿಗೋಷ್ಠಿಯಲ್ಲಿ ಎಸಿಪಿ ಶಿವಪ್ರಕಾಶ ನಾಯ್ಕ, ಪಿಐಗಳಾದ ಜಾಕ್ಸನ್ ಡಿಸೋಜಾ, ಪ್ರವೀಣ ನೀಲಮ್ಮನವರ ಸೇರಿದಂತೆ ಹಲವರಿದ್ದರು.;Resize=(128,128))
;Resize=(128,128))
;Resize=(128,128))