ಸಾರಾಂಶ
- ಮಳೆಗಾಲ ಮುಗಿದ ಬಳಿಕ ಕಾಮಗಾರಿ ಆರಂಭ, ಅಯ್ಯನಕೆರೆಯಲ್ಲಿ ಬಾಗಿನ ಅರ್ಪಣೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪ್ರವಾಸೋದ್ಯಮದ ಅಭಿವೃದ್ಧಿ ದೃಷ್ಟಿಯಿಂದ ಅಯ್ಯನಕೆರೆಯಲ್ಲಿ ತೂಬು ಮತ್ತು ಕೆರೆ ದುರಸ್ತಿಗೆ ಐದು ಕೋಟಿ ಹಣ ಒದಗಿಸಲಾಗಿದ್ದು, ಮಳೆಗಾಲ ಮುಗಿದ ಕೂಡಲೇ ಏರಿಯ ಸೌಂದರ್ಯ ವರ್ಧಿಸಿ ಪ್ರವಾಸಿಗರನ್ನು ಹೆಚ್ಚು ಆಕರ್ಷಣೀಯ ಗೊಳಿಸಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು. ಸಖರಾಯಪಟ್ಟಣ ಸಮೀಪವಿರುವ ಅಯ್ಯನಕೆರೆಗೆ ಬುಧವಾರ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಈ ಕೆರೆ ಸುಮಾರು ಐದು ಸಾವಿರಕ್ಕೂ ಹೆಚ್ಚು ಹೆಕ್ಟೇರ್‌ಗಳಷ್ಟು ಅಚ್ಚುಕಟ್ಟುದಾರರಿದ್ದಾರೆ. ಅದರ ಜೊತೆ ಅಧಿಕೃತವಾಗಿ ಇನ್ನೂ ಐದು ಸಾವಿರ ಅಚ್ಚುಕಟ್ಟುದಾರರಿದ್ದಾರೆ. ಈ ಕೆರೆಯನ್ನು ಇಲಾಖೆಯಿಂದ ಸ್ವಚ್ಛಗೊಳಿಸಿ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾ ಗುವುದು ಎಂದು ಹೇಳಿದರು.
ಇಲ್ಲಿ ಬಲ್ಲಾಳೇಶ್ವರ ದೇವಸ್ಥಾನವಿದ್ದು ದೇವರ ಅನುಗ್ರಹ ಹಾಗೂ ಎಲ್ಲ ಯತಿವರ್ಯರ ಆಶೀರ್ವಾದಿಂದ ಎಲ್ಲಾ ಅಚ್ಚುಕಟ್ಟುದಾರರ ಸಹಕಾರದೊಂದಿಗೆ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಮಾತನಾಡಿ, ಪ್ರತೀ ವರ್ಷದಂತೆ ಈ ವರ್ಷವೂ ಗುರುಗಳು ಹಾಗೂ ಗ್ರಾಮಸ್ಥರು ಸೇರಿದಂತೆ ಸರ್ವರ ಸಮ್ಮುಖದಲ್ಲಿ ಇಂದು ಬಾಗಿನ ಅರ್ಪಣೆಯಾಗಿದೆ. ನಮ್ಮ ಹಿರಿಯರು ಅಂದು ಸ್ಥಾಪನೆ ಮಾಡಿರುವ ಕೆರೆಯಿದು. ಈ ಕೆರೆಗೆ ಪ್ರಕೃತಿಯೇ ಹೆಚ್ಚು ಸಹಾಯ ಮಾಡಿದೆ. ಇಂತಹ ನೈಸರ್ಗಿಕ ಕೆರೆ ಇದಾಗಿದೆ. ರೈತರು ಈ ಕೆರೆಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಈ ನೀರನ್ನು ಸರಿಯಾಗಿ ಬಳಕೆ ಮಾಡಿದರೆ ಐದು ಹದ ಮಾಡಬಹುದು. ಆದರೆ ಇದು ಎರಡೇ ಹದವಾಗಿದೆ. ಆದ್ದರಿಂದ ಇದು ನಮ್ಮ ಜೀವಾಳವಾದ ಈಕೆರೆಯನ್ನು ಮುಂದಿನ ದಿನಗಳಲ್ಲಿ ಅಚ್ಚುಕಟ್ಟುದಾರರು ಜಾಗರೂ ಕತೆಯಿಂದ ನೋಡಿಕೊಳ್ಳಬೇಕು ಎಂದರು.ನೀರಾವರಿ ಇಲಾಖೆಯವರು ಚಾನಲ್ ಹಾಗೂ ಕೆರೆಯನ್ನು ಪ್ರತಿ ತಿಂಗಳಿಗೊಮ್ಮೆ ಸ್ವಚ್ಛ ಮಾಡಬೇಕು. ಸುತ್ತಮುತ್ತಲ ಜನರಿಗೆ ಈ ಕೆರೆಯಿಂದ ಕುಡಿಯುವ ನೀರಿನ ಸೌಲಭ್ಯ ಒದಗಿಸಿದ್ದು, ನೀರಾವರಿಗೆ ಇದನ್ನು ಬಳಸಿಕೊಳ್ಳುವುದರಿಂದ ಈ ಕೆರೆಯನ್ನು ಅಭಿವೃದ್ಧಿಪಡಿಸುವಂತೆ ಶಾಸಕರನ್ನು ಕೋರಿದರು.ಬಸವ ತತ್ತ್ವ ಪೀಠದ ಪೀಠಾಧ್ಯಕ್ಷ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ನಿರ್ವಾಣ ಸ್ವಾಮಿಗಳ ಆಶೀರ್ವಾದದಿಂದ ನಿರ್ಮಾಣವಾಗಿರುವ ಅಯ್ಯನಕೆರೆ ಈ ಕೆರೆಕಟ್ಟೆ ಒಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಜೀವ ಪಣಕಿಟ್ಟು ಪವಾಡ ಸದೃಶರಾಗಿ ಬದುಕಿ ಈ ಕೆರೆ ಉಳಿಸಿರುವುದರಿಂದ ಈ ಭಾಗದ ಸುತ್ತಮುತ್ತಲಿನ ಎಲ್ಲಾ ಜನರ ಜೀವನಾಡಿ ಯಾಗಿದೆ. ಕೆರೆಯನ್ನು ಆಶೀರ್ವದಿಸಿದ ಕಾರಣಕ್ಕೆ ಇದಕ್ಕೆ ಅಯ್ಯನಕೆರೆ ಎಂಬ ಹೆಸರು ಬಂದಿದೆ ಎಂದರು. ಎಲ್ಲಿ ನೀರಿನ ಸೌಕರ್ಯ ಇದೆಯೋ ಅಲ್ಲಿ ವಿಶೇಷವಾಗಿ ನಾಗರಿಕತೆ ಬೆಳೆದಿವೆ. ಆ ಹಿನ್ನೆಲೆಯಲ್ಲಿ ಸಖರಾಯಪಟ್ಟಣ ಸುತ್ತ ಮುತ್ತ ಒಂದಿಷ್ಟು ಸಮೃದ್ಧಿಯಾಗಿರುವ ಜನರು ಇದ್ದಾರೆ ಎಂಬುದಕ್ಕೆ ಇಂತಹ ಅಯ್ಯನಕೆರೆಯೇ ಕಾರಣ. ಕೆರೆಯನ್ನು ಅವಲಂಬಿಸಿ ಸಾವಿರಾರು ಜೀವರಾಶಿ ವಾಸವಾಗಿರುವುದು ನಾವು ಗಮನಿಸಬಹುದು ಇದರಿಂದ ಜೀವ ವೈವಿಧ್ಯತೆ, ಪ್ರಾಕೃತಿಕ ಸಂಪನ್ಮೂಲ ಹೆಚ್ಚಳವಾಗಿರುವುದನ್ನು ನಾವು ಮರೆಯಬಾರದು. ಈ ನಿಟ್ಟಿನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೆರೆ ತುಂಬಿದ್ದು ನಾಲ್ಕೈದು ವರ್ಷಗಳಿಗೆ ಹೋಲಿಸಿದರೆ ಹದಿನೈದು ದಿನ ಮುಂಚಿತವಾಗಿಯೇ ಕೆರೆ ತುಂಬಿದೆ. ಈ ಭಾಗದ ಜನರಿಗೆ ಭವಿಷ್ಯದ ಭರವಸೆ ನೀಡಿರುವ ಇಂತಹ ಕೆರೆ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಎಂದು ಹೇಳಿದರು.ಈ ಸಂದರ್ಭದಲ್ಲಿ ಹುಲಿಕೆರೆ ಶ್ರೀ ವೀರಪ್ಪ ಲಿಂಗ ಸ್ವಾಮೀಜಿ, ಶ್ರೀ ಕಡೂರಿನ ಜ್ಞಾನಪ್ರಭ ಸಿದ್ಧರಾಮ ದೇಶೀಕೇಂದ್ರ ಸ್ವಾಮೀಜಿ, ಶ್ರೀ ಶಿವಯೋಗಿ ಶಂಕರ ಸ್ವಾಮೀಜಿ, ಗ್ರಾಪಂ ಅಧ್ಯಕ್ಷೆ ರಾಜಮ್ಮ, ಮಂಗಳ ಎಚ್.ಡಿ.ತಮ್ಮಯ್ಯ, ಮುಖಂಡರಾದ ಎಚ್.ಪಿ.ಮಂಜೇಗೌಡ, ಪ್ರವೀಣ್ ಹಾಜರಿದ್ದರು. 30 ಕೆಸಿಕೆಎಂ 3ಸಖರಾಯಪಟ್ಟಣ ಸಮೀಪದ ಅಯ್ಯನಕೆರೆಗೆ ಶಾಸಕ ಎಚ್.ಡಿ.ತಮ್ಮಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಬುಧವಾರ ಬಾಗಿನ ಅರ್ಪಿಸಿದರು.