ಸಾರಾಂಶ
- ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಪಂಚ ಗ್ಯಾರಂಟಿ ಯೋಜನೆಗಳು ತಾಲೂಕಿನ ಜನತೆಗೆ ನೆರವು ಒದಗಿಸುವ ಮೂಲಕ ಜೀವನ ಸುಧಾರಣೆಗೆ ಆರ್ಥಿಕ ವರದಾನವಾಗಿದೆ ಎಂದು ತಾಲೂಕು ಗ್ಯಾರಂಟಿ ಪ್ರಾಧಿಕಾರ ಅಧ್ಯಕ್ಷ ಎಂ.ಮಲ್ಲೇಶಸ್ವಾಮಿ ಹೇಳಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಜನತೆಯನ್ನು ಸದೃಢ ಗೊಳಿಸುವ ಸಲುವಾಗಿ ಗ್ಯಾರಂಟಿ ಯೋಜನೆಗಳು ಫಲಕಾರಿಯಾಗಿವೆ. ದೇಶದ ಭವಿಷ್ಯ ರೂಪಿಸುವ ಯುವಕರಿಗೆ ಉದ್ಯೋಗ ಲಭಿಸುವ ತನಕ ಯುವನಿಧಿ ಅನುಷ್ಠಾನಗೊಳಿಸಿ ನಿರುದ್ಯೋಗದಿಂದ ಬಳಲುವ ಯುವ ಸಮೂಹವನ್ನು ಕೈಹಿಡಿದಿರುವ ಕೀರ್ತಿ ರಾಜ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.ತಾಲೂಕಿನಲ್ಲಿ ಗೃಹಲಕ್ಷ್ಮಿ ಯೋಜನೆಯಡಿ 72 ಸಾವಿರ ಅರ್ಜಿದಾರರ ಪೈಕಿ 69744 ಕುಟುಂಬಗಳ ಯಜಮಾನಿಗಳಿಗೆ ಪ್ರತಿ ತಿಂಗಳು ₹13 ಕೋಟಿಯಂತೆ ಆರಂಭದಿಂದ ಡಿಸೆಂಬರ್ ಅಂತ್ಯದವರೆಗೆ ಒಟ್ಟು ₹98 ಕೋಟಿ ಹಣ ಖಾತೆಗೆ ಜಮಾಯಿಸ ಲಾಗಿದೆ ಎಂದು ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ತಾಲೂಕಿನ 81818 ಗ್ರಾಹಕರ ಸಂಖ್ಯೆಗೆ ಶೂನ್ಯ ಬಿಲ್‌ಗೊಳಿಸಿ, ಮೂರು ಲಕ್ಷ ಮಂದಿಗೆ ಬೆಳಕನ್ನು ನೀಡಿದ್ದು ಒಟ್ಟು ₹53 ಕೋಟಿ ಹಣವನ್ನು ಮೆಸ್ಕಾಂಗೆ ಪಾವತಿಸಿದೆ. ಶಕ್ತಿ ಯೋಜನೆಯಡಿ 1.66 ಕೋಟಿ ಮಹಿಳೆ ಯರು ಪ್ರಯಾಣಿಸಿದ್ದು ₹56 ಕೋಟಿ ಯನ್ನು ಸಾರಿಗೆ ಸಂಸ್ಥೆಗೆ ಸರ್ಕಾರ ಭರಿಸಿದೆ ಎಂದು ತಿಳಿಸಿದರು.ಅನ್ನಭಾಗ್ಯ ಯೋಜನೆಯಡಿ ಸುಮಾರು 75 ಸಾವಿರ ಪಡಿತರ ಚೀಟಿದಾರರಿಗೆ ಉಚಿತ ಅಕ್ಕಿ ವಿತರಿಸುವ ಜೊತೆಗೆ ₹35 ಕೋಟಿ ಹಣವನ್ನು ನೇರ ಖಾತೆಗೆ ಜಮಾವಣೆ ಮಾಡಲಾಗಿದೆ. ಯುವನಿಧಿ ಯೋಜನೆಯಲ್ಲಿ ಒಟ್ಟು 3772 ನಿರುದ್ಯೋಗಿ ಪದವಿ ಹಾಗೂ ಡಿಪ್ಲೋಮೋ ಪದವೀಧರರಿಗೆ ಒಂದು ಕೋಟಿ ಭತ್ಯೆ ನೀಡಲಾಗಿದೆ ಎಂದರು.
ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ರಾಜ್ಯ ಸರ್ಕಾರದ ಐದು ಗ್ಯಾ ರಂಟಿಗಳು ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಂಪೂರ್ಣ ಯಶಸ್ವಿಗೊಂಡಿದೆ. ಕೆಲವು ಸಣ್ಣಪುಟ್ಟ ತಡೆ ತಡೆಗಳು ಹೊರತಾಗಿ ಶೇ.99 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಹೇಳಿದರು.ಸ್ವಾವಲಂಬಿ ಜೀವನ ಕೈಗೊಳ್ಳುವ ಸಲುವಾಗಿ ಸರ್ಕಾರ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆ ನೀಡಿ ಸಹಕರಿಸುತ್ತಿದೆ. ಅಲ್ಲದೇ ಕುಟುಂಬದ ಅತ್ಯಂತ ಹೆಚ್ಚು ಜವಾಬ್ದಾರಿ ನಿಭಾಯಿಸುವ ಹೆಣ್ಣು ಎಲ್ಲಾ ರಂಗದಲ್ಲೂ ಛಾಪು ಮೂಡಿಸಿರುವ ಕಾರಣ ಪಂಚ ಗ್ಯಾರಂಟಿಗಳು ಮಹಿಳಾ ಸಬಲೀಕರಣಕ್ಕೆ ಮುಡಿಪಿಟ್ಟಿದೆ ಎಂದು ಹೇಳಿದರು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಇಒ ವಿಜಯ್‌ಕುಮಾರ್, ಆಡಳಿತಾಧಿಕಾರಿ ಕೊರವರ, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಸದಸ್ಯರಾದ ಅನ್ಸರ್ ಆಲಿ, ರೋಹಿತ್, ತಿಮ್ಮೇಗೌಡ, ಗೌಸ್ ಮೊಹಿಯುದ್ದೀನ್, ಹಸೆನಾರ್, ಕೃಷ್ಣ, ಜಯಂತಿ, ನಾಗೇಶ್ ಅರಸ್, ವಿಂದ್ಯಾ ಉಪಸ್ಥಿತರಿದ್ದರು. 17 ಕೆಸಿಕೆಎಂ 3ಚಿಕ್ಕಮಗಳೂರು ತಾಪಂ ಸಭಾಂಗಣದಲ್ಲಿ ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲೇಶಸ್ವಾಮಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಸಭೆ ನಡೆಯಿತು. ಎಂ.ಸಿ. ಶಿವಾನಂದಸ್ವಾಮಿ, ವಿಜಯಕುಮಾರ್ ಇದ್ದರು.