ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಬಡ ಜನರ ನೋವು- ನಲಿವುಗಳಿಗೆ ಸ್ಪಂದಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರಿಗೆ ಮತ ನೀಡಿ ಗೆಲ್ಲಿಸುವ ಮೂಲಕ ನಿಮ್ಮ ಕಷ್ಟಗಳಿಗೆ ನಿಮ್ಮ ಊರಿನಲ್ಲೇ ಪರಿಹಾರ ಕಂಡುಕೊಳ್ಳಬಹುದು ಎಂದು ಖ್ಯಾತ ಚಲನಚಿತ್ರ ನಿರ್ದೇಶಕ, ನಿರ್ಮಾಪಕ, ನಟ, ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕ ಎಸ್.ನಾರಾಯಣ್ ತಿಳಿಸಿದರು.ಕೊರಟಗೆರೆ ತಾಲೂಕಿನ ತೋವಿನಕೆರೆ, ಕುರಂಕೋಟೆ, ಬುಕ್ಕಾಪಟ್ಟಣ್ಣ, ತುಂಭಾಡಿ, ಅಗ್ರಹಾರ, ವಡ್ಡಗೆರೆ, ಅಕ್ಕಿರಾಂಪುರ ಭೈರೇನಹಳ್ಳಿ, ಹೊಳವನಹಳ್ಳಿ ಸೇರಿ ವಿವಿಧ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರಿಗೆ ಮತಯಾಚಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಬಡವರಿಗೆ ಸ್ಪಂದಿಸುವ ಪಕ್ಷವಾಗಿದೆ, ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ನೀಡಿರುವ 5 ಗ್ಯಾರಂಟಿಗಳು ಇಂದು ಬಡವರ ಕಂಬನಿ ಒರೆಸುತ್ತಿವೆ, ನಾನು ಪ್ರಚಾರಕ್ಕೆ ಹೋದ ಹಲವು ಹಳ್ಳಿಗಳಲ್ಲಿ ಜನರು ನಾವು ಊಟ ಮಾಡುವಾಗ ಕಾಂಗ್ರೆಸ್ ಪಕ್ಷವನ್ನು ನೆನಪಿಸಿಕೊಳ್ಳುತ್ತೇವೆ ಎಂದು ಹೇಳುತ್ತಿರುವುದು ಕಂಡು ಬರುತ್ತಿದೆ, ಈ ಕ್ಷೇತ್ರದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೇತೃತ್ವದಲ್ಲಿ ಅಭಿವೃದ್ಧಿಯಾಗುತ್ತಿದೆ, ಅದೇ ರೀತಿ ತುಮಕೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ,ಮುದ್ದಹನುಮೇಗೌಡರು ಸರಳ, ಸಜ್ಜನಿಕೆಯ ವ್ಯಕ್ತಿಯಾಗಿದ್ದು, ನಿವೃತ್ತ ನ್ಯಾಯಾಧೀಶರಾದ ಅವರು, ಬಡವರು ಕರೆದ ತಕ್ಷಣ ಸಮಸ್ಯೆ ಆಲಿಸುವ ವ್ಯಕ್ತಿಯಾಗಿದ್ದು, ಇಂತಹವರನ್ನು ಲೋಕಸಭಾ ಚುನಾವಣೆಯಲ್ಲಿ ಗೆಲ್ಲಿಸುವುದು ಮತದಾರರ ಕರ್ತವ್ಯ ಎಂದರು,
ಚಲನಚಿತ್ರ ನಟ ಹನುಮಂತೇಗೌಡ ಮಾತನಾಡಿ, ಬಿಜೆಪಿ ಪಕ್ಷವು ಕೇಂದ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ, ಕರ್ನಾಟಕ ರಾಜ್ಯದಲ್ಲಿ ಬರಗಾಲವಿದ್ದರೂ ದ್ವೇಷದ ರಾಜಕಾರಣದ ಮೂಲಕ ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ, ಕಳೆದ ಬಾರಿ ಗೆದ್ದಿದ್ದ ಬಿಜೆಪಿ ಸಂಸದರು ರಾಜ್ಯಕ್ಕೆ ನ್ಯಾಯಕೊಡಿಸಲು ವಿಫಲರಾಗಿದ್ದಾರೆ, ತುಮಕೂರಿನ ಸಂಸದ ಬಸವರಾಜು 5 ವರ್ಷಗಳ ಕಾಲ ಜನ ಸಂಪರ್ಕದಿಂದ ದೂರ ಉಳಿದಿದ್ದು, ಯಾವುದೇ ಅಭಿವೃದ್ಧಿ ಮಾಡಲಿಲ್ಲ, ಇಂತಹ ಸಂಸದರನ್ನು ಗೆಲ್ಲಿಸುವುದಕ್ಕಿಂತ ಸ್ಥಳೀಯರು, ಜನರ ಕಷ್ಟಗಳಿಗೆ ಸ್ಪಂದಿಸುವ ಮುದ್ದಹನುಮೇಗೌಡರಿಗೆ ಮತ ನೀಡುವಂತೆ ಮನವಿ ಮಾಡಿದರು.ಮಾಜಿ ನಗರಸಭಾ ಉಪಾಧ್ಯಕ್ಷ ವಾಲೆಚಂದ್ರಯ್ಯ, ಜಿಪಂ ಮಾಜಿ ಸದಸ್ಯ ಪ್ರಸನ್ನಕುಮಾರ್, ಪಪಂ ಸದಸ್ಯ ಕೆ.ಆರ್.ಓಬಳರಾಜು, ಈಶ್ವರಯ್ಯ, ಚಿತ್ರನಟಿ ಸಿಂಧೂ, ಕಾಂಗ್ರೆಸ್ ನ ವಿವಿಧ ಘಟಕಗಳ ಮುಖಂಡರಾದ ಎಲ್.ರಾಜಣ್ಣ, ಗಟ್ಲಹಳ್ಳಿ ಕುಮಾರ್, ಎಸ್.ಎಲ್.ಎನ್.ಸ್ವಾಮಿ, ಕೆ.ಬಿ.ಲೋಕೇಶ್, ಹನುಮಂತರಾಜು, ಗೊಂದಿಹಳ್ಳಿ ರಂಗರಾಜು, ಕೆ.ವಿ.ಮಂಜುನಾಥ್, ರಂಗರಾಜು, ದೀಪಕ್, ಜಯಸಿಂಹ ಸೇರಿ ಇನ್ನಿತರರು ಹಾಜರಿದ್ದರು.