ಪಂಚ ಗ್ಯಾರಂಟಿಗಳಿಂದ ವಿಪಕ್ಷಗಳಿಗೆ ನಡುಕ

| Published : Apr 06 2025, 01:49 AM IST

ಸಾರಾಂಶ

ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಪ್ರತಿ ವರ್ಷ ನಮ್ಮ ಸರ್ಕಾರ ₹ ೫೧ ಸಾವಿರ ಕೋಟಿ ನೀಡುತ್ತಿದೆ. ಬೇರೆ ಯಾವ ಸರ್ಕಾರಗಳು ಇಂತಹ ಯೋಜನೆ ಜಾರಿಗೊಳಿಸುವುದು ಅಸಾಧ್ಯ.

ಯಲಬುರ್ಗಾ:

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲೇ ಪ್ರಪಥಮ ಬಾರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಜನ ಕಲ್ಯಾಣಕ್ಕಾಗಿ ಜಾರಿಗೊಳಿಸಿರುವುದು ಐತಿಹಾಸಿಕ ದಾಖಲೆ ಆಗಿದೆ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ, ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಬುದ್ಧ-ಬಸವ-ಅಂಬೇಡ್ಕರ್‌ ಭವನದಲ್ಲಿ ಶನಿವಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ತಾಲೂಕು ಆಡಳಿತ ಸಹಯೋಗದಲ್ಲಿ ಆಹಾರ ಇಲಾಖೆ ವತಿಯಿಂದ ಆಯೋಜಿಸಿದ್ದ ಉಚಿತ ೧೦ ಕೆಜಿ ಪಡಿತರ ಅಕ್ಕಿ ವಿತರಣೆ ಹಾಗೂ ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನರಾಮ ಅವರ ೧೧೮ನೇ ಜನ್ಮದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಟಾರ್ಜನೆ ಸಲ್ಲಿಸಿ ಮಾತನಾಡಿದರು.

ಇಂತಹ ಮಹತ್ವಾಂಕ್ಷಿ ಯೋಜನೆಗಳನ್ನು ಯಾವ ರಾಜ್ಯದಲ್ಲೂ ಜಾರಿಗೆ ತಂದ ಉದಾಹರಣೆಗಳಿಲ್ಲ. ಅದು ನಮ್ಮ ರಾಜ್ಯದಲ್ಲಿ ಮಾತ್ರ ಜಾರಿಗೊಳಿಸಲಾಗಿದೆ ಎಂದ ಅವರು, ಯಾವ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸುವುದಿಲ್ಲ. ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಪ್ರತಿ ವರ್ಷ ನಮ್ಮ ಸರ್ಕಾರ ₹ ೫೧ ಸಾವಿರ ಕೋಟಿ ನೀಡುತ್ತಿದೆ. ಬೇರೆ ಯಾವ ಸರ್ಕಾರಗಳು ಇಂತಹ ಯೋಜನೆ ಜಾರಿಗೊಳಿಸುವುದು ಅಸಾಧ್ಯ. ಆದರೆ, ಕೊಟ್ಟ ಮಾತಿನಂತೆ ಈಗಾಗಲೇ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ, ಗೃಹ ಜ್ಯೋತಿ ಯೋಜನೆಯಡಿ ೨೦೦ ಯೂನಿಟ್ ಉಚಿತ ವಿದ್ಯುತ್ ಹಾಗೂ ಗೃಹಲಕ್ಷ್ಮೀ ಯೋಜನೆಯ ಮನೆಯ ಒಬ್ಬ ಯಜಮಾನಿಗೆ ₹ ೨೦೦೦ ಮತ್ತು ಪ್ರತಿ ಪಡಿತರದಾರರ ಕುಟುಂಬಗಳಿಗೆ ೧೦ ಕೆಜಿ ಅಕ್ಕಿ ನೀಡಲಾಗುತ್ತಿದೆ. ಇವುಗಳ ಜಾರಿಯಿಂದ ವಿರೋಧ ಪಕ್ಷಗಳಿಗೆ ನಡುಕು ಶುರುವಾಗಿದೆ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ ಅವರು ಸಮಾನತೆಗಾಗಿ ಹೋರಾಡಿ ಮಹಾನ ನಾಯಕನಾದರೆ, ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ ಅವರು ಜನನಾಯಕರಾಗಿದ್ದರು ಎಂದ ಅವರು, ದೇಶದಲ್ಲಿ ಜಾತಿ ವ್ಯವಸ್ಥೆ ಇನ್ನೂ ತಾಂಡವಾಡುತ್ತಿದ್ದು ದಲಿತರಿಗೆ ಮುಕ್ತವಾಗಿ ಬದುಕುವ ವ್ಯವಸ್ಥೆ ಆಗುತ್ತಿಲ್ಲ. ಅಸ್ಪೃಶ್ಯತೆ ಸಮಾಜದಲ್ಲಿ ಮಾನಸಿಕ ರೋಗವಾಗಿದ್ದು ಇದು ದೂರರಾಗಬೇಕು. ಅಂದಾಗ ದಲಿತರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ರೀನಿವಾಸ ರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಭಯ ತಾಲೂಕು ಸಮಿತಿ ಅಧ್ಯಕ್ಷ ಸುಧೀರ ಕೊರ್ಲಳ್ಳಿ, ಸಂಗಮೇಶ ಗುತ್ತಿ, ತಹಸೀಲ್ದಾರ್‌ಗಳಾದ ಬಸವರಾಜ ತೆನ್ನೆಳ್ಳಿ, ಎಚ್. ಪ್ರಾಣೇಶ, ಸಿಪಿಐ ಮೌನೇಶ್ವರ ಪಾಟೀಲ, ಎ.ಜಿ. ಭಾವಿಮನಿ, ಶಿರಸ್ತೇದಾರ ಮಲ್ಲಯ್ಯ ಶಾಸ್ತ್ರೀಮಠ, ತಾಲೂಕು ನ್ಯಾಯಬೆಲೆ ಅಂಗಡಿಗಳ ಅಧ್ಯಕ್ಷ ಛತ್ರಪ್ಪ ಛಲವಾದಿ ಸೇರಿದಂತೆ ಮತ್ತಿತರರು ಇದ್ದರು.