ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ 3 ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕೇರಳ- ಕರ್ನಾಟಕದಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಐವರು ಕುಖ್ಯಾತ ಅಂತಾರಾಜ್ಯ ಕ್ರಿಮಿನಲ್‌ಗಳನ್ನು ದಸ್ತಗಿರಿ ಮಾಡಿ, 3 ಪಿಸ್ತೂಲ್, 6 ಸಜೀವ ಮದ್ದುಗುಂಡುಗಳು ಹಾಗೂ 12.895 ಕೆಜಿ ಗಾಂಜಾ, 3 ಕಾರು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಕಾಸರಗೋಡು ಜಿಲ್ಲೆ ಬೀಮನಡಿ ಗ್ರಾಮದ ನೌಫಲ್ (38), ಪೈವಳಿಕೆಯ ಮನ್ಸೂರ್ (36), ಕಾಸರಗೋಡು ಬಂದ್ಯೋಡ್ ನಿವಾಸಿ ಅಬ್ದುಲ್ ಲತೀಫ್ ಅಲಿಯಾಸ್ ತೋಕು ಲತೀಫ್ (29), ಕಡಂಬಾರ್ ಅಂಚೆಯ ಮೊಹಮ್ಮದ್ ಅನ್ಸರ್ (27) ಹಾಗೂ ಮೊಹಮ್ಮದ್ ಸಾಲಿ (31) ಎಂಬವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣ-1:ಮಾ.12ರಂದು ನಾಟೆಕಲ್ ಪರಿಸರದಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ ನೌಫಲ್ ಹಾಗೂ ಮನ್ಸೂರ್ ಎಂಬವರನ್ನು ವಶಕ್ಕೆ ಪಡೆದಾಗ 2 ಪಿಸ್ತೂಲ್, 4 ಸಜೀವ ಮದ್ದುಗುಂಡು ಪತ್ತೆಯಾಗಿದೆ. ಅವರಿಂದ 2 ಮೊಬೈಲ್ ಪೋನು, ಸ್ಕಾರ್ಪಿಯೋ ಕಾರು ಸೇರಿದಂತೆ ವಶಪಡಿಸಿಕೊಂಡ ಸೊತ್ತಿನ ಅಂದಾಜು ಮೌಲ್ಯ 14,60,000 ರು. ಆಗಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ನೌಫಲ್ ವಿರುದ್ಧ ಈ ಹಿಂದೆ ಕೇರಳ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಸಾಗಾಟ/ಮಾರಾಟಕ್ಕೆ ಸಂಬಂಧಿಸಿದಂತೆ ಒಟ್ಟು 6 ಪ್ರಕರಣಗಳು ದಾಖಲಾಗಿವೆ. ಇನ್ನೋರ್ವ ಆರೋಪಿ ಮನ್ಸೂರ್ ವಿರುದ್ಧ ಕೇರಳದ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣ ಸೇರಿದಂತೆ ಒಟ್ಟು 4 ಪ್ರಕರಣ ದಾಖಲಾಗಿವೆ.
ಪ್ರಕರಣ-2:ಮಾರ್ಚ್ 12ರಂದು ಕೇರಳದಿಂದ ಮಂಗಳೂರು ನಗರಕ್ಕೆ ಕಾರಿನಲ್ಲಿ ಗಾಂಜಾ ಸಾಗಾಟ ಮಾಡಿ ಮಾರಾಟಕ್ಕೆ ಯತ್ನಿಸುತ್ತಿದ್ದ ಅಬ್ದುಲ್ ಲತೀಫ್ ಅಲಿಯಾಸ್ ತೋಕು ಲತೀಫ್‌ನನ್ನು ಬಂಧಿಸಲಾಗಿದೆ. ಈತನಿಂದ 12.895 ಕೆಜಿ ಗಾಂಜಾ, ಮೊಬೈಲ್ ಫೋನ್ ಹಾಗೂ ಕಾರು ಸೇರಿದಂತೆ ಒಟ್ಟು 15,70,000 ರು. ಮೌಲ್ಯದ ಸೊತ್ತು ವಶಪಡಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾದ ಆರೋಪಿಗೆ ಪಿಸ್ತೂಲ್ ನೀಡಿದ ಆರೋಪಿ ಈತ. ಅಲ್ಲದೆ 2024ರಲ್ಲಿ ಉಳ್ಳಾಲದಲ್ಲಿ ದಾಖಲಾದ ಅಕ್ರಮ ಪಿಸ್ತೂಲ್ ಹೊಂದಿದ್ದ ಆರೋಪಿ ಅಸ್ಟರ್ ಎಂಬಾತನಿಗೂ ಕೂಡ ಈತನೇ ಪಿಸ್ತೂಲ್ ಮಾರಾಟ ಮಾಡಿದ್ದು, ತಲೆಮರೆಸಿಕೊಂಡಿದ್ದ. ಅಲ್ಲದೆ, ಕೇರಳ ಹಾಗೂ ಕರ್ನಾಟಕದಲ್ಲಿ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಹಲ್ಲೆ, ದರೋಡೆ, ಕೊಲೆಯತ್ನ, ಕೊಲೆ ಪ್ರಕರಣ ಸೇರಿದಂತೆ ಒಟ್ಟು 13 ಪ್ರಕರಣಗಳು ಈತನ ವಿರುದ್ಧ ದಾಖಲಾಗಿವೆ.ಪ್ರಕರಣ-3:
ಮಾ.13ರಂದು ತಲಪಾಡಿ ಪರಿಸರದಲ್ಲಿ ಕಾರಿನಲ್ಲಿ ಸಂಚು ರೂಪಿಸಿ ತಿರುಗಾಡಿಕೊಂಡಿದ್ದ ಮೊಹಮ್ಮದ್ ಅನ್ಸರ್ (27), ಮೊಹಮ್ಮದ್ ಸಾಲಿ ಎಂಬವರನ್ನು ವಶಕ್ಕೆ ಪಡೆದ ಪೊಲೀಸರು, ಒಂದು ಪಿಸ್ತೂಲ್, 2 ಸಜೀವ ಮದ್ದುಗುಂಡು, 2 ಮೊಬೈಲ್ ಫೋನು ಹಾಗೂ ಕಾರು ಸೇರಿ 10,20,000 ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿಗಳ ಪೈಕಿ ಮೊಹಮ್ಮದ್ ಅಸ್ಲರ್ ವಿರುದ್ಧ ಹಲ್ಲೆ, ದರೋಡೆ, ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟಕ್ಕೆ ಸಂಬಂಧಪಟ್ಟಂತೆ ಕೇರಳ ಹಾಗೂ ಕರ್ನಾಟಕ ರಾಜ್ಯದಲ್ಲಿ ಒಟ್ಟು 17 ಪ್ರಕರಣಗಳು ದಾಖಲಾಗಿವೆ. ಇನ್ನೋರ್ವ ಆರೋಪಿ ಮೊಹಮ್ಮದ್ ಸಾಲಿ ವಿರುದ್ಧ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ, ಹಲ್ಲೆ, ಕೊಲೆ ಯತ್ನ, ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಪಟ್ಟಂತೆ ಒಟ್ಟು 10 ಪ್ರಕರಣಗಳು ದಾಖಲಾಗಿವೆ.
ಈ ಮೂರೂ ಪ್ರಕರಣಗಳಲ್ಲಿ ಇನ್ನೂ ಹಲವಾರು ಮಂದಿ ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದರು.ಡಿಸಿಪಿಗಳಾದ ಸಿದ್ಧಾರ್ಥ ಗೋಯಲ್, ಕೆ. ರವಿಶಂಕರ್ ಇದ್ದರು.