ಸಾರಾಂಶ
ಕನ್ನಡಪ್ರಭ ವಾರ್ತೆ ಸಂಕೇಶ್ವರ
ಇಲ್ಲಿನ ಹಿರಣ್ಯಕೇಶಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ನೂತನ ನಿಯಮಾವಳಿಯಂತೆ ಐವರು ನಿರ್ದೇಶಕರನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕ ಮಾಜಿ ಸಂಸದ ಅಣ್ಣಾಸಾಹೇಬ ಜೋಲ್ಲೆ ಹೇಳಿದರು.ಈ ಕುರಿತು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆಯ ನಿಯಮಗಳಲ್ಲಿ ಅಮೆಂಡಮೆಂಟ್ ಮಾಡಲಾಗಿದ್ದು, 15 ನಿರ್ದೇಶಕರನ್ನು ಹೊಂದಿದ್ದು, ಅದರಲ್ಲಿ ಒಬ್ಬ ನಿರ್ದೇಶಕರು ನಿಧನ ಹೊಂದಿದ್ದ ಸ್ಥಾನದಲ್ಲಿ ಒಬ್ಬರನ್ನು ಸೇರಿಸಿಕೊಂಡಿದ್ದು, ಇನ್ನುಳಿದ 4 ಜನರಲ್ಲಿ 1 ಸಾಮಾನ್ಯ ಮಹಿಳೆ, 1 ಪರಿಶಿಷ್ಟ ಜಾತಿ, 2 ಮಹಿಳೆಯನ್ನು ಆಯ್ಕೆ ಮಾಡಲಾಗಿದೆ ಎಂದರು. ನೂತನ ನಿರ್ದೇಶಕರನ್ನಾಗಿ ದಿ. ಅಪ್ಪಣ್ಣಗೌಡ ಪಾಟೀಲರ ಮೊಮ್ಮಗ ನಿವೃತ್ತ ಸಿವಿಲ್ ಎಂಜಿನಿಯರ್ ಮಲ್ಲಿಕಾರ್ಜುನ ಬಾಬಾಗೌಡಾ ಪಾಟೀಲ, ಅಶೋಕ ಬಸಪ್ಪ ಚಂದಪ್ಪಗೋಳ್ (ಮಾವನೂರ), ಸುರೇಶ ಸಿದ್ರಾಮ ರಾಯಮಾನೆ (ಎಸ್‌ಸಿ) ಮಹಿಳಾ ಭಾಗದಿಂದ ಶಾರದಾ ಸುರೇಶ ಪಾಟೀಲ (ಹರಗಾಪೂರ) ಭಾರತಿ ಮಹಾನಿಂಗ ಹಂಜಿ (ಕಬ್ಬೂರ)ರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಂಗಾಮಿನಲ್ಲಿ ಕೇವಲ 90 ದಿನಗಳು ಮಾತ್ರ ಕಾರ್ಖಾನೆಯು ನಡೆದಿದ್ದು, ಮುಂಬರುವ 2025-26 ನೇ ಸಾಲಿನಲ್ಲಿ 150 ದಿನಗಳ ವರೆಗೆ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಗುರಿ ಹೊಂದಿದ್ದೇವೆ. ಸಕ್ಕರೆ ಕಾರ್ಖಾನೆಯ ಪ್ರತಿ ದಿನ 10000 ಮೆಟ್ರಿಕ್ ಟನ್ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿರುತ್ತದೆ. ಆದರೆ ಈಗ ಪ್ರತಿದಿನ 9000 ಮೆಟ್ರಿಕ್ ಟನ್ ಕಬ್ಬು ನುರಿಸಲಾಗುತ್ತಿದೆ ಎಂದು ಹೇಳಿದರು.ಸಹಕಾರಿ ರತ್ನ ದಿ.ಅಪ್ಪಣ್ಣಗೌಡ ಪಾಟೀಲ, ದಿ.ಬಸನಗೌಡಾ ಪಾಟೀಲ ಮತ್ತು ದಿ.ವಿಶ್ವನಾಥ ಕತ್ತಿ ಹಳೆಯ ಸಂಚಾಲಕ ಮಂಡಳಿ ಕನಸನ್ನು ಈಡೇರಿಸಲಾಗುವುದು. ಕಬ್ಬು ಪೂರೈಸಿದ ರೈತಬಾಂಧವರಿಗೆ ಪ್ರತಿ ಟನ್‌ಗೆ ಘೋಷಣೆ ಮಾಡಿದ ದರವನ್ನು ತಿಂಗಳಲ್ಲಿ 2 ಕಂತುಗಳಲ್ಲಿ ರೈತರ ಖಾತೆಗಳಿಗೆ ಹಣ ಜಮೆ ಮಾಡಲಾಗುವುದು. ಕಾರ್ಮಿಕ ಆರೋಗ್ಯವಿಮೆ 2 ಲಕ್ಷ ಮಾಡಲಾಗುವುದು. ಬರುವ ಏಪ್ರಿಲ್ ತಿಂಗಳಲ್ಲಿ ಕಾರ್ಖಾನೆಯ ರೈತರ ಬಿಲ್ಲು, ಮತ್ತು ಕಬ್ಬು ಸಾಗಾಣಿಕೆ ಗುತ್ತಿಗೆದಾರರ ಬಿಲ್ಲುಗಳು ಸುಮಾರು ₹47 ಕೋಟಿ ಹಣವನ್ನು ಬಿಡುಗಡೆ ಮಾಡಲಾಗುವುದು ಮತ್ತು ಸಾಲ ಪಡೆದುಕೊಂಡಿರುವ ಬ್ಯಾಂಕಿನ ಬಡ್ಡಿ ಕಂತು ₹50 ಕೋಟಿ ಮರುಪಾವತಿ ಮಾಡಲಾಗುವುದೆಂದು ಜೊಲ್ಲೆಯವರು ತಿಳಿಸಿದರು.
ಕಾರ್ಖಾನೆಯ ಸಾಲದ ಹೊರೆಯನ್ನು ಹಂತಹಂತವಾಗಿ ಮರುಪಾವತಿಸಿ ಕಾರ್ಖಾನೆಯನ್ನು ಸಾಲದಿಂದ ಮುಕ್ತಗೊಳಿಸಲಾಗುದೆಂದು ಸಕ್ಕರೆ ಕಾರ್ಖಾನೆಯ ಎಲ್ಲ ಸಂಚಾಲಕರು ಜೊಲ್ಲೆಯವರ ಮಾರ್ಗದರ್ಶನದಲ್ಲಿ ಒಕ್ಕೊರಲಿನಿಂದ ಹೇಳಿದರು. ಇದೇ ವೇಳೆ ಕಾರ್ಖಾನೆಯ ಹೊಸದಾಗಿ ಚುಕ್ಕಾಣಿಯನ್ನು ವಹಿಸಿಕೊಂಡಿರುವ ನಿರ್ದೇಶಕರನ್ನೂ ಅಣ್ಣಾಸಾಹೇಬ ಜೊಲ್ಲೆ ಮತ್ತು ಕಾರ್ಖಾನೆಯ ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರೆಲ್ಲರನ್ನೂ ಸತ್ಕರಿಸಿದರು.