ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕನ್ನಡಪರ, ರೈತಪರ ಹೋರಾಟಗಳಿಗೆ ಶಕ್ತಿ ತುಂಬಿದ, ರಾಜಕೀಯ ಪಕ್ಷಗಳು ಮತ್ತು ನಾಯಕರಿಗೆ ರಾಜಕೀಯ ಪುನರ್ಜನ್ಮ ನೀಡಿದ ಮಧ್ಯ ಕರ್ನಾಟಕದ ಪುಣ್ಯಭೂಮಿ ಎನಿಸಿರುವ ದಾವಣಗೆರೆ ನೆಲದಿಂದಲೇ ಪಂಚ ಪೀಠಾಧೀಶರು ಒಗ್ಗಟ್ಟಿನ ಮಂತ್ರ ಸಾರಿದ್ದಾರೆ. ಆ ಮೂಲಕ ವೀರಶೈವ, ಲಿಂಗಾಯತ ಬೇರಲ್ಲ, ಎರಡೂ ಒಂದೇ ಎಂಬ ಸಂದೇಶ ಇಡೀ ಸಮಾಜಕ್ಕೆ ರವಾನಿಸಿದ್ದಾರೆ.ನಗರದ ಶ್ರೀ ಅಭಿನವ ರೇಣುಕಾ ಮಂದಿರದಲ್ಲಿ ಸೋಮವಾರ ಶ್ರೀ ಜಗದ್ಗುರು ಪಂಚ ಪೀಠಾಧೀಶರ ಸಾನ್ನಿಧ್ಯದ ವೀರಶೈವ ಪೀಠಾಚಾರ್ಯರು ಹಾಗೂ ಶಿವಾಚಾರ್ಯರ ಶೃಂಗ ಸಮ್ಮೇಳನದಲ್ಲಿ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ ಶೆಟ್ಟರ್ ಸೇರಿದಂತೆ ಸಾವಿರಾರು ಶಿವಾಚಾರ್ಯರು, ಸಮಾಜ ಬಾಂಧವರು, ಮುಖಂಡರು, ಜನಪ್ರತಿನಿಧಿಗಳ ಸಮಕ್ಷಮ ಪಂಚಪೀಠಾಧೀಶರು ಒಗ್ಗಟ್ಟಿನ ಮಂತ್ರದ ಜೊತೆಗೆ ಸಮಾಜದ ಹಿತವೇ ತಮ್ಮ ಹಾಗೂ ಶ್ರೀಪೀಠದ ಹಿತವೆಂಬ ಸಂದೇಶ ನೀಡಿದರು.
ಸಮಾಜಕ್ಕೆ ಸಂತಸ-ಡಾ.ಶಾಮನೂರು ಶಿವಶಂಕರಪ್ಪ:ಶೃಂಗ ಸಮ್ಮೇಳನ ಉದ್ಘಾಟಿಸಿದ ಅಭಾವೀಮ ರಾಷ್ಟ್ರೀಯ ಅಧ್ಯಕ್ಷ, ಸಮಾಜದ ಹಿರಿಯ ನಾಯಕ ಡಾ.ಶಾಮನೂರು ಶಿವಶಂಕರಪ್ಪ, ಮೇ 2ರಂದು ತಮ್ಮ ಮನೆಯಲ್ಲಿ ರಂಭಾಪುರಿ ಸ್ವಾಮೀಜಿ ಅವರಿಗೆ ಪಾದಪೂಜೆ ಆಯೋಜಿಸಿದ್ದೆವು. ಆ ವೇಳೆ ಪಂಚ ಪೀಠಾಧೀಶರು ಒಂದಾಗುವ ಮೂಲಕ ಒಳಪಂಗಡಗಳ ಹೆಸರಿನಲ್ಲಿ ಛಿದ್ರವಾಗಿರುವ ಸಮಾಜವನ್ನು ಒಗ್ಗೂಡಿಸಬೇಕು, ಗುರು-ವಿರಕ್ತರೂ ಒಂದಾಗಬೇಕೆಂಬ ಮನವಿಗೆ ಓಗೊಟ್ಟು, ಇಂದು ಪಂಚ ಪೀಠಾಧೀಶರು ಸಮಾಜಕ್ಕಾಗಿ, ಸಮಸ್ತ ಭಕ್ತರಿಗಾಗಿ ಒಂದಾಗಿರುವುದು ತಮಗೂ ಸೇರಿದಂತೆ ಇಡೀ ಸಮಾಜಕ್ಕೆ ಸಂತಸ ಮೂಡಿಸಿದೆ ಎಂದರು.
ಮುಂಬರುವ ಜಾತಿ ಜನಗಣತಿ ವೇಳೆ ಸಮಾಜ ಬಾಂಧವರು ಏನು ಬರೆಸಬೇಕು, ಧರ್ಮದ ಕಾಲಂ, ಜಾಲಿ ಕಾಲಂನಲ್ಲಿ ಏನು ಬರೆಸಬೇಕೆಂಬ ಬಗ್ಗೆ ಸ್ವಾಮೀಜಿಗಳ ಜೊತೆಗೆ ಚರ್ಚಿಸಿ, ಮಹಾಸಭಾ ಸೂಕ್ತ ನಿರ್ಣಯ ಕೈಗೊಳ್ಳುತ್ತದೆ. 16 ವರ್ಷಗಳ ನಂತರ ಪಂಚ ಪೀಠಾಧೀಶರು ದಾವಣಗೆರೆಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ನಿಜಕ್ಕೂ ಐತಿಹಾಸಿಕ ಕ್ಷಣವಾಗಿದೆ. ಕೇದಾರ ಜಗದ್ಗುರುಗಳು ಬಿಡುವಿಲ್ಲದ ಒತ್ತಡದ ಕಾರ್ಯಗಳ ಮಧ್ಯೆಯೂ ಇಲ್ಲಿಗೆ ಬಂದು, ಸಮ್ಮೇಳನದಲ್ಲಿ ಸಮಾಜದ ಪರ ತಾವೆಲ್ಲರೂ ಇರುವ ಸಂದೇಶ ನೀಡಿದ್ದಾರೆ ಎಂದು ತಿಳಿಸಿದರು.ದೊಡ್ಡ ಅಪಾಯವಿತ್ತು- ಯಡಿಯೂರಪ್ಪ:
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, 15-16 ವರ್ಷದ ನಂತರ ಪಂಚ ಪೀಠಗಳು ಒಟ್ಟಾಗಿರುವುದನ್ನು ನೋಡುವ ಸೌಭಾಗ್ಯ ನಮ್ಮದಾಗಿದೆ. ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ರಾಜಕೀಯ ಸವಾಲಿನ, ತಂತ್ರ-ಕುತಂತ್ರದ ಮೂಲಕ ವೀರಶೈವ ಲಿಂಗಾಯತ ಸಮಾಜವನ್ನು ಒಡೆಯುವ ಕೆಲಸಕ್ಕೆ ಮುಂದಾದಾಗ ಸಮಾಜದ ಪರವಾಗಿ ಗಟ್ಟಿಧ್ವನಿಯಾಗಿ ನಿಂತವರು ಅಭಾವೀಲಿಂಮ ರಾಷ್ಟ್ರೀಯ ಅಧ್ಯಕ್ಷ ಡಾ.ಶಾಮನೂರು ಶಿವಶಂಕರಪ್ಪ. ಒಳಜಾತಿ ಹೆಸರಿನಲ್ಲಿ ಇಡೀ ಸಮಾಜವನ್ನು ಛಿದ್ರಗೊಳಿಸುವ ಕೆಲಸ ಮಾಡದೇ ಇದ್ದಿದ್ದರೆ ಸಮಾಜಕ್ಕೆ ದೊಡ್ಡ ಅಪಾಯವಿತ್ತು ಎಂದು ಹೇಳಿದರು.ಸಮಾಜವನ್ನು ಒಡೆಯುವವರ ಬಗ್ಗೆ ಜಾಗ್ರತೆ ವಹಿಸಬೇಕಾಗಿದೆ. ವೀರಶೈವ ಲಿಂಗಾಯಕ್ಕೆ ಮೀಸಲಾತಿ, ಶಿಕ್ಷಣ ಇತರೆ ಅನುಕೂಲಕ್ಕಾಗಿ ಸಂಘಟನೆ ಅತ್ಯಗತ್ಯವಿದೆ. ಇಡೀ ಸಮಾಜ ಒಗ್ಗಟ್ಚಾಗಿದ್ದರೆ ಎಲ್ಲ ಸವಾಲುಗಳನ್ನು ಎದುರಿಸಬಹುದು. ಯಾವುದೇ ಪಕ್ಷದಲ್ಲೇ ಇದ್ದರೂ ಸಮಾಜದ ಹಿತಕಾಯುವ ಕೆಲಸವನ್ನು ಸಮಾಜದ ಮುಖಂಡರು ಮಾಡಬೇಕು. ಪಂಚ ಪೀಠಾಧೀಶರ ಇಂದಿನ ಶೃಂಗ ಸಮ್ಮೇಳನ ಇಡೀ ಸಮಾಜಕ್ಕೆ ಹೊಸ ಸಂದೇಶ ನೀಡಿದ್ದು, ಸಂಘಟನೆಗೂ ಇದು ಶಕ್ತಿ ತುಂಬಿದೆ ಎಂದು ಬಿಎಸ್‌ವೈ ಮೆಚ್ಚುಗೆ ವ್ಯಕ್ತಪಡಿಸಿದರು.
ಹಾನಗಲ್ ಕುಮಾರಸ್ವಾಮಿಗಳ ಕನಸು ಸಾಕಾರ- ಜಗದೀಶ ಶೆಟ್ಟರ್:ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಮಾತನಾಡಿ, ಸಮಾಜದ ಕೋಟ್ಯಂತರ ಜನರಿಗೆ ಇಂದಿನ ಶೃಂಗ ಸಮ್ಮೇಳನ ಉತ್ಸಾಹ ಮೂಡಿಸಿದೆ. ದಾವಣಗೆರೆಯು ಪಂಚ ಪೀಠಾಧೀಶರು ಒಂದಾಗಲು ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಗುರು-ವಿರಕ್ತರು ಸಹ ಇಲ್ಲಿಯೇ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲೇ ಒಂದಾಗಲಿ. 1904ರಲ್ಲಿ ಅಭಾವೀಮ ಸ್ಥಾಪಿಸುವ ಮೂಲಕ ಹಾನಗಲ್ ಶ್ರೀ ಕುಮಾರಸ್ವಾಮಿಗಳು ಕಂಡಿದ್ದ ಕನಸು ಸಾಕಾರಗೊಳಿಸುವ ಕೆಲಸ ಇಲ್ಲಿ ಆಗಿದೆ. ಮಹಾಸಭಾ ಶಾಮನೂರು ಮತ್ತು ಎಸ್.ಎಸ್. ಮಲ್ಲಿಕಾರ್ಜುನರ ನೇತ್ವತ್ವದಲ್ಲಿ ಐತಿಹಾಸಿಕ ಕಾರ್ಯಕ್ರಮ ಸಂಘಟಿಸಿ, ಸಮಾಜವನ್ನು ಬೆಸೆಯುವ ಕೆಲಸ ಇಲ್ಲಿ ಮಾಡಿದೆ ಎಂದು ತಿಳಿಸಿದರು.
ಸಮಾಜ ಕ್ಲಿಷ್ಟಕರ ಪರಿಸ್ಥಿತಿಯಲ್ಲಿತ್ತು. ಈ ಹಿಂದೆ ರಾಜ್ಯ ಸರ್ಕಾರ ಕೈಗೊಂಡಿದ್ದ ಜಾತಿಗಣತಿಯಲ್ಲಿ ಕೇವಲ 60-70 ಲಕ್ಷ ವೀರಶೈವರನ್ನು ತೋರಿಸಿತ್ತು. ಆದರೆ, 14 ವರ್ಷಗಳ ಹಿಂದೆ ಮಹಾರಾಷ್ಟ್ರದ ಚುನಾವಣೆಗೆ ಬಿ.ಎಸ್.ಯಡಿಯೂರಪ್ಪ, ತಾವು ಇತರೇ ನಾಯಕರು ಹೋದಾಗ ಅಲ್ಲಿ 1.5 ಲಕ್ಷ ವೀರಶೈವ ಲಿಂಗಾಯತರಿದ್ದರು. ಅಲ್ಲಿ ಅಷ್ಟು ಜನ ಇರಬೇಕಾದರೆ, ನಮ್ಮ ರಾಜ್ಯದಲ್ಲಿ 60 ಲಕ್ಷ ಇದೆಯೆಂದು ಗಣತಿಯಲ್ಲಿ ತೋರಿಸುತ್ತಾರೆಂದರೆ ಇಡೀ ಸಮಾಜವೇ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಇಂದಿನ ಶೃಂಗ ಸಮ್ಮೇಳನ ವೀರಶೈವ ಲಿಂಗಾಯತ ಧರ್ಮಕ್ಕೆ ಹೊಸ ದಿಕ್ಸೂಚಿಯಾಗಿದೆ. ಧರ್ಮವನ್ನು ನಾಶಪಡಿಸುವ ಶಕ್ತಿ ಯಾವ ಕಾಲದಲ್ಲೂ ಯಾರಿಗೂ ಇಲ್ಲ. ವೀರಶೈವ ಲಿಂಗಾಯತ ಜಾತಿ ಅಲ್ಲ, ಇದೊಂದು ಧರ್ಮ ಎಂಬುದನ್ನೂ ನಾವ್ಯಾರೂ ಮರೆಯಬಾರದು ಎಂದು ಹೇಳಿದರು.ರಂಭಾಪುರಿ ಶ್ರೀ ವೀರ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಉಜ್ಜಯಿನಿ ಶ್ರೀ ಸಿದ್ಧಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀಶೈಲ ಶ್ರೀ ಚನ್ನಸಿದ್ಧರಾಮ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಕೇದಾರ ಶ್ರೀ ಭೀಮಾಶಂಕರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಶ್ರೀ ಚಂದ್ರಶೇಖರ ರಾಜದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಎಡೆಯೂರು ಶ್ರೀ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಎಮ್ಮಿಗನೂರು ಶ್ರೀ ವಾಮದೇವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಇತರರು ಇದ್ದರು.
ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಹುನಗುಂದ ಶಾಸಕ ವಿಜಯಾನಂದ ಕಾಶೆಪ್ಪನವರ, ಮಹಾಸಭಾ ರಾಜ್ಯಾಧ್ಯಕ್ಷ, ನಿವೃತ್ತ ಡಿಜಿಪಿ ಶಂಕರ ಬಿದರಿ, ರಾಷ್ಟ್ರೀಯ ಉಪಾಧ್ಯಕ್ಷರಾದ ಅಥಣಿ ಎಸ್.ವೀರಣ್ಣ, ಅಣಬೇರು ರಾಜಣ್ಣ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಡಾಳ ಮಲ್ಲಿಕಾರ್ಜುನ, ಬಿ.ಎಂ. ವಾಗೀಶ ಸ್ವಾಮಿ, ಆರ್.ಟಿ. ಪ್ರಶಾಂತ, ಕೆ.ಎಂ.ಸುರೇಶ, ಉಳವಯ್ಯ, ಶಾಂತಾ, ಆನಂದ ಇತರರು ಇದ್ದರು.